ಕೊಡ್ಲಿಪೇಟೆ, ಸೆ. ೨೩: ಕೊಡ್ಲಿಪೇಟೆ ಒಕ್ಕಲಿಗ ಯುವ ವೇದಿಕೆ ವತಿಯಿಂದ ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಆಸ್ಪತ್ರೆಯ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ವೇದಿಕೆಯ ಸದಸ್ಯರು ಶ್ರಮದಾನದ ಮೂಲಕ ತೆರವುಗೊಳಿಸಿ, ಆವರಣವನ್ನು ಶುಚಿಗೊಳಿಸಿದರು. ಸ್ವಚ್ಛತಾ ಕಾರ್ಯ ನಡೆಯುತ್ತಿದ್ದ ವೇಳೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭೇಟಿ ನೀಡಿ ವೇದಿಕೆಯ ಶ್ರಮದಾನವನ್ನು ಶ್ಲಾಘಿಸಿದರು.
ಯುವ ವೇದಿಕೆ ಅಧ್ಯಕ್ಷ ಸಚಿನ್ ಡಿ. ಮಾತನಾಡಿ, ಆಸ್ಪತ್ರೆಯ ಆವರಣವನ್ನು ಪರಿಶೀಲಿಸಿದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಡು ಬೆಳೆದಿರುವುದು ಗಮನಕ್ಕೆ ಬಂದಿತ್ತು. ಇದರಿಂದ ಆಸ್ಪತ್ರೆಯ ಕೊಠಡಿಗಳಿಗೆ ಹಾವುಗಳು ಸೇರಿದಂತೆ ಹುಳುಗಳು ಬರುವ ಸಾಧ್ಯತೆ ಇರುವುದನ್ನು ಮನಗಂಡು, ಯುವ ವೇದಿಕೆಯು ಸದಸ್ಯರು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಧನಿಕ ಮಾತನಾಡಿ, ಆಸ್ಪತ್ರೆಯ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳುವಂತೆ ಹಲವು ಬಾರಿ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಒಕ್ಕಲಿಗ ಯುವ ವೇದಿಕೆಯವರು ಆಸ್ಪತ್ರೆಯ ಸಂಪೂರ್ಣ ಪರಿಸರವನ್ನು ಸ್ವಚ್ಛಗೊಳಿಸಿರುವುದು ಶ್ಲಾಘನೀಯ ಎಂದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಒಕ್ಕಲಿಗ ಯುವ ವೇದಿಕೆ ಕಾರ್ಯದರ್ಶಿ ಅವಿನಾಶ್, ಉಪಾಧ್ಯಕ್ಷ ಪ್ರವೀಣ್, ಉಮೇಶ್, ಕಾಂತರಾಜ್, ದಯಾನಂದ್, ನಾಗೇಶ್, ಶೋಭಿತ್, ಕೀರ್ತಿ, ದೇವರಾಜ್, ದಿನೇಶ್, ಸಂದೇಶ್, ಮಧು, ರುದ್ರೇಶ್, ಕಿಶೋರ್, ಯತೀಶ್, ಗಣೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.