ಮಡಿಕೇರಿ, ಅ. ೪: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿನಿಧಿಗಳಲ್ಲಿ ಒಂದಾದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಗೆ ಡಾ. ಕೆ.ಪಿ. ಲಲಿತ (ರಶ್ಮಿ ನಂಜಪ್ಪ ಕಳ್ಳಿಚಂಡ) ಅವರು ರಚಿಸಿರುವ ‘ಕೊಡಗಿನ ಜಾನಪದ ಕಥೆಗಳು’ ಕೃತಿ ಆಯ್ಕೆಯಾಗಿದೆ.
ಕೊಡಗಿನ ಮಹಿಳಾ ಲೇಖಕಿಯರು ಪ್ರಕಟಿಸಿರುವ ಉತ್ತಮ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಉದ್ದೇಶದಿಂದ ಗೌರಮ್ಮ ಅವರ ಪುತ್ರ ಬಿ.ಜಿ. ವಸಂತ ಅವರು ಈ ದತ್ತಿಯನ್ನು ಸ್ಥಾಪಿಸಿದ್ದಾರೆ. ಈವರೆಗೆ ಜಿಲ್ಲೆಯ ೨೩ ಲೇಖಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ೨೦೨೬-೨೭ನೇ ಸಾಲಿನ ಪ್ರಶಸ್ತಿಗೆ ಜಿಲ್ಲೆಯ ಒಂಬತ್ತು ಲೇಖಕಿಯರು ತಮ್ಮ ಕೃತಿಗಳನ್ನು ಸಲ್ಲಿಸಿದ್ದರು. ಜಿಲ್ಲೆಯ ಮೂವರು ಹಿರಿಯ ಸಾಹಿತಿಗಳನ್ನು ತೀರ್ಪುಗಾರರನ್ನಾಗಿ ನೇಮಿಸಲಾಗಿದ್ದು, ಅವರು ಎಲ್ಲ ಕೃತಿಗಳನ್ನು ಪರಿಶೀಲಿಸಿ ಡಾ. ಕೆ.ಪಿ. ಲಲಿತ ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.