ವೀರಾಜಪೇಟೆ, ಸೆ. ೨೩: ವಿನ್ಯಾಸದಲ್ಲಿ ಸೃಜನಶೀಲತೆ, ಕಲ್ಪನೆಯಲ್ಲಿ ಅಪರೂಪದ ಸೌಂದರ್ಯ ಹಾಗೂ ಆಚರಣೆಯಲ್ಲಿ ಮೈಮನ ರೋಮಾಂಚನಗೊಳಿಸುವ ಕಲಾತ್ಮಕತೆಗೆ ಹೆಸರುವಾಸಿಯಾದ ವೀರಾಜಪೇಟೆಯ ಅರಸು ನಗರದ ಶ್ರೀ ವಿಘ್ನೇಶ್ವರ ಸೇವಾ ಸಮಿತಿಯ ೪೭ನೇ ವರ್ಷದ ಗೌರಿ-ಗಣೇಶೋತ್ಸವವು ಈ ಬಾರಿಯೂ ಗಮನ ಸೆಳೆಯುತ್ತಿದೆ.

ಪ್ರತಿವರ್ಷವೂ ಏನಾದರೊಂದು ಮಹತ್ವದ ಕಲಾಕೃತಿಯನ್ನು ನಾಡಿಗೆ ಪರಿಚಯಿಸುವ ಅರಸು ನಗರದ ಗಣೇಶೋತ್ಸವ ಅಂದರೆನೇ ಅದೊಂದು ಕೌತುಕ. ಕೊನೆಯ ಕ್ಷಣದವರೆಗೂ ಗುಪ್ತವಾಗಿಟ್ಟು, ಉತ್ಸವದ ದಿನ ಅನಾವರಣಗೊಳ್ಳುವ ಆ ದಿವ್ಯ ದೃಶ್ಯವನ್ನು ನೋಡಲು ಕಣ್ಣೆರಡು ಸಾಲದು.

ಅಯೋಧ್ಯೆಯ ಶ್ರೀರಾಮನಂತೆ ಕಂಗೊಳಿಸುತ್ತಿದ್ದಾನೆ ವಿಘ್ನನಿವಾರಕ!

ಈ ಬಾರಿಯ ಗಣೇಶ ಚತುರ್ಥಿಯ ಶುಭದಿನದಂದು ಅರಸು ನಗರದ ಮಂಟಪದಲ್ಲಿ ಅನಾವರಣಗೊಂಡ ದೃಶ್ಯ ಭಕ್ತಾದಿಗಳನ್ನು ಮಂತ್ರಮುಗ್ಧರನ್ನಾಗಿಸಿದೆ. ಭಾರತೀಯರ ದಶಕಗಳ ಕನಸಾದ ಅಯೋಧ್ಯೆಯ ಭವ್ಯ ರಾಮಮಂದಿರದ ಪ್ರತಿ ಕಲಾಕೃತಿಯನ್ನು ಇಲ್ಲಿ ತಥಾರೂಪವಾಗಿ ನಿರ್ಮಿಸಲಾಗಿದೆ. ಮಂದಿರದ ಪ್ರತಿಯೊಂದು ಕಂಬ, ಕೆತ್ತನೆ ಹಾಗೂ ಶಿಖರಗಳ ವಿನ್ಯಾಸಕ್ಕೆ ಎಲ್ಲೂ ಚ್ಯುತಿ ಬಾರದಂತೆ, ಅಯೋಧ್ಯೆಯನ್ನೇ ಅರಸುನಗರಕ್ಕೆ ಧರೆಗಿಳಿಸಿದಂತೆ ಕಲಾವಿದರು ತಮ್ಮ ಹಸ್ತಚಳಕದ ಜಾದೂ ಮೆರೆದಿದ್ದಾರೆ.

ವಿಶೇಷವೆಂದರೆ, ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿ ರುವ ಗಣಪತಿಯ ಮೂರ್ತಿಯೂ ಸಾಕ್ಷಾತ್ ಶ್ರೀರಾಮಚಂದ್ರನ ತೇಜಸ್ಸನ್ನು ಹೋಲುತ್ತಿದೆ. ಧನುರ್ಧಾರಿ ರಾಮನ ಸಾನ್ನಿಧ್ಯದಂತಿರುವ ಈ ವಿನಾಯಕನ ಮೂರ್ತಿಯನ್ನು ಸಮಿತಿಯ ಮನವಿಯಂತೆ ಅತ್ಯಂತ ಶ್ರದ್ಧೆಯಿಂದ ಕಲಾವಿದರು ಕಡೆದು ಕೊಟ್ಟಿದ್ದಾರೆ. ರಾಮಮಂದಿರದ ಮಾದರಿಯೊಳಗೆ ರಾಮರೂಪಿಯಾಗಿ ಮಿಂಚುತ್ತಿರುವ ವಿನಾಯಕನನ್ನು ನೋಡಲು ಭಕ್ತಸಾಗರವೇ ಹರಿದು ಬರುತ್ತಿದೆ.

