ಗೋಣಿಕೊಪ್ಪ ವರದಿ, ಸೆ. ೨೩; ಮಾಯಮುಡಿ ಗ್ರಾಮದಲ್ಲಿ ಕಾಡಾನೆ ಉಪಟಳ ಗ್ರಾಮಸ್ಥರನ್ನು ಕಂಗಾಲಾಗಿಸಿದೆ.
ಆಪಟ್ಟೀರ ಎಸ್. ಹರೀಶ್ ಎಂಬವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ನಿತ್ಯ ಕಾಡಾನೆ ಓಡಾಟದಿಂದ ನಷ್ಟ ಹೆಚ್ಚಾಗುತ್ತಿದೆ. ಸುಮಾರು ಮೂರು ಎಕರೆ ಭೂಮಿಯಲ್ಲಿ ಬೆಳೆದ ಭತ್ತ ಉತ್ತಮವಾಗಿ ಬೆಳೆದು ನಿಂತಿದ್ದು, ಒಂದು ವಾರದಿಂದ ಕಾಡಾನೆ ಹಿಂಡು ಇಲ್ಲಿ ರಾತ್ರಿ ಕಳೆಯುತ್ತಿವೆ. ಇಡೀ ಗದ್ದೆಯನ್ನು ಮೇಯುತ್ತಿರುವ ಕಾಡಾನೆಗಳು ರೈತನಿಗೆ ಏನು ಉಳಿಸಲಾಗದ ಹಂತದಲ್ಲಿದೆ. ಬೆಳೆದು ಗರ್ಭಾವಸ್ಥೆ ಹಂತಕ್ಕೆ ತಿರುಗುವ ಮೊದಲೇ ಕಾಡಾನೆಗಳ ಹೊಟ್ಟೆಗೆ ಸೇರುತ್ತಿರುವುದು ಬೇಸರ ಮೂಡಿಸಿದೆ. ರೈತ ಏನು ಮಾಡಲಾಗದ ಸ್ಥಿತಿಯಲ್ಲಿದ್ದಾರೆ.
ಸ್ಥಳೀಯರ ಅಭಿಪ್ರಾಯದಂತೆ ಮರಿ ಸೇರಿದಂತೆ ೪ ಆನೆಗಳ ಹಿಂಡು ಉಪಟಳ ನೀಡುತ್ತಿದೆ. ಅರಣ್ಯ ಇಲಾಖೆ ಮಾಹಿತಿಯಂತೆ ಒಂದು ಆನೆ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ತಿತಿಮತಿ ಭಾಗದಿಂದ ಬರುವ ಆನೆಗಳಿಗೆ ಸೂಕ್ತ ತಡೆ ಇಲ್ಲದ ಕಾರಣ ನೇರವಾಗಿ ಗದ್ದೆಗೆ ದಾಳಿ ಇಡುವಂತಾಗಿದೆ. ಅರಣ್ಯ ಇಲಾಖೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.