ಮಡಿಕೇರಿ, ಅ. ೫: ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ವಿಮಾ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.

ನಗರದ ಮಹದೇವಪೇಟೆಯಲ್ಲಿರುವ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ (ಕೆಜಿಐಡಿ)ಯ ಜಿಲ್ಲಾ ವಿಮಾ ಅಧಿಕಾರಿ ಹೇಮಕುಮಾರ್ ಎಂಬವರೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಮಂಗಳಾದೇವಿನಗರದ ನಿವಾಸಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದೀಪ್ ರೈ ಎಂಬವರು ಇತ್ತೀಚೆಗೆ ನಿಧನರಾಗಿದ್ದು, ಅವರ ಹೆಸರಿನಲ್ಲಿ ಕೆಜಿಐಡಿಯಲ್ಲಿದ್ದ ಮೂರು ಪಾಲಿಸಿಗಳ ಹಣವನ್ನು ಪಡೆದುಕೊಳ್ಳಲು ಅವರ ಪತ್ನಿ ರೋಹಿಣಿ ಎಂಬವರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗೆ ಸಂಬAಧಿಸಿದAತೆ ಪಾಲಿಸಿ ಹಣವನ್ನು ಮಂಜೂರು ಮಾಡಲು ಹಲವು ತೊಡಕುಗಳಿವೆ ಎಂದು ಹೇಳಿ ೪೦ ಸಾವಿರ ಲಂಚ ನೀಡುವಂತೆ ಹೇಮಕುಮಾರ್ ಬೇಡಿಕೆಯಿಟ್ಟಿದ್ದರು. ತನ್ನ ಬಳಿ ಅಷ್ಟು ಹಣವಿಲ್ಲ ಎಂದು ರೋಹಿಣಿ ಅವರು ಹೇಳಿಕೊಂಡ ಸಂದರ್ಭ ಹೇಮಕುಮಾರ್ ಮೊದಲಿಗೆ ರೂ. ೨ ಸಾವಿರ ಹಣವನ್ನು ಪಡೆದಿದ್ದರು. ಬಳಿಕ ಪಾಲಿಸಿ ಹಣ ಮಂಜೂರಾದ ಬಳಿಕ ರೂ. ೨೫ ಸಾವಿರ ಹಣ ಲಂಚ ನೀಡಲೇಬೇಕೆಂದು ಹೇಳಿದ್ದರು. ಅದಾದ ಬಳಿಕ ಪಾಲಿಸಿ ಹಣ ಮಂಜೂರಾಗಿದ್ದು, ಇಂದು ದೂರವಾಣಿ ಕರೆ ಮಾಡಿ ರೂ. ೨೫ ಸಾವಿರ ನೀಡುವಂತೆ ಹೇಮಕುಮಾರ್ ಕೇಳಿದ್ದರು. ಈ ಹಿನ್ನೆಲೆಯಲ್ಲಿ ರೋಹಿಣಿ ಲೋಕಾಯುಕ್ಕೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಇಂದು ರೋಹಿಣಿ ಅವರಿಂದ ೨೫ ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಧಾಳಿ ನಡೆಸಿ ಹೇಮಕುಮಾರ್ ಅವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.