ಕುಶಾಲನಗರ, ಸೆ. ೩೦: ಕುಶಾಲನಗರ ಸಮೀಪದ ವಿಶ್ವವಿಖ್ಯಾತ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ತೂಗು ಸೇತುವೆ ಕಾಮಗಾರಿ ಮತ್ತೆ ಚುರುಕುಗೊಳ್ಳಲಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಕೆಲವೇ ದಿನಗಳಲ್ಲಿ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.

ದುಬಾರೆ ಆನೆ ಶಿಬಿರಕ್ಕೆ ನಂಜರಾಯಪಟ್ಟಣ ಕಡೆಯಿಂದ ತೆರಳಲು ಸ್ಥಳೀಯರು ಹಾಗೂ ಪ್ರವಾಸಿಗರು ಸದ್ಯ ಬೋಟ್‌ಗಳನ್ನೇ ಅವಲಂಬಿಸಬೇಕಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತೂಗು ಸೇತುವೆ ಯೋಜನೆ ಇದೀಗ ಅನುಷ್ಠಾನದ ಹಂತ ತಲುಪಿದ್ದು, ಕಾಮಗಾರಿಯ ಆರಂಭಿಕ ಹಂತದ ಕೆಲಸಗಳು ಈಗಾಗಲೇ ನಡೆದಿವೆ.

ತುರ್ತು ಸಂದರ್ಭಗಳಲ್ಲಿ ಸಂಪರ್ಕಕ್ಕೆ ನೆರವು

ದುಬಾರೆ ಶಿಬಿರದ ನಿವಾಸಿಗಳು ಹಾಗೂ ಸಿಬ್ಬಂದಿಗೆ ಸಂಜೆ ನಂತರ ತುರ್ತು ಸಂದರ್ಭಗಳಲ್ಲಿ ನದಿ ದಾಟಲು ತೊಂದರೆಯಾಗುತ್ತಿದ್ದು, ಮಾಲ್ದಾರೆ ಮಾರ್ಗವಾಗಿ ಹಲವು ಕಿಲೋಮೀಟರ್ ಸುತ್ತುವ ಪರಿಸ್ಥಿತಿ ಎದುರಾಗುತ್ತಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ.

ಯಾAತ್ರಿಕ ಬೋಟ್‌ಗಳ ಬಳಕೆಯಿಂದ ಹೊರಸೂಸುವ ಇಂಧನ ನದಿಗೆ ಸೇರಿ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಕೇಳಿಬಂದಿವೆ. ಅಲ್ಲದೆ, ನದಿಯ ನಡುಗಡ್ಡೆಗಳಲ್ಲಿ ಬೆಳೆದಿರುವ ಮರಗಳ ಬೇರುಗಳ ಬಳಿ ನೀರಿನ ರಭಸದಿಂದ ಮಣ್ಣಿನ ಸವಕಳಿ ಉಂಟಾಗಿ ಮರಗಳು ನಾಶವಾಗುತ್ತಿರುವ ಬಗ್ಗೆಯೂ ಆತಂಕ ವ್ಯಕ್ತವಾಗಿದೆ.

ರೂ. ೭.೫ ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದುಬಾರೆ ತೂಗು ಸೇತುವೆ ಯೋಜನೆಗೆ ಸುಮಾರು ಐದು ತಿಂಗಳ ಹಿಂದೆ ಅರಣ್ಯ ಸಚಿವ ಈಶ್ವರ ಖಂಡ್ರೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸುಮಾರು ರೂ. ೭.೫ ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊAಡಿದೆ.

ಈಗಾಗಲೇ ಸೇತುವೆಗೆ ಆಧಾರವಾಗುವ ಬೃಹತ್ ಕಾಂಕ್ರೀಟ್ ಗೋಪುರ ನಿರ್ಮಾಣವಾಗಿದ್ದು, ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಸಮೀಪದಲ್ಲಿ ಸಂಪರ್ಕ ಕಲ್ಪಿಸುವ ಸಣ್ಣ ಪ್ರಮಾಣದ ಕಾಂಕ್ರೀಟ್ ಕಂಬಗಳನ್ನು ಅಳವಡಿಸಲಾಗಿದೆ.

ಕಾಮಗಾರಿ ಕೈಗೆತ್ತಿಕೊಂಡಿದ್ದ ಗಿರೀಶ್ ಭಾರದ್ವಾಜ್ ಅವರ ನಿಧನದ ಹಿನ್ನೆಲೆಯಲ್ಲಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದರ ನಡುವೆ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕಾಮಗಾರಿ ಮುಂದುವರಿಸಲು ಸಾಧ್ಯವಾಗಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಧಿಕಾರಿಗಳಿಂದ ಪರಿಶೀಲನೆ

ಇದೀಗ ಸಂಬAಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.

ತೂಗು ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಕೆಲವು ತಾಂತ್ರಿಕ ಸಲಕರಣೆಗಳನ್ನು ಜಪಾನ್‌ನಿಂದ ತರಿಸಲಾಗುತ್ತಿದ್ದು, ಅವುಗಳನ್ನು ಸಾಗಿಸಲು ದುಬಾರೆ ಶಿಬಿರದ ಮಾಲ್ದಾರೆ ಮಾರ್ಗದ ರಸ್ತೆ ನಿರ್ವಹಣೆ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗಿದೆ.

ಸ್ಥಳೀಯ ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ತೂಗು ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಮಡಿಕೇರಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಅಭಿಷೇಕ್ ತಿಳಿಸಿದ್ದಾರೆ.

ನವೆಂಬರ್ ಅಂತ್ಯದೊಳಗೆ ಪೂರ್ಣ: ಮಂತರ್ ಗೌಡ

ದುಬಾರೆಗೆ ಭೇಟಿ ನೀಡಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ತೂಗು ಸೇತುವೆ ಕಾಮಗಾರಿಯನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. ಸೇತುವೆ ನಿರ್ಮಾಣದಿಂದ ದುಬಾರೆ ವ್ಯಾಪ್ತಿಯ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯರಿಗೆ ಹಲವು ರೀತಿಯ ಅನುಕೂಲ

ಮಳೆಗಾಲದಲ್ಲಿ ದುಬಾರೆ ಆನೆ ಶಿಬಿರದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಹಾಗೂ ಶಿಬಿರದ ನಿವಾಸಿಗಳು ನಂಜರಾಯಪಟ್ಟಣ, ವಾಲನೂರು, ಸಿದ್ದಾಪುರ ಹಾಗೂ ಕುಶಾಲನಗರ ಭಾಗಗಳಿಗೆ ತುರ್ತು ಕೆಲಸಗಳಿಗಾಗಿ ತೆರಳಲು ಸೇತುವೆ ಪ್ರಮುಖ ಸಂಪರ್ಕ ಕಲ್ಪಿಸಲಿದೆ.

ಅಲ್ಲದೆ, ದಿನದ ೨೪ ಗಂಟೆಯೂ ಆನೆಗಳ ನಿರ್ವಹಣೆ ಹಾಗೂ ತುರ್ತು ಸಂದರ್ಭಗಳಲ್ಲಿ ಶಿಬಿರದ ಮಾವುತರು, ಕಾವಾಡಿಗರು ಮತ್ತು ಸಿಬ್ಬಂದಿಗೆ ಸೇತುವೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಶಿಬಿರದ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ. - ಚಂದ್ರಮೋಹನ್