ಮಡಿಕೇರಿ, ಅ. ೪: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿ ಸ್ಥಾಪಿಸಿರುವ ಪ್ರತಿಷ್ಠಿತ ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಾಹಿತಿ ಮತ್ತು ವಕೀಲರಾದ ಬಾಳೆಯಡ ಕಿಶನ್ ಪೂವಯ್ಯ ರವರು ರಚಿಸಿದ “ರಾಜಕೀಯ ಮತ್ತು ಪ್ರಕೃತಿ” ಕೃತಿಯು ಆಯ್ಕೆಯಾಗಿದೆ. ಜಿಲ್ಲೆಯ ದೈನಿಕ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಬಿ.ಎಸ್ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ ತೃತೀಯ ಪ್ರಶಸ್ತಿ ಇದಾಗಿದೆ.
ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಪುರುಷ ಬರಹಗಾರರು ಸಲ್ಲಿಸಿದ್ದ ಕೃತಿಗಳನ್ನು ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಪ್ರತ್ಯೇಕವಾಗಿ ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟುಗೂಡಿಸಿ ಅತಿ ಹೆಚ್ಚು ಅಂಕವನ್ನು ಲೇಖಕರಾದ ಬಾಳೆಯಡ ಕಿಶನ್ ಪೂವಯ್ಯ ರವರ “ರಾಜಕೀಯ ಮತ್ತು ಪ್ರಕೃತಿ” ಕೃತಿ ಪಡೆದುಕೊಂಡಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ತಿಳಿಸಿದ್ದಾರೆ.
ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿಯ ಪ್ರಥಮ ಪ್ರಶಸ್ತಿಯನ್ನು ಜಿಲ್ಲೆಯ ಹಿರಿಯ ಸಾಹಿತಿಗಳಾದ ನಾಗೇಶ್ ಕಾಲೂರು ರವರು ತಮ್ಮ “ಶ್ರೀ ಕಾವೇರಿ ದರ್ಶನಂ - ಸಮಗ್ರ ಕಾವೇರಿ” ಕೃತಿಗೆ, ದ್ವಿತೀಯ ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳು ವೈದ್ಯರು ಆದ ಡಾ ಕೆ.ಬಿ. ಸೂರ್ಯಕುಮಾರ್ ರವರು “ವೈದ್ಯ ಕಂಡ ವಿಸ್ಮಯ” ಕೃತಿಗೆ ಪಡೆದುಕೊಂಡಿದ್ದರು.