ಮಡಿಕೇರಿ, ಸೆ. ೨೯: ದುಬಾರೆ ಸಾಕಾನೆ ಶಿಬಿರದಲ್ಲಿ ಆರೈಕೆಯಲ್ಲಿದ್ದ ಗಂಡಾನೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದೆ.
ಕಳೆದ ಏಪ್ರಿಲ್ ತಿಂಗಳಿನಿAದ ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು ೧೯ ವರ್ಷ ಪ್ರಾಯದ ಗಂಡು ಆನೆ ಐದು ತಿಂಗಳಿಗೂ ಹೆಚ್ಚಿನ ನಿರಂತರ ಚಿಕಿತ್ಸೆಯ ನಡುವೆಯೂ ಇಂದು ಬೆಳಿಗ್ಗೆ ಮೃತಪಟ್ಟಿದೆ. ಕಾದಾಟದ ಗಾಯಗಳು ಹಾಗೂ ಮುರಿದ ದಂತದೊAದಿಗೆ ಶಿಬಿರಕ್ಕೆ ಸೇರಿಸಲ್ಪಟ್ಟಿದ್ದ ಆನೆಯನ್ನು ಅರಣ್ಯ ಇಲಾಖೆಯ ಪಶುವೈದ್ಯರು ಪ್ರತ್ಯೇಕವಾಗಿಟ್ಟು ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಎಚ್ಚರವಹಿಸಿ, ಪ್ರತಿದಿನ ಆ್ಯಂಟಿಬಯೋಟಿಕ್ಸ್, ನೋವು ನಿವಾರಕಗಳು, ಗಾಯಕ್ಕೆ ಔಷಧೋಪಚಾರ ಮತ್ತು ಪೋಷಕಾಂಶಗಳನ್ನು ನಿರಂತರವಾಗಿ ನೀಡುತ್ತಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ವೈಲ್ಡ್ಲೈಫ್ ಎಸ್.ಒ.ಎಸ್ ಸಂಸ್ಥೆಯ ನುರಿತ ವನ್ಯಜೀವಿ ಪಶುವೈದ್ಯರ ತಂಡವನ್ನು ಕರೆಸಿ ಜಂಟಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಡಿಜಿಟಲ್ ಎಕ್ಸ್-ರೇ ಪರೀಕ್ಷೆಯ ವೇಳೆ ಆನೆಯ ಎಡ ಮೊಣಕೈ ಮೂಳೆಯಲ್ಲಿ ಬಿರುಕು ಇರುವುದು ದೃಢಪಟ್ಟಿದ್ದು, ತಜ್ಞ ವೈದ್ಯರ ಸಲಹೆಯಂತೆ ಎಲ್ಲಾ ಸುಧಾರಿತ ಚಿಕಿತ್ಸೆಗಳನ್ನು ಮುಂದುವರಿಸಲಾಗಿತ್ತು. ಕಾಲಿನ ಮೇಲಿನ ಒತ್ತಡ ತಗ್ಗಿಸಲು ಆನೆಯನ್ನು ಕ್ರಾಲ್‌ನಿಂದ ಹೊರಗೆ ಬಿಡಲಾಗಿತ್ತು. ಪೆಟ್ಟಾದ ಕಾಲನ್ನು ಸ್ಥಿರವಾಗಿಡಲು ಎರಡು ದಿನಗಳ ಹಿಂದೆ ನುರಿತ ತಜ್ಞರ ಮೂಲಕ ಫೈಬರ್‌ಗ್ಲಾಸ್ ಬ್ಯಾಂಡೇಜ್ (ಈibಡಿe ಅಚಿsಣiಟಿg) ಹಾಕಲಾಗಿತ್ತು. ಇಂದು ಆನೆಯು ಏಕಾಏಕಿ ಕುಸಿದು ಬಿದ್ದ ತಕ್ಷಣವೇ ತುರ್ತು ಗ್ಲುಕೋಸ್ ದ್ರವ ಚಿಕಿತ್ಸೆ ಹಾಗೂ ತೀವ್ರ ನಿಗಾ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದೆ. ಸಾವಿನ ನಿಖರ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ದೀರ್ಘಕಾಲದ ಮೂಳೆ ಮುರಿತದ ತೊಂದರೆ, ನಿರಂತರ ಅನಾರೋಗ್ಯ ಹಾಗೂ ದೈಹಿಕ ದೌರ್ಬಲ್ಯದಿಂದಾಗಿ ಆನೆಯು ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ಪಶುವೈದ್ಯಕೀಯ ವರದಿಗಳಿಂದ ತಿಳಿದುಬಂದಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.