ಕೂಡಿಗೆ, ಸೆ. ೨೯: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮೂಲಕ ನದಿಗೆ ಹಾಗೂ ಕಾಲುವೆಗಳಿಗೆ ಕಳೆದ ಒಂದು ವಾರದಿಂದ ಕೇವಲ ೫೦ ಕ್ಯೂಸೆಕ್ಸ್ (ಕ್ಯೂಬಿಕ್ ಫೀಟ್ ಪರ್ ಸೆಕೆಂಡ್) ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆಯಾದರೂ ಅಣೆಕಟ್ಟೆಯಲ್ಲಿ ೫.೪ ಟಿ.ಎಂ.ಸಿ(ಸಾವಿರ ಮಿಲಿಯನ್ ಕ್ಯೂಬಿಕ್ ಫೀಟ್)ಯಷ್ಟೇ ನೀರು ಸಂಗ್ರಹದಲ್ಲಿದೆ. ಕಳೆದ ವರ್ಷ ಇದೇ ದಿನ ೭.೫ ಟಿ.ಎಂಸಿ ನೀರು ಸಂಗ್ರಹವಾಗಿತ್ತು.

ಅಣೆಕಟ್ಟೆಯ ಗರಿಷ್ಠ ಸಂಗ್ರಹಮಟ್ಟ ೮.೫ ಟಿಎಂಸಿಯಷ್ಟಿದೆ. ಆದರೆ ಕೆಳಭಾಗದಲ್ಲಿನ ಹೂಳು ತುಂಬುವಿಕೆ ಸೇರಿದಂತೆ ಇತರ ಕಾರಣಗಳಿಂದಾಗಿ ಪ್ರಸ್ತುತ ಅಣೆಕಟ್ಟೆಯ ಗರಿಷ್ಠಮಟ್ಟ - ‘ಗ್ರಾಸ್‌ಕ್ಯಾಪ್‘ ೬.೨ ಟಿ.ಎಂ.ಸಿಯಷ್ಟಿದೆ. ಈ ಪೈಕಿ ೫.೪ ಟಿ.ಎಂ.ಸಿಯಷ್ಟು ನೀರು ಸಂಗ್ರಹವಾಗಿದ್ದು, ನದಿ ಹಾಗೂ ಕಾಲುವೆಗೆ ೫೦ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ತಾ.೨೩ರಿಂದ ಇಷ್ಟೇ ಪ್ರಮಾಣದಲ್ಲಿ ನದಿ ಹಾಗೂ ನಾಲೆಗೆ ನೀರು ಹರಿಸಲಾಗುತ್ತಿದೆ. ತಾ.೨೦ರವರೆಗೆ ನದಿಗೆ ೫೦೦ ಕ್ಯೂಸೆಕ್ಸ್ ಹಾಗೂ ನಾಲೆಗೆ ೧,೧೦೦ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿತ್ತು.

ಆಗಸ್ಟ್ ತಿಂಗಳಲ್ಲಿ ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಅಣೆಕಟ್ಟೆಯು ಭರ್ತಿಯಾಗಿತ್ತು. ಒಳ ಹರಿವಿನ ಪ್ರಮಾಣ ಮತ್ತು ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಬಂದ ನೀರನ್ನು ನದಿಗೆ ಹರಿಸಲಾಗುತ್ತಿತ್ತು. ಕಳೆದ ೨೫ ದಿನಗಳಿಂದ ರಾಜ್ಯ ಸರ್ಕಾರದ ಸೂಚನೆಯಂತೆ ಕುಡಿಯುವ ನೀರಿಗಾಗಿ ನದಿಗೆ ಮತ್ತು ಮುಖ್ಯ ನಾಲೆಯ ಮೂಲಕ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದ ಕೆರೆಕಟ್ಟೆಗಳನ್ನು ತುಂಬಿಸಲು ನೀರನ್ನು ನೀರಾವರಿ ಸಲಹಾ ಸಮಿತಿ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ತೀರ್ಮಾನದಂತೆ ಹರಿಸಲಾಗಿತ್ತು.

ಇದೀಗ ತಾ. ೨೩ ರಿಂದ ನೀರನ್ನು ಕೇವಲ ೫೦ ಕ್ಯೂಸೆಕ್ಸ್ ಪ್ರಮಾಣದಲ್ಲಿ ಬಿಡುತ್ತಿದ್ದರೂ ಸಹ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಮಟ್ಟದಲ್ಲಿ ಬಾರಿ ಕುಸಿತವಾಗಿದೆ.

ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಮಟ್ಟ ಕಡಿಮೆಯಾಗುತ್ತಿದೆ. ಮಳೆಯ ಪ್ರಮಾಣ ಹೆಚ್ಚಾದರೆ ನೀರು ಸಂಗ್ರಹವಾಗಬಹುದು, ಸಂಗ್ರಹದ ನೀರನ್ನು ಸರ್ಕಾರದ ಸೂಚನೆಯಂತೆ ಕುಡಿಯುವ ನೀರಿಗಾಗಿ ಹೆಚ್ಚಾಗಿ ಕಾಯ್ದಿರಿಸಲಾಗುವುದು ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕಾವೇರಿ - ಹಾರಂಗಿ ನದಿಗಳಲ್ಲಿ ಹರಿಯುವ ನೀರಿನ ಮಟ್ಟದಲ್ಲಿ ಬಾರಿ ಕುಸಿತವಾಗಿದ್ದು, ಬೇಸಿಗೆ ಕಾಲದಲ್ಲಿ ಹರಿಯುವಂತಹ ಸನ್ನಿವೇಶ ಕಂಡುಬರುತ್ತಿದೆ.