ಸೋಮವಾರಪೇಟೆ, ಸೆ. ೨೩: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೫-೨೬ನೇ ಸಾಲಿನಲ್ಲಿ ರೂ. ೧.೪೩ ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಬಿ. ಸೋಮಯ್ಯ ತಿಳಿಸಿದರು.
ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ರೂ. ೫೩೧ ಕೋಟಿ ೩೮ ಲಕ್ಷ ವ್ಯವಹಾರ ನಡೆಸಿ ರೂ. ೧.೪೩ ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. ೨೨ ಲಾಭಾಂಶ ನೀಡಲು ತೀರ್ಮಾನಿಸಲಾಗಿದೆ ಎಂದರು.
ಸAಘವು ಜನಸೇವೆಯಲ್ಲಿ ಸಾರ್ಥಕ ೧೦೬ ವರ್ಷಗಳನ್ನು ಪೂರೈಸಿದೆ. ಸಂಘದಲ್ಲಿ ವರ್ಷಾಂತ್ಯಕ್ಕೆ ಒಟ್ಟು ೪೭೨೩ ಸದಸ್ಯರಿದ್ದು, ರೂ. ೩.೯೬ ಕೋಟಿ ಸದಸ್ಯರಿಂದ ಷೇರು ಹಣ ಸಂಗ್ರಹಿಸಲಾಗಿದೆ. ಜಾಮೀನು ಸಾಲದ ವಿಮಾ ಯೋಜನೆ, ಪಿಗ್ಮಿ ಓವರ್ಡ್ರಾಫ್ಟ್ ಸಾಲದ ವಿಮಾ ಯೋಜನೆ, ಸ್ವ ಸಹಾಯ ಮತ್ತು ಜಂಟಿ ಭಾದ್ಯತಾ ಗುಂಪುಗಳ ಯೋಜನೆಯನ್ನು ರೂಪಿಸಲಾಗಿದೆ. ಹಿಂದಿನಿAದ ಇಲ್ಲಿಯವರೆಗೂ ಸಂಘ ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ಎ. ತರಗತಿಯನ್ನು ಪಡೆದುಕೊಂಡಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
ಸಂಘದಲ್ಲಿ ಯಶಸ್ವಿನಿ ರೈತರ ವಿಮಾ ಯೋಜನೆ ಜಾರಿಯಲ್ಲಿದೆ. ಜಾಮೀನು ಸಾಲ, ಕೆಸಿಸಿ ಫಸಲು ಸಾಲ, ಕೃಷಿಯೇತರ ಆಸ್ತಿ ಆಧಾರಿತ ಸಾಲ, ಮಧ್ಯಮಾವಧಿ ಸಾಲ, ಪಶು ಸಂಗೋಪನೆ, ಜಂಟಿ ಭಾದ್ಯತೆ ಸಾಲ, ಸೋಲಾರ್ ಸಿಸ್ಟಂ, ಪಿಗ್ಮಿ ಓವರ್ ಡ್ರಾಫ್ಟ್, ಸ್ವ ಸಹಾಯ ಗುಂಪು ಸಾಲ, ಆಭರಣ ಈಡಿನ ಸಾಲ, ಗೃಹ ನಿರ್ಮಾಣ, ಪಿಗ್ಮಿ ಠೇವಣಿ, ವಾಹನ ಖರೀದಿ, ಸ್ವರ್ಣ ನಾಣ್ಯ ಯೋಜನೆ ಸೇರಿದಂತೆ ಇನ್ನಿತರ ಸಾಲಗಳನ್ನು ನೀಡಲಾಗುತ್ತಿದ್ದು, ಸದಸ್ಯರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿದ್ದ ಹಿರಿಯ ಸದಸ್ಯರಾದ ಸದಾಶಿವಯ್ಯ ಮಾತನಾಡಿ, ವಾರ್ಷಿಕ ಸಭೆಯಲ್ಲಿ ಸಂಘದ ನಾಲ್ಕು ಜನ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸುವಂತೆ ಸಲಹೆ ನೀಡಿದರು. ವಾರ್ಷಿಕ ಮಹಾಸಭೆಗೂ ಮುನ್ನ ೧೫ದಿನ ಮುಂಚಿತವಾಗಿ ಸದಸ್ಯರಿಗೆ ವಾರ್ಷಿಕ ಲೆಕ್ಕ ಪತ್ರ ನೀಡುವಂತೆ ಹಿರಿಯ ಸದಸ್ಯ ತೇಜಸ್ವಿ ಮನವಿ ಮಾಡಿದರು.
ಇದೇ ಸಂದರ್ಭ ಜಿಲ್ಲೆಯ ರೈತರನ್ನು ಕಾಡುತ್ತಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ನಿರ್ಣಯ ಕೈಗೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕಳಿಸಲು ಸಭೆ ತೀರ್ಮಾನಿಸಿತು.
೨೦೨೫-೨೬ನೇ ಸಾಲಿನ ೭ನೇ ತರಗತಿ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರ ಮತ್ತು ಸಂಘದ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ಸದಸ್ಯೇತರ ಮಕ್ಕಳಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು. ಸಂಘದ ಶತಮಾನೋತ್ಸವ ವಿದ್ಯಾನಿಧಿಯಿಂದ ತಾಲೂಕಿನ ವಸತಿ ರಹಿತ ಸರ್ಕಾರಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಸ್ನೇಹಾಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ಕೆ. ಚಂದ್ರಶೇಖರ್, ನಿರ್ದೆಶಕರುಗಳಾದ ಬಿ.ಎಂ. ಸುರೇಶ್, ಹೆಚ್.ಕೆ. ಮಾದಪ್ಪ, ರೂಪಾ ಸತೀಶ್, ಬಿ.ಜೆ. ದೀಪಕ್, ಕೆ.ಕೆ. ಚಂದ್ರಿಕಾ, ಕೆ.ಟಿ. ಸುಭಾಷ್, ಬಿ.ಶಿವಪ್ಪ, ಪಿ.ಕೆ. ರವಿ, ಎಂ.ವಿ. ದೇವರಾಜ್, ಬಿ.ಕೆ. ಉದಯಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಅವರುಗಳು ಉಪಸ್ಥಿತರಿದ್ದರು.