ಕೂಡಿಗೆ, ಸೆ. ೨೨: ಕುಶಾಲನಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಸುಂಟಿಕೊಪ್ಪ ರೈತ ಸಂಘದಿAದ ಕುಶಾಲನಗರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಕೊಡಗು ಜಿಲ್ಲೆಯ ಇತರೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ, ಕುಶಾಲನಗರ ತಾಲೂಕನ್ನು ಮಾತ್ರ ಬರಪೀಡಿತ ತಾಲೂಕು ಎಂದು ಘೋಷಿಸದಿರುವುದು ಖಂಡನೀಯ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸರಕಾರ ಮತ್ತು ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು. ರೈತ ಸಂಘದ ಅಧ್ಯಕ್ಷ ಕ್ಲೆöÊವ್ ಪೊನ್ನಪ್ಪ ಮಾತನಾಡಿ, ಅಧಿಕಾರಿಗಳು ಸರಕಾರಕ್ಕೆ ಸೂಕ್ತ ವರದಿ ಸಲ್ಲಿಸಬೇಕಿದೆ. ಸರಕಾರ ವಿಳಂಬ ಮಾಡದೆ ಬರಪೀಡಿತ ಎಂದು ಕುಶಾಲನಗರ ತಾಲೂಕನ್ನು ಘೋಷಣೆ ಮಾಡಬೇಕು. ತಪ್ಪಿದಲ್ಲಿ ರೈತ ಸಂಘಟನೆಗಳ ಸಹಕಾರ ಪಡೆದು ಕುಶಾಲನಗರ ತಾಲೂಕು ಬಂದ್ಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹೇರೂರು ಮಾತನಾಡಿ, ಕುಶಾಲನಗರ ತಾಲೂಕಿನಲ್ಲಿ ವಾಡಿಕೆಯಂತೆ ೫೦ ಇಂಚು ಮಳೆಯಾಗುತ್ತಿತ್ತು. ಆದರೆ ಈ ಸಾಲಿನಲ್ಲಿ ೧೬ ಇಂಚು ಕೂಡ ದಾಟಿಲ್ಲ. ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮೆಕ್ಕೆಜೋಳ, ಭತ್ತ, ರಾಗಿ, ಬೆಳೆಗಳು ಒಣಗುತ್ತಿವೆ. ಅಲ್ಲದೆ ಈಗಾಗಲೇ ಹಾರಂಗಿ ಅಣೆಕಟ್ಟೆಯ ನೀರನ್ನು ನದಿಗೆ ಹರಿಸಿ ಖಾಲಿ ಮಾಡಲಾಗುತ್ತಿದೆ. ಜೊತೆಗೆ ಹಾರಂಗಿ ಮುಖ್ಯ ನಾಲೆಯಲ್ಲಿ ಉಪ ಬೆಳೆಗೆ ಹರಿಸಲಾಗಿದ್ದ ನೀರನ್ನು ಸಹ ಸ್ಥಗಿತಗೊಳಿಸಲಾಗಿದೆ ಶಾಸಕರು ಇದರ ಬಗ್ಗೆ ಗಮನಹರಿಸಿ ಸರಕಾರದ ಗಮನ ಸೆಳೆಯಬೇಕಿದೆ ಎಂದು ಆಗ್ರಹಿಸಿದರು. ಮುಖಂಡರಾದ ಬಿ.ಬಿ.ಭಾರತೀಶ್ ಮಾತನಾಡಿ, ಈಗಾಗಲೇ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸಾಧ್ಯತೆಯಿದೆ. ಜಿಲ್ಲೆಯ ಎಲ್ಲಾ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಕುಶಾಲನಗರವನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದರು. ರೈತರು ಕುಶಾಲನಗರ ತಾಲೂಕು ತಹಶೀಲ್ದಾರ್ ಕೃಷ್ಣ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ದಾಸಂಡ ರಮೇಶ್, ಕೆ. ಮಂಜುನಾಥ್, ಅರುಣ್ ಚಂಗಪ್ಪ, ವಿನಯ್, ಹಿತೇಶ್, ಸುನಿತ್ ಕೊಮರಪ್ಪ , ಸ್ಟೀಫನ್ , ಗೌತಮ್, ಡಿಸಾಂತ್, ಮಂಜು, ವಸಂತ ಹರನಬೈಲ್, ಉದಯ, ಪ್ರಶಾಂತ್ ಕಲ್ಲೂರು, ಮತ್ತಿತರರು ಇದ್ದರು.