ವೀರಾಜಪೇಟೆ, ಸೆ. ೨೨: ಕೇರಳದಿಂದ ಕೊಡಗಿಗೆ ಯಾವುದೇ ಪರವಾನಗಿ ಹಾಗೂ ದಾಖಲೆಗಳಿಲ್ಲದೆ ಅಕ್ರಮವಾಗಿ ಕೆಂಪುಕಲ್ಲು ಸಾಗಿಸುತ