ಮಡಿಕೇರಿ, ಸೆ. ೩೦: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ ನಡೆದ ಮಾಜಿ ಸೈನಿಕರ ಅದಾಲತ್‌ನಲ್ಲಿ ಮೂರು ತಿಂಗಳಿಗೊಮ್ಮೆ ತಾಲೂಕುಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಮಾಜಿ ಸೈನಿಕರ ಅದಾಲತ್ ನಡೆಸಲು ಸೂಚನೆ ನೀಡಲಾಗಿತ್ತು. ಇದರಂತೆ ಆಯಾ ತಾಲೂಕು ವ್ಯಾಪ್ತಿಯಲ್ಲಿ ತ್ವರಿತವಾಗಿ ಮಾಜಿ ಸೈನಿಕರ ಅದಲಾತ್ ನಡೆಸಲು ಕ್ರಮಕೈಗೊಳ್ಳಬೇಕೆಂದು ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಗ್ರಹಿಸಲಾಯಿತು.

ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿವೃತ್ತ ಮೇಜg ಬಿ.ಎ. ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಗರದ ರೋಟರಿ ಹಾಲ್‌ನಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಸಭೆಯಲ್ಲಿ ಸೈನಿಕರಿಗೆ ಸಂಬAಧಿಸಿದ ಹಲವು ವಿಚಾರಗಳು-ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.

ತಾಲೂಕುಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಹಾಗೂ ಜಿಲ್ಲಾ ಮಟ್ಟದಲ್ಲಿ ೬ ತಿಂಗಳಿಗೊಮ್ಮೆ ಅದಾಲತ್ ನಡೆಸಲು ನಿರ್ಧರಿಸಲಾಗಿತ್ತು. ಇದರಂತೆ ನಡೆದುಕೊಳ್ಳಲು ಪ್ರಮುಖರು ಒತ್ತಾಯಿಸಿದರು. ಮಾಜಿ ಸೈನಿಕರಿಗೆ ಕಾನೂನುಬದ್ಧವಾಗಿ ದೊರೆಯಬೇಕಾದ ಜಾಗ, ನಿವೇಶನ, ಇನ್ನಿತರ ಸೌಲಭ್ಯಗಳು ಸಿಗದಿರುವ ಬಗ್ಗೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ಈ ಸಂದರ್ಭ ಮಾಜಿ ಯೋಧರುಗಳಾದ ೭೫ ವರ್ಷ ಮೇಲ್ಪಟ್ಟ ಎಂ.ಎಸ್. ಕಾಳಪ್ಪ, ಗಂಗಾಧರ, ಕಟ್ರತನ ಅಪ್ಪಯ್ಯ, ಪಿ.ಪಿ. ಅಪ್ಪಣಮಯ್ಯ, ಎ.ಎನ್. ಸರಸ್ವತಿ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಏರ್‌ಕಮಾಂಡರ್ ದೇವಯ್ಯ (ನಿ), ಕಾರ್ಯದರ್ಶಿ ನಿವೃತ್ತ ಮೇಜರ್ ಓಡಿಯಂಡ ಎಸ್. ಚಿಂಗಪ್ಪ, ಲೆ.ಕ. ಮುಲ್ಲೆರ ಕಾವೇರಪ್ಪ, ಲೆ.ಕ. ಕರ್ತಮಾಡ ಸುರೇನ್ ಸುಬ್ಬಯ್ಯ, ಸು.ಮೇ. ಅಗ್ರಿಮನೆ ವಾಸಪ್ಪ, ನಾಟೋಳಂಡ ಸೋಮಯ್ಯ, ಕುಟ್ಟಂಡ ಮಾದಪ್ಪ ಸೇರಿದಂತೆ ಜಿಲ್ಲೆಯ ಇನ್ನಿತರ ಒಂಭತ್ತು ಸಂಘಗಳ ಅಧ್ಯಕ್ಷರು ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.