ಸೋಮವಾರಪೇಟೆ, ಸೆ. ೨೩: ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ೧.೨೩ ಕೋಟಿ ರೂ.ಗಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.೨೫ ರಷ್ಟು ಲಾಭಾಂಶ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್.ಬಿ ಭರತ್ ಕುಮಾರ್ ಹೇಳಿದರು.

ಸಂಘದ ಆವರಣದಲ್ಲಿ ನಡೆದ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ೨೭೯೧ ಸದಸ್ಯರಿದ್ದು, ೬೧.೪೪ಕೋಟಿ ರೂ. ದುಡಿಯುವ ಬಂಡವಾಳವನ್ನು ಹೊಂದಿದೆ. ೨೦೨೬-೨೭ನೇ ಸಾಲಿಗೆ ೫೩.೯೪ ಕೋಟಿ ರೂ.ಗಳಷ್ಟು ಸದಸ್ಯರಿಗೆ ಸಾಲವನ್ನು ವಿತರಿಸಲಾಗಿದೆ. ೨೦೨೪-೨೫ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಕೇಂದ್ರ ಬ್ಯಾಂಕ್‌ನಿAದ ನಮ್ಮ ಸಂಘಕ್ಕೆ ತೃತೀಯ ಬಹುಮಾನ ದೊರಕಿದೆ ಎಂದು ಹೇಳಿದರು.

೨೦೨೪-೨೫ನೇ ಸಾಲಿನಲ್ಲಿ ೫೦೫ ಮಂದಿ ಸದಸ್ಯರಿಗೆ ಶೇ.೧೦.೫ ಬಡ್ಡಿ ದರದಲ್ಲಿ ಜಾಮೀನು ಸಾಲ ನೀಡಿದ್ದು, ೯ ಕೋಟಿ ರೂ, ಅಸಲು ಮತ್ತು ೬೭ ಲಕ್ಷ ರೂ. ಬಡ್ಡಿಯನ್ನು ಪಡೆಯಲಾಗಿದೆ. ಎಲ್ಲಾ ಸದಸ್ಯರು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುತ್ತಿರುವುದರಿಂದ ಸಂಘದ ವ್ಯವಹಾರ ಉತ್ತಮವಾಗಿದೆ ಎಂದರು.

ಕೆಸಿಸಿ ಸಾಲ ಪಡೆದ ಸದಸ್ಯರು ತಮ್ಮ ಸ್ವಾಧೀನಕ್ಕೆ ಸೇರಿದ ಆರ್‌ಟಿಸಿಯಲ್ಲಿ ಜಂಟಿ ಹೆಸರುಗಳು ಇದ್ದರೆ ಅವುಗಳನ್ನು ತೆಗೆದು ಹಾಕಿಸಿ, ಸಿಂಗಲ್ ಆರ್‌ಟಿಸಿಯಾಗಿ ಪರಿವರ್ತನೆ ಮಾಡಿಕೊಂಡರೆ ಮಾತ್ರ ಕೆಸಿಸಿ ಸಾಲ ಪಡೆದುಕೊಳ್ಳಲು ಸುಲಭವಾಗುತ್ತದೆ ಎಂದು ಹೇಳಿದರು.

ಸಂಘದ ಸದಸ್ಯರಾದ ಕೆ.ಬಿ ಚಂದ್ರಶೇಖರ್, ಕೆ.ಕೆ ಕುಶ್ವಂತ್, ದೇವರಾಜ್, ಎಚ್.ಕೆ. ಪ್ರಸಿ, ಶುಂಠಿ ಕುಮಾರ್, ಕೆ.ಪಿ ಕೊಮಾರಪ್ಪ, ಬಿ.ಎಂ ಸುರೇಶ್ ಮತ್ತಿತರರು ಸಂಘದ ಅಭಿವೃದ್ಧಿಯ ಬಗ್ಗೆ ಸುದೀರ್ಘ ಚರ್ಚೆ ಮಾಡಿದರು.

ಸಂಘದ ನೂತನ ಕಟ್ಟಡದ ಮುಂದುವರಿದ ಕಾಮಗಾರಿಗೆ ಮಹಾಸಭೆ ಒಪ್ಪಿಗೆ ನೀಡಿತು. ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ರೈತ ಸಂಘದ ಉಪಾಧ್ಯಕ್ಷ ಜಿ.ಎಂ ಹೂವಯ್ಯ ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಆಗುವ ಅನಾಹುತಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಕೊಡಗು ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ವಿರೋಧಿಸಿ ಸಭೆ ನಿರ್ಣಯಿಸಿತು.

ಸಭೆಯಲ್ಲಿ ಉಪಾಧ್ಯಕ್ಷೆ ಎಚ್.ಎಸ್.ನೇತ್ರಾವತಿ, ನಿರ್ದೇಶಕರಾದ ಎಚ್.ಆರ್.ಸುರೇಶ್, ಬಿ.ಪಿ.ಮೊಗಪ್ಪ. ಕೆ.ಕೆ.ಶಿವಪ್ರಕಾಶ್, ಹೆಗ್ಗುಳ ಹೂವಯ್ಯ, ಎ.ಎಸ್ ನವೀನ್ ಕುಮಾರ್, ಜಿ.ಎಸ್ ನಾಗರಾಜು, ಕೆ.ಜಿ ದಿನೇಶ್, ಸುನಿತಾ ಚಂದ್ರಪ್ಪ, ಜಿ.ಈ ಸುರೇಶ್, ಜಿ.ಬಿ ಗಿರೀಶ್, ಕೆ.ಎಲ್.ರಕ್ಷಿತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್ ಕಿರಣ್ ಇದ್ದರು.