ಮಡಿಕೇರಿ, ಅ. ೪: ಸಂಪ್ರದಾಯ, ಆಚರಣೆಗಳು ಉಳಿಯಬೇಕಾದರೆ ಸಂಪ್ರದಾಯ ಮತ್ತು ಆಚರಣೆಗಳನ್ನು ಮುಂದಿನ ತಲೆಮಾರಿಗೂ ತಲುಪಿಸಬೇಕು. ಈ ನಿಟ್ಟಿನಲ್ಲಿ ಹಿಂದೂ ಮಲಯಾಳಿ ಸಮುದಾಯ ತನ್ನ ಸಂಪ್ರದಾಯ ಮತ್ತು ಆಚರಣೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸಿ, ಸಂಪ್ರದಾಯ, ಆಚರಣೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಮುಳ್ಳೂರು ಬಸವಪಟ್ಟಣ ಶ್ರೀ ತೋಟಂದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಮಹಾಸ್ವಾಮಿ ಕರೆ ನೀಡಿದರು.

ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ನಗರದ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಓಣಾ ಘೋಷಂ - ಓಣಂ ಸಧ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವು ಭಾರತೀಯರು ಎಂಬ ಸದ್ಭಾವನೆ ಎಲ್ಲರಲ್ಲೂ ಇರಬೇಕು. ಹಿಂದೂ ಧರ್ಮಕ್ಕೆ ತನ್ನದೇ ಆದ ವೈಶಿಷ್ಟö್ಯತೆ ಇದೆ. ಇತ್ತೀಚೆಗೆ ಕೋ ಪೈಲೆಟ್‌ನಿಂದ ಮಾರಣಾಂತಿಕ ಹಲ್ಲೆಗೊಳಗಾದರೂ ತನ್ನ ಜೀವವನ್ನು ಲೆಕ್ಕಿಸದೆ ೧೭೪ ಪ್ರಯಾಣಿಕರನ್ನು ಉಳಿಸಿದ ಮುಖ್ಯ ಪೈಲೆಟ್ ಭಾರತೀಯ ಸ್ಮಿಟ್ ಮಚ್ಚಾರ್ ಅವರ ಸಾಹಸವನ್ನು ಪ್ರಸ್ತಾಪಿಸಿದ ಮಹಾಸ್ವಾಮಿಗಳು ಎಂಥದ್ದೇ ಪರಿಸ್ಥಿತಿ ಎದುರಾದರೂ ಎಲ್ಲರೂ ಚೆನ್ನಾಗಿ ಬದುಕಬೇಕು ಎಂಬ ಧ್ಯೇಯ ಹಿಂದೂಗಳ ರಕ್ತದಲ್ಲೇ ಬಂದಿದೆ ಎಂದು ಪ್ರತಿಪಾದಿಸಿದರು.

ಓಣಂ ಆಚರಣೆಯಲ್ಲಿ ತತ್ವ ಸಿದ್ಧಾಂತವಿದೆ. ಬಲಿಚಕ್ರವರ್ತಿಯ ಧ್ಯೇಯ ಎಲ್ಲರಿಗೂ ಮಾದರಿಯಾಗಬೇಕು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮಲಯಾಳಿ ಸಮುದಾಯ ಕೇರಳದಿಂದ ಕೊಡಗಿಗೆ ವಲಸೆ ಬಂದವರಾಗಿದ್ದು, ಅವರುಗಳ “ಅಡ್ರೆಸ್ ಕೋಡ್'' ಬದಲಾಗಿದೆ. ಆದರೆ ಅವರ ಸಾಂಪ್ರದಾಯಿಕ “ಡ್ರೆಸ್ ಕೋಡ್'' ಬದಲಾಗಿಲ್ಲ ಎಂದು ಶ್ಲಾಘಿಸಿದ ಸ್ವತಂತ್ರ ಬಸವಲಿಂಗ ಶ್ರೀಗಳು ಹಿಂದೂ ಮಲಯಾಳಿ ಸಮುದಾಯದ “ಡ್ರೆಸ್ ಕೋಡ್'' ಬದಲಾಗಬಾರದು ಎಂದು ಆಶಿಸಿದರು. ಸಮಾಜದಲ್ಲಿ ಅಸ್ಪೃಷ್ಯತೆ, ಅಸಮಾನತೆ ದೂರವಾಗಬೇಕು ನಾವೆಲ್ಲ ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು ಎಂದು ಅವರು ನುಡಿದರು.

ಮುಖ್ಯ ಅತಿಥಿಯಾಗಿದ್ದ ಒಕ್ಕಲಿಗೆ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಓಣಂ ಆಚರಣೆ ಭಕ್ತಿ ಸಮಾನತೆಯೊಂದಿಗೆ ಮಾನವೀಯತೆಯನ್ನು ಗೌರವಿಸುವ ಆಚರಣೆಯಾಗಿದ್ದು, ಹಿಂದೂ ಮಲಯಾಳಿ ಸಮುದಾಯದಲ್ಲಿ ಒಗ್ಗಟ್ಟು ಬಲವಾಗಿದೆ ಎಂದು ಹೇಳಿದರು.

ಸಮಾಜ ಸೇವಕ ಎಡಿಕೇರಿ ಪ್ರಸನ್ನ ಮಾತನಾಡಿ, ಸಮಾಜದ ಹಿತಕ್ಕಾಗಿ ಎಲ್ಲರೂ ಒಟ್ಟಾಗಿ ದುಡಿಯಬೇಕೆಂದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ, ಹಿಂದೂ ಮಲಯಾಳಿ ಸಮುದಾಯದ ಆಚರಣೆ ಶಿಸ್ತು ಬದ್ಧವಾಗಿ ನಡೆಯುತ್ತಾ ಬಂದಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಓಣಂ ಆಚರಣಾ ಸಮಿತಿ ಅಧ್ಯಕ್ಷ ಕೆ.ಕೆ. ಅನಿಲ್, ಸಂಘದ ನಿರ್ದೇಶಕ ಸಿ.ಕೆ. ಪ್ರಭಾಕರ್, ಗೌರವಾಧ್ಯಕ್ಷ ಕೆ.ವಿ. ಧರ್ಮೇಂದ್ರ, ಗುತ್ತಿಗೆದಾರ ದಿವಾಕರನ್, ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಕೆ. ಮೋಹನ್, ಉಪಾಧ್ಯಕ್ಷ ಟಿ.ಆರ್. ಪ್ರಮೋದ್, ಖಜಾಂಚಿ ಎಂ.ಎಸ್. ದಿನೇಶ್ ನಾಯರ್ ಇತರರಿದ್ದರು. ಜಸ್ಮಿತ ಪ್ರಾರ್ಥಿಸಿ, ಲೇಖಾ ಪ್ರಮೋದ್, ಟಿ.ಬಿ. ಪ್ರಭಾಕರ್ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಇ.ಬಿ. ದಿನೇಶ್ ನಾಯರ್ ಸ್ವಾಗತಿಸಿದರು.

ಕಾರ್ಯಕ್ರಮದ ಮೊದಲಿಗೆ ನಗರದ ಚೌಡೇಶ್ವರಿ ದೇವಾಲಯದ ಬಳಿಯಿಂದ ಕ್ರಿಸ್ಟಲ್ ಹಾಲ್‌ವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಗುತ್ತಿಗೆದಾರ ಜಯನ್ ಚಾಲನೆ ನೀಡಿದರು. ಮಹಾಬಲಿ ಚಕತ್ರವರ್ತಿಯ ಅಲಂಕೃತ ಮಂಟಪದೊAದಿಗೆ ಕೇರಳದ ಚಂಡೆ, ಆನೆವೇಷಧಾರಿ, ಮಾವೇಲಿ ವೇಷಧಾರಿಯೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಹಿಂದೂ ಮಲಯಾಳಿ ಸಮುದಾಯದವರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಾಜಿ ಸೈನಿಕರಿಗೆ ಹಾಗೂ ಸಾಧಕರಿಗೆ ಸನ್ಮಾನ ನಡೆಯಿತು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.