ಮಡಿಕೇರಿ, ಸೆ. ೨೯: ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ತಲಕಾವೇರಿ-ಭಾಗಮಂಡಲ ವ್ಯವಸ್ಥಾಪನಾ ಸಮಿತಿ ರಚನೆ ಪ್ರಕ್ರಿಯೆ ಸುದೀರ್ಘ ನಾಲ್ಕು ವರ್ಷಗಳ ಅಂತರದ ಬಳಿಕ ಇದೀಗ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಕುರಿತಾದ ಪ್ರಕ್ರಿಯೆ ಇದೀಗ ಅಂತಿಮ ಹಂತದಲ್ಲಿದ್ದು, ಇನ್ನೆರೆಡು ದಿನಗಳಲ್ಲಿ ಈ ಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ.
೨೦೧೯ ರಿಂದ ೨೦೨೨ ರ ಇಸವಿಯ ತನಕದ ಅವಧಿಯಲ್ಲಿ ಬಿದ್ದಾಟಂಡ ಎಸ್. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿದ್ದ ಸಮಿತಿಯ ಅಧಿಕಾರವಧಿ ಪೂರ್ಣಗೊಂಡ ಬಳಿಕ ಈ ತನಕ ಹೊಸ ಸಮಿತಿ ನೇಮಕಗೊಂಡಿರಲಿಲ್ಲ. ಈ ಅವಧಿಯ ನಡುವೆ ಒಂದೊಮ್ಮೆ ಸಮಿತಿ ಸದಸ್ಯರ ಹೆಸರು ಘೋಷಿಸಲಾಗಿತ್ತಾದರೂ ಕಾನೂನಿನ ನಿಯಮಾವಳಿಯಂತೆ ಸಮಿತಿ ಸದಸ್ಯರ ಆಯ್ಕೆ ನಡೆದಿಲ್ಲ ಎಂಬ ತಾಂತ್ರಿಕ ಕಾರಣದಿಂದಾಗಿ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.
ಇದೀಗ ಹೊಸದಾಗಿ ನಾಲ್ಕು ವರ್ಷದ ಅಂತರದ ಬಳಿಕ ಸಮಿತಿ ರಚನೆ ನಡೆಯುತ್ತಿದೆ. ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿಗಳ ಇಲಾಖೆ (ಮುಜರಾಯಿ ಖಾತೆ) ವತಿಯಿಂದ ಕೆಲಸಮಯದ ಹಿಂದೆ ನೂತನ ಸಮಿತಿ ರಚನೆಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಹಲವು ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಈ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಗೆ ಒಟ್ಟು ೯ ಮಂದಿಯನ್ನು ನಾಮಕರಣ ಮಾಡಲು ಕ್ರಮವಹಿಸಲಾಗುತ್ತಿದೆ. ನೇಮಕಗೊಳ್ಳುವ ೯ ಮಂದಿ ಪೈಕಿ ಒಬ್ಬರು ಅಧ್ಯಕ್ಷರಾಗಿ ಈ ಸದಸ್ಯರ ಮೂಲಕ ಆಯ್ಕೆಗೊಳ್ಳುತ್ತಾರೆ.
ಈ ಸಮಿತಿ ನೇಮಕಾತಿಗೆ ಸಂಬAಧಿಸಿದAತೆ ಅರ್ಚಕರಿಗೆ ೧ ಸ್ಥಾನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ತಲಾ ಒಂದೊAದು ಸ್ಥಾನ, ಮಹಿಳೆಯರಿಗೆ ಎರಡು ಸ್ಥಾನ, ಸ್ಥಳೀಯರಿಗೆ ೧ ಸ್ಥಾನ ಹಾಗೂ ಇತರರಿಗೆ ಎಂದು ನಾಲ್ಕು ಸ್ಥಾನ ನಿಯಮಾವಳಿಯಂತೆ ಇರಬೇಕಾಗಿದೆ. ಈಗಾಗಲೇ ಈ ಕುರಿತಾಗಿ ಅರ್ಜಿ ಸ್ವೀಕಾರದೊಂದಿಗೆ ಇವರ ಕುರಿತಾದ ಕೂಲಂಕಷ ವಿವರಗಳ ಮೂಲಕ ಜಿಲ್ಲಾಡಳಿತದಿಂದ ಹಿಂದೂ ಧಾರ್ಮಿಕ ಪರಿಷತ್ಗೆ ವರದಿ ಸಲ್ಲಿಕೆಯಾಗಿದೆ. ಈ ಪಟ್ಟಿಯಲ್ಲಿರುವವರ ಪೈಕಿ ಒಂಭತ್ತು ಮಂದಿಯನ್ನು ಅಂತಿಮಗೊಳಿಸಬೇಕಿದ್ದು, ಇಲಾಖಾ ಸಚಿವರ ಅನುಮೋದನೆಯಷ್ಟೆ ಬಾಕಿಯಿದೆ.
‘ಶಕ್ತಿ’ಗೆ ತಿಳಿದು ಬಂದAತೆ ಅ. ೧ ರಂದು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಸಭೆ ಬೆಂಗಳೂರಿನಲ್ಲಿ ನಡೆಯಲಿದ್ದು, ಬಹುತೇಕ ಈ ಸಭೆಯಲ್ಲಿ ಪಟ್ಟಿ ಪ್ರಕಟಗೊಳ್ಳಲಿದೆ. ಹಲವಷ್ಟು ಅರ್ಜಿ ಸಲ್ಲಿಕೆಯಾಗಿದ್ದರೂ ಈ ಪೈಕಿ ಅಂತಿಮವಾಗಿ ೩೮ ಅರ್ಜಿ ಸ್ವೀಕೃತವಾಗಿವೆ ಎನ್ನಲಾಗಿದೆ. ಇತರ ನಾಲ್ಕು ಸ್ಥಾನಕ್ಕೆ ಸರಿಸುಮಾರು ೩೦ ಅರ್ಜಿ ಸಲ್ಲಿಕೆಯಾಗಿದೆ. ಕೊಡಗಿನವರು, ಹೊರಭಾಗದಲ್ಲಿ ನೆಲೆಸಿರುವ ಕೊಡಗಿನ ಮೂಲದವರು ಅರ್ಜಿ ಸಲ್ಲಿಸಿದ್ದಾರೆ. ವಿಶೇಷವೆಂದರೆ ಜಿಲ್ಲೆಯ ಮೂಲದವರಲ್ಲದ ಹೊರಜಿಲ್ಲೆಯ ಕೆಲವ್ಯಕ್ತಿಗಳೂ ಇಲ್ಲಿನ ಸಮಿತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.