ಕಡಂಗ: ಸ್ಥಳೀಯ ಅರಪಟ್ಟು ಪೊದವಾಡ ಶ್ರೀ ಬಲಮುರಿ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ೩೫ನೇ ವರ್ಷದ ಗೌರಿ ಗಣೇಶೋತ್ಸವ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ನಡೆಯಿತು. ಉತ್ಸವದ ಕೊನೆಯ ದಿನ ಮಹಾಪೂಜೆ ಮತ್ತು ಸಾರ್ವಜನಿಕರಿಗೆ ಅನ್ನದಾನ ನೀಡಲಾಯಿತು ಈ ಸಂದರ್ಭ ಊರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ವಿಸರ್ಜನಾ ಸಮಯದಲ್ಲಿ ಸಿಡಿಮದ್ದು ಪ್ರದರ್ಶನ ಗಮನ ಸೆಳೆಯಿತು.

ಭಾನುವಾರ ಮಧ್ಯಾಹ್ನ ಶ್ರೀ ಮಹಾಗಣಪತಿ ವಿಸರ್ಜನಾ ಮೂರ್ತಿಯನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಡಿಜೆ ಮತ್ತು ಭಕ್ತಿ ಗೀತೆಗಳ ಮೂಲಕ ಪಟ್ಟಣದ ಪ್ರಮುಖ ರಸ್ತೆ ಮೂಲಕ ಮೆರವಣಿಗೆಯೊಂದಿಗೆ ಪೊದ್ದಮಾನಿ ಕಾಂಡಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು ಗೌರಿ ಗಣೇಶೋತ್ಸವದ ಪ್ರಯುಕ್ತ ಕಡಂಗದ ಪ್ರಮುಖ ಬೀದಿಗಳನ್ನು ಅಲಂಕಾರ ಮಾಡಲಾಗಿತ್ತು. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದರು.

ಸುಂಟಿಕೊಪ್ಪ: ಗಣೇಶ ಚತುರ್ಥಿ ಅಂಗವಾಗಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಭಾನುವಾರ ರಾತ್ರಿ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಇರಿಸಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ವಿಸರ್ಜಿಸಲಾಯಿತು.

ಸಮೀಪದ ಭೂತನಕಾಡು ಓಂ ಶಕ್ತಿ ಯುವಕ ಸಂಘದ ವತಿಯಿಂದ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಉತ್ಸವ ಮೂರ್ತಿಯ ವಿಸರ್ಜನ ಮೆರವಣಿಗೆ ವಿವಿಧ ಪೂಜಾ ಕೈಂಕರ್ಯದ ನಂತರ ನಡೆಯಿತು.ತೋಟದ ಕಾರ್ಮಿಕರು ಸೇರಿದಂತೆ ಸುತ್ತಮುತ್ತಲ ನೂರಾರು ಸಂಖ್ಯೆಯ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ತೆಂಗಿನ ಕಾಯಿ ಹೊಡೆದು ಹರಕೆ ಸಮರ್ಪಿಸಿ ಮೆರವಣಿಗೆಯಲ್ಲಿ ಕುಣಿದು ಸಂತೋಷಪಟ್ಟರು.

ಹೊರೂರು ಮಠದಲ್ಲಿ ಪ್ರತಿಷ್ಠಾಪಿಸಲಾಗಿದ್ದ ೨೫ನೇ ವರ್ಷದ ಸಾರ್ವಜನಿಕ ಗಣೇಶ ಮೂರ್ತಿಯ ವಿಸರ್ಜನೋತ್ಸವ ಅದ್ಧೂರಿಯಾಗಿ ನಡೆಯಿತು. ಆಕರ್ಷಕವಾದ ಟ್ಯಾಬ್ಲೋದಿಂದ ಮೆರವಣಿಗೆಯಲ್ಲಿ ಯುವಕ ಯುವತಿಯರ ನೃತ್ಯ ಮೆರುಗು ನೀಡಿತು.

ಸಮೀಪದ ಗುಂಡುಗುಟ್ಟಿ ವಿನಾಯಕ ಸೇವಾ ಸಮಿತಿ ವತಿಯಿಂದ ಶ್ರೀ ರಕ್ತೇಶ್ವರಿ, ಚಾಮುಂಡೇಶ್ವರಿ ದೇವಾಲಯದಲ್ಲಿ ಪ್ರತಿಷ್ಠಾಪಿ ಸಲಾಗಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

೭ ದಿನಗಳ ಕಾಲ ಪ್ರಧಾನ ಅರ್ಚಕ ನಾರಾಯಣ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಭಾನುವಾರ ಮಧ್ಯಾಹ್ನ ೨ ಗಂಟೆಗೆ ಕೊನೆಯ ಪೂಜೆಯ ನಂತರ ಅತ್ಯಾಕರ್ಷಕವಾದ ವಿದ್ಯುತ್ ಅಲಂಕೃತ ಮಂಟಪದೊದಿಗೆ ಮಾದಾಪುರ ರಸ್ತೆಯ ಮೂಲಕ ಸಾಗಿ ಹರದೂರು ಹೊಳೆಯಲ್ಲಿ ವಿಸರ್ಜಿಸಲಾಯಿತು. ವಿಸರ್ಜನೋತ್ಸವ ಮೆರವಣಿಗೆ ವೇಳೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ನಾರ್ಗಾಣೆ ಗ್ರಾಮದ ಶ್ರೀ ದೇವಿಯ ವಿನಾಯಕ ಸೇವಾ ಸಮಿತಿಯ ೧೩ನೇ ವರ್ಷದ ಗೌರಿ ಗಣೇಶೋತ್ಸವÀ ವಿಸರ್ಜನೋತ್ಸವವು ಅದ್ಧೂರಿಯಾಗಿ ನಡೆಯಿತು.

ಅಣ್ಣಪ್ಪಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಉತ್ಸವ ಮೂರ್ತಿಗೆ ಪ್ರತಿನಿತ್ಯ ಪೂಜೆ, ವಿಶೇಷ ಪೂಜೆ ಅಲಂಕಾರ ಪೂಜೆ, ಮಹಾಪೂಜೆಗಳು ಅರ್ಚಕರಾದ ಅವಿನಾಶ್ ಆರಾಧ್ಯ ಅವರ ನೇತೃತ್ವದಲ್ಲಿ ನಡೆಯಿತು.

ವಿವಿಧ ಗ್ರಾಮಗಳ ನೂರಾರು ಭಕ್ತರು ಉತ್ಸವ ಮೂರ್ತಿಗೆ ನಮನ ಸಲ್ಲಿಸಿದರು. ನಂತರ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ನಂತರ ವಿದ್ಯುತ್ ದೀಪ ಅಲಂಕೃತ ಭವ್ಯ ಮಂಟಪದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಇರಿಸಿ ದೇವಾಲಯದಿಂದ ಪ್ರಾರಂಭವಾಗಿ ಗದ್ದೆಹಳ್ಳದವರೆಗೆ ಸಾಗಿ ಅಲ್ಲಿಂದ ಹಿಂತಿರುಗಿ ಗ್ರಾಮದ ಮುಖ್ಯಬೀದಿಯಲ್ಲಿ ಡಿಜೆ ಸಂಗೀತಕ್ಕೆ ಜನ ಕುಣಿಯುತ್ತಾ, ಘೋಷಣೆ ಕೂಗುತ್ತಾ ಅದ್ಧೂರಿಯಾಗಿ ಮೆರವಣಿಗೆ ನಡೆಸಿ ನಂತರ ಶ್ರೀದೇವಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಆರ್ಚಕರುಗಳಾದ ಅವಿನಾಶ್ ಆರಾಧ್ಯ, ಲೋಕೇಶ್ ಆರಾಧ್ಯ ಹಾಗೂ ಪ್ರಕಾಶ್ ಆರಾಧ್ಯ ತಂಡದವರು ವಿಶೇಷ ಪೂಜೆ ಹಾಗೂ ಮೆರವಣಿಗೆಯಲ್ಲಿ ಭಕ್ತರ ಪೂಜೆಗಳನ್ನು ನೆರವೇರಿಸಿದರು. ಗ್ರಾ.ಪಂ.ಮಾಜಿ ಸದಸ್ಯ ಗಿರಿಯಪ್ಪಮನೆ ನಿವಾಸಿ ಅಂಬಚ್ಚು ತಂಪುಪಾನಿಯವನ್ನು ವಿತರಿಸಿದರು. ಈ ಸಂದರ್ಭ ಸಮಿತಿಯ ಪುನೀತ್ ಕುಮಾರ್, ಮನುಕುಮಾರ್, ಆಕಾಶ್, ಮೋಹನ, ಶಿವಪ್ರಸಾದ್, ಅನಿ, ಮುರುಗ, ಬಿಂದು, ಮಣಿ, ವಸಂತ, ದಯಾನಂದ, ಕಿರಣ್, ಸುಧಿ, ಸಂಜು, ಶಿವಪ್ಪ, ರಾಜ, ಆನಂದ, ಬಿ.ಡಿ. ರಾಜುರೈ, ಶರತ್, ವಿವೇಕ್‌ರೈ, ಕುಶಾಲಪ್ಪ, ಪಿ.ಆರ್. ಸುನಿಲ್‌ಕುಮಾರ್ ಹಾಗೂ ಸಮಿತಿ ಸದಸ್ಯರು ಗ್ರಾಮಸ್ಥರು ಇದ್ದರು. ಮಡಿಕೇರಿ: ಶಾಂತಿನಿಕೇತನ ಯುವಕ ಸಂಘದ ವತಿಯಿಂದ ೪೮ನೇ ವರ್ಷದ ಗಣೇಶೋತ್ಸವದ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.

ಶಿಬಿರದಲ್ಲಿ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು. ಒಟ್ಟು ೫೧ ಮಂದಿ ರಕ್ತದಾನ ಮಾಡಿದರು.

“ರಕ್ತದಾನ ಮತ್ತೊಂದು ಜೀವವನ್ನು ಉಳಿಸುವ ಮಹತ್ವದ ಸೇವೆಯಾಗಿದೆ. ಸಾರ್ವಜನಿಕರಿಂದ ದೊರೆತ ಸಹಕಾರ ಮತ್ತು ಸ್ಪಂದನೆ ಇನ್ನಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳಲು ಪ್ರೇರಣೆ ಯಾಗಿದೆ,” ಎಂದು ಕೆ.ಹೆಚ್.ಚೇತನ್ ತಿಳಿಸಿದರು. ಸೆ.೨೬ರಂದು ಮಹಾಪೂಜೆಯ ನಂತರ ಶ್ರೀ ಮಹಾ ಗಣಪತಿ ಮೂರ್ತಿಯನ್ನು ಕಥಾ ಸಾರಾಂಶವುಳ್ಳ ಅಲಂಕೃತ ಮಂಟಪದಲ್ಲಿ ಅದ್ಧೂರಿ ಶೋಭಾಯಾತ್ರೆಯ ಮೂಲಕ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಕೊಂಡೊಯ್ದು ಗೌರಿ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಮಾಹಿತಿ ನೀಡಿದರು. ಮೂರ್ನಾಡು: ಮೂರ್ನಾಡು ಪಟ್ಟಣದಲ್ಲಿ ವಿವಿಧ ಸಂಘಗಳ ವತಿಯಿಂದಗೌರಿ-ಗಣೇಶೋತ್ಸವದ ದಿನ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಶ್ರದ್ಧಾಭಕ್ತಿಯಿಂದ ೭ ದಿನಗಳವರೆಗೆ ಪೂಜಾ ಕೈಂಕರ್ಯಗಳನ್ನು ನಡೆಸಿ ಭಾನುವಾರ ರಾತ್ರಿ ಬಲಮುರಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.

ಮೂರ್ನಾಡಿನ ವೆಂಕಟೇಶ್ವರ ಕಾಲೋನಿಯ ವಿನಾಯಕ ಯುವಕ ಮಂಡಳಿಯ ವತಿಯಿಂದ ೩೫ನೇ ವರ್ಷದ ಗೌರಿ-ಗಣೇಶೋತ್ಸವದ ಗಣೇಶ ಉತ್ಸವಮೂರ್ತಿ, ಮೂರ್ನಾಡು ಗಾಂಧಿನಗರದ ಶ್ರೀ ರಾಮ ಮಂದಿರ ಸೇವಾ ಸಮಿತಿಯ ವತಿಯಿಂದ ೩೪ನೇ ವರ್ಷದ ಗೌರಿ-ಗಣೇಶೋತ್ಸವದ ಉತ್ಸವ ಗಣೇಶ ಮೂರ್ತಿ, ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ ಮೂರ್ನಾಡು ಪಟ್ಟಣದ ಟಿ ಜಂಕ್ಷನ್‌ನಲ್ಲಿ ೩೨ನೇ ವರ್ಷದ ಗೌರಿ-ಗಣೇಶೋತ್ಸವದಗಣೇಶ ಮೂರ್ತಿ, ಗಜೇಂದ್ರ ಯುವ ಶಕ್ತಿ ಸಂಘದ ವತಿಯಿಂದ ೭ನೇ ವರ್ಷದ ಗೌರಿ-ಗಣೇಶೋತ್ಸವದ ಗಣೇಶ ಮೂರ್ತಿ, ಅಯ್ಯಪ್ಪ ಗೆಳೆಯರ ಬಳಗ, ಎಂ-ಟೌನ್ ಇವರ ವತಿಯಿಂದ ೩ನೇ ವರ್ಷದ ಗೌರಿ-ಗಣೇಶೋತ್ಸವದ ವಿನಾಯಕ ಮೂರ್ತಿ, ಕೋಡಂಬೂರಿನ ವಿಘ್ನೇಶ್ವರ ಗೆಳೆಯರ ಬಳಗದಿಂದ ೧೮ನೇ ವರ್ಷದ ಗೌರಿ-ಗಣೇಶೋತ್ಸವ ಅಂಗವಾಗಿ ಗಣೇಶ ಮೂರ್ತಿಗಳನ್ನು ಅಲಂಕೃತ ಮಂಟಪದಲ್ಲಿರಿಸಿ ಮೂರ್ನಾಡಿನ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಗಣೇಶ ಉತ್ಸವ ಮೂರ್ತಿಗಳನ್ನೊತ್ತ ಆರು ವಿದ್ಯುತ್‌ಲಂಕೃತ ಮಂಟಪಗಳ ಮುಂದೆಯು ಡಿಜೆ ಸೌಂಡ್ಸ್ಗಳ ಅಬ್ಬರವಿತ್ತು.

ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಚಂದ್ರಶೇಖರ್‌ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು. ಮೂರ್ನಾಡು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಸಾರ್ವಜನಿಕರು, ಮಹಿಳೆಯರು, ಮಕ್ಕಳು ಡಿಜೆ ಸೌಂಡ್ಸ್ನ ಅಬ್ಬರಕ್ಕೆ ಹೆಜ್ಜೆ ಹಾಕುತ್ತ, ಮೂರ್ನಾಡಿನ ಮುಖ್ಯ ರಸ್ತೆಗಳಲ್ಲಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.

ನಂತರ ಬಲಮುರಿಯಕಾವೇರಿ ನದಿಯಲ್ಲಿ ಎಲ್ಲಾ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಸ್ಕಂದ ಯುವಕ ಸಂಘ ಐಗೂರು: ಐಗೂರಿನ ಗಡಿನಾಡ ದುರ್ಗಾ ನಗರದಲ್ಲಿ ಸ್ಕಂದ ಯುವಕ ಸಂಘ ಹಾಗೂ ಕರಿಮಾರಿಯಮ್ಮ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ೫ನೇ ವರ್ಷದ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಯಿತು.

ಗೌರಿ ಗಣೇಶ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಬ್ಯಾಂಡ್ ಗೋಷ್ಠಿಗಳೊಂದಿಗೆ ಮೆರವಣಿಗೆ ಹೊರಟು ಗ್ರಾಮ ದೇವತೆಗಳಾದ ಕರಿಮಾರಿಯಮ್ಮ, ಮುತ್ತಪ್ಪ ದೇವಾಲಯ, ಮತ್ತು ಗುಳಿಗಪ್ಪ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು. ಮೆರವಣಿಗೆ ಮನೆಗಳ ಮುಂದೆ ಹಾದು ಬಂದಾಗ ಗ್ರಾಮಸ್ಥರು ಗಣಪನಿಗೆ ಹಣ್ಣು ಕಾಯಿ ಸಲ್ಲಿಸುವುದರ ಮುಖಾಂತರ ಭಕ್ತಿಗೆ ಪಾತ್ರರಾದರು. ಉತ್ಸವದಲ್ಲಿ ಬಾಳುಪೇಟೆಯ ಬ್ಯಾಂಡ್ ವಾದನವು ಕಾರ್ಯಕ್ರಮಕ್ಕೆ ಮೆರಗನ್ನು ನೀಡಿತು. ಬ್ಯಾಂಡ್ ವಾದನಕ್ಕೆ ಗ್ರಾಮದ ವೃದ್ಧರು, ಯುವಕರು ಮತ್ತು ಮಹಿಳೆಯರು ಕುಣಿದು ಕುಪ್ಪಳಿಸಿದರು. ಪೂಜಾರಿ ನರಸಿಂಹನವರು ಶಾಸ್ತೊçÃಕ್ತವಾಗಿ ಪೂಜೆ ನೆರವೇರಿಸಿದ ನಂತರ ಚೋರನ ಹೊಳೆಯಲ್ಲಿ ಮೂರ್ತಿಯನ್ನು ವಿಸರ್ಜಿಸಲಾಯಿತು. ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ನಡೆಯಿತು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಪೊಲೀಸರ ಜೊತೆ ಉತ್ಸವ ಸಮಿತಿಯ ಸದಸ್ಯರು ಸಹಕರಿಸಿದರು.