ನೆನಪಿನ ಬಲೆಯಲ್ಲಿ ಹಳೆಯ ಕಲಾತ್ಮಕ ವೈಭವ:

ಸಾಮಾಜಿಕ ಸಂದೇಶ ಹಾಗೂ ಧಾರ್ಮಿಕ ಭಾವನೆಯನ್ನು ಬೆಸೆಯುವುದು ಅರಸು ನಗರದ ವೈಶಿಷ್ಟ÷್ಯ. ವೃಕ್ಷ ಗಣಪತಿ ರೀತಿ, ಸಾಲುಮರದ ತಿಮ್ಮಕ್ಕನ ನೆನಪಿನಲ್ಲಿ ದಟ್ಟವಾದ ಮರ-ಗಿಡಗಳ ಮಧ್ಯೆ ವಿನಾಯಕನ ಪ್ರತಿಷ್ಠಾಪನೆ. ಸಾಮರಸ್ಯದ ಸಂಕೇತವಾಗಿ ಚರ್ಚ್, ಮಸೀದಿ ಹಾಗೂ ಮಂದಿರಗಳ ಮಾದರಿಯೊಂದಿಗೆ ಕೋಮು ಸೌಹಾರ್ದತೆಯ ಪ್ರದರ್ಶನ. ವೈಷ್ಣೋದೇವಿ ದರ್ಶನದ ಮೂಲಕ ಕೃತಕ ಗುಹಾಂತರ ಕಲಾಕೃತಿಯಲ್ಲಿ ಮೂಡಿಬಂದ ಶಕ್ತಿಪೀಠ. ಶೇಷನಾಗನ ಸನ್ನಿಧಿಯ ರೂಪದಲ್ಲಿ ನಾಗನ ಬೃಹತ್ ಹೆಡೆಯ ಕೆಳಗೆ ವಿರಾಜಮಾನನಾದ ಗಜಾನನ ಮಾದರಿ ನಿರ್ಮಿಸಿ ಗಮನ ಸೆಳೆಯಲಾಗಿತ್ತು.

ಅರಸುನಗರದ ಈ ಉತ್ಸವಕ್ಕೆ ಸುಮಾರು ಐದು ದಶಕಗಳ ಇತಿಹಾಸವಿದೆ. ದಿವಂಗತ ಲಾರೆನ್ಸ್ ಅವರ ನೇತೃತ್ವದಲ್ಲಿ ಯೋಗೇಶ್, ಅರುಣ್, ಜೀವನ್, ಸೆಲ್ವ ಹಾಗೂ ಶಬೀರ್ ಅವರಂತಹ ವಿವಿಧ ಸಮುದಾಯದ ಬಂಧುಗಳು ಒಂದಾಗಿ ಉರಿಸಿದ ಈ ಭಕ್ತಿಯ ದೀಪ, ಇಂದು ಬೃಹತ್ ಜನೋತ್ಸವವಾಗಿ ಬೆಳೆದಿದೆ.

ಪ್ರಸ್ತುತ ಮಣಿ ಅವರ ಅಧ್ಯಕ್ಷತೆಯಲ್ಲಿ, ೬೮ ಉತ್ಸಾಹಿ ಸದಸ್ಯರ ಬಲದೊಂದಿಗೆ ಹಿರಿಯರು-ಯುವಕರು ಕೈಜೋಡಿಸಿ ಉತ್ಸವವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಸಂಪ್ರದಾಯ, ಕಲೆ ಹಾಗೂ ಭಕ್ತಿಯ ಸಂಗಮವಾಗಿರುವ ಅರಸುನಗರದ ಈ ರಾಮರೂಪಿ ಗಣಪನ ದರ್ಶನವನ್ನು ಪಡೆಯುವುದೇ ಕಣ್ಣಿಗೆ ಹಬ್ಬ, ಮನಸ್ಸಿಗೆ ಅಪಾರ ನೆಮ್ಮದಿ.

- ರಜಿತ ಕಾರ್ಯಪ್ಪ