ಮಡಿಕೇರಿ, ಸೆ. ೨೩: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್ಸಿಸಿ, ಎನ್ಎಸ್ಎಸ್ ಹಾಗೂ ವೈಆರ್ಸಿ ಘಟಕಗಳ ಸಹಯೋಗದಲ್ಲಿ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎನ್ಡಿಆರ್ಎಫ್ನ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಮಾತನಾಡಿ, ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ರಾಷ್ಟಿçÃಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್ಡಿಆರ್ಎಫ್) ದೇಶದಾದ್ಯಂತ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅಗತ್ಯ ಸಂದರ್ಭಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ರಕ್ಷಣಾ ಕಾರ್ಯಗಳಲ್ಲಿ ಭಾಗವಹಿಸಿರುವ ಎನ್ಡಿಆರ್ಎಫ್ ಹಲವು ವಿಪತ್ತು ಸಂದರ್ಭಗಳಲ್ಲಿ ಅಮೂಲ್ಯ ಜೀವಗಳನ್ನು ರಕ್ಷಿಸಿದೆ ಎಂದು ತಿಳಿಸಿದರು. ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಸ್ಥಳೀಯ ಸಮುದಾಯದ ಜನರೇ ಬಹುತೇಕ ಮೊದಲು ಸ್ಥಳದಲ್ಲಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ವಿಪತ್ತು ನಿರ್ವಹಣೆ, ಪ್ರಥಮ ಚಿಕಿತ್ಸೆ ಹಾಗೂ ಜೀವ ರಕ್ಷಣೆಯ ಮೂಲಭೂತ ಕೌಶಲ್ಯಗಳನ್ನು ಹೊಂದಿರುವುದು ಅಗತ್ಯ. ಇಂತಹ ತರಬೇತಿ ಪಡೆದವರು ತುರ್ತು ಸಂದರ್ಭದಲ್ಲಿ ಗಾಯಾಳುಗಳಿಗೆ ನೆರವು ನೀಡಿ ಅಮೂಲ್ಯ ಜೀವಗಳನ್ನು ಉಳಿಸಲು ಸಹಕರಿಸಬಹುದು ಎಂದರು. ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಅಗತ್ಯ ತರಬೇತಿ ಪಡೆದು ಎನ್ಡಿಆರ್ಎಫ್ ಸೇರಿದಂತೆ ವಿವಿಧ ರಕ್ಷಣಾ ತಂಡಗಳೊAದಿಗೆ ಕೈಜೋಡಿಸಿ ವಿಪತ್ತು ಸಂದರ್ಭಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ಅವರು ಕರೆ ನೀಡಿದರು.
ಎನ್ಡಿಆರ್ಎಫ್ನ ರಕ್ಷಣಾ ಕಮಾಂಡರ್ ನಾಗರಾಜು ಎ.ಪಿ. ಅವರು ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ಕಾರ್ಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ಪ್ರವಾಹ, ಭೂಕುಸಿತ, ಭೂಕಂಪ, ಕಟ್ಟಡ ಕುಸಿತ ಸೇರಿದಂತೆ ವಿವಿಧ ವಿಪತ್ತು ಸಂದರ್ಭಗಳಲ್ಲಿ ಎನ್ಡಿಆರ್ಎಫ್ ಕೈಗೊಂಡ ರಕ್ಷಣಾ ಕಾರ್ಯಗಳ ಚಿತ್ರಗಳು ಹಾಗೂ ನೈಜ ಘಟನೆಗಳ ಉದಾಹರಣೆಗಳನ್ನು ಪ್ರದರ್ಶಿಸಿ ಮಾಹಿತಿ ನೀಡಿದರು.
ತುರ್ತು ಪರಿಸ್ಥಿತಿಯಲ್ಲಿ ಗಾಬರಿಯಾಗದೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು, ಮೊದಲು ಸ್ವಯಂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು, ಗಾಯಾಳುಗಳಿಗೆ ಅಗತ್ಯ ನೆರವು ನೀಡುವುದು ಹಾಗೂ ರಕ್ಷಣಾ ತಂಡಗಳಿಗೆ ತಕ್ಷಣ ಮಾಹಿತಿ ನೀಡುವುದು ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ವಿವರಿಸಿದರು. ವಿಪತ್ತು ಸಂದರ್ಭದಲ್ಲಿ ಸಮಯಪ್ರಜ್ಞೆ, ಧೈರ್ಯ, ಶಿಸ್ತು, ತಂಡದ ಸಹಕಾರ ಹಾಗೂ ಮಾನವೀಯತೆ ಅತ್ಯಂತ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಮಾತನಾಡಿ, ನೈಸರ್ಗಿಕವಾಗಿರಲಿ ಅಥವಾ ಮಾನವ ನಿರ್ಮಿತವಾಗಿರಲಿ, ವಿಪತ್ತುಗಳು ಯಾವುದೇ ಸಮಯದಲ್ಲಿ ಸಂಭವಿಸಬಹುದು. ಅವು ವ್ಯಕ್ತಿಯ ಬಡತನ, ಶ್ರೀಮಂತಿಕೆ, ವಿದ್ಯಾವಂತಿಕೆ ಅಥವಾ ಅವಿದ್ಯಾವಂತಿಕೆಯನ್ನು ಪರಿಗಣಿಸುವುದಿಲ್ಲ. ಆದ್ದರಿಂದ ಜೀವ ಮತ್ತು ಮರಣದ ನಡುವಿನ ಸೂಕ್ಷö್ಮ ಪರಿಸ್ಥಿತಿಗಳನ್ನು ಎದುರಿಸಲು ಪ್ರತಿಯೊಬ್ಬರೂ ಸಿದ್ಧರಾಗಿರಬೇಕು ಎಂದರು. ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಸ್ವಂತ ಸುರಕ್ಷತೆಯನ್ನು ಖಚಿತಪಡಿಸಿಕೊಂಡು, ಸಂತ್ರಸ್ತರ ಜೀವ ರಕ್ಷಣೆಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ಇಂತಹ ತರಬೇತಿಗಳ ಮೂಲಕ ಅಗತ್ಯ ಕೌಶಲ್ಯಗಳನ್ನು ಪಡೆದುಕೊಂಡು, ವಿಪತ್ತು ಸಂದರ್ಭಗಳಲ್ಲಿ ಧೈರ್ಯದಿಂದ ಕಾರ್ಯನಿರ್ವಹಿಸಿ ಜೀವಗಳನ್ನು ಉಳಿಸುವ ಮೂಲಕ ಸಮಾಜ ಹಾಗೂ ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎನ್ಡಿಆರ್ಎಫ್ ಸಿಬ್ಬಂದಿಯಿAದ ಜೀವ ರಕ್ಷಕ ಸಾಮಗ್ರಿಗಳ ಪ್ರದರ್ಶನ ನಡೆಯಿತು. ಅಪಘಾತ, ಅಗ್ನಿ ಅವಘಡ ಹಾಗೂ ಇತರ ತುರ್ತು ಪರಿಸ್ಥಿತಿಗಳಲ್ಲಿ ಬಳಸಬಹುದಾದ ಪ್ರಥಮ ಚಿಕಿತ್ಸೆ, ಸಿಪಿಆರ್ ಸೇರಿದಂತೆ ವಿವಿಧ ಜೀವ ರಕ್ಷಕ ಕೌಶಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಹಾಗೂ ವೈಆರ್ಸಿ ಘಟಕಗಳ ಕಾರ್ಯಕ್ರಮಾಧಿಕಾರಿಗಳಾದ ಡಾ. ಶೈಲಶ್ರೀ ಕೆ. ಮತ್ತು ಅಲೋಕ್ ಕೆ. ಬಿಜೈ, ಕಾಲೇಜಿನ ಬೋಧಕ ಸಿಬ್ಬಂದಿ, ಎನ್ಡಿಆರ್ಎಫ್ ತಂಡದ ಸದಸ್ಯರು ಹಾಗೂ ಎನ್ಸಿಸಿ, ಎನ್ಎಸ್ಎಸ್ ಮತ್ತು ವೈಆರ್ಸಿ ಸ್ವಯಂಸೇವಕರು ಉಪಸ್ಥಿತರಿದ್ದರು.
ಭುವನಾ ಮತ್ತು ತಂಡದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಎನ್ಸಿಸಿ ಕ್ಯಾಡೆಟ್ ಸಂದೇಶ್ ಸ್ವಾಗತಿಸಿದರು. ತೃತೀಯ ಬಿ.ಕಾಂ ವಿದ್ಯಾರ್ಥಿನಿ ಕವನಾ ಕಾರ್ಯಕ್ರಮ ನಿರೂಪಿಸಿದರು. ಎನ್ಎಸ್ಎಸ್ ಸ್ವಯಂಸೇವಕಿ ಮೇಘಾ ವಂದಿಸಿದರು.
ತರಬೇತಿ ಕಾರ್ಯಕ್ರಮವು ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರಲ್ಲಿ ವಿಪತ್ತು ಸಂದರ್ಭಗಳಲ್ಲಿ ಜವಾಬ್ದಾರಿಯುತವಾಗಿ, ಧೈರ್ಯದಿಂದ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಆತ್ಮವಿಶ್ವಾಸ ಮತ್ತು ಕೌಶಲ್ಯವನ್ನು ಬೆಳೆಸುವಲ್ಲಿ ಸಹಕಾರಿಯಾಯಿತು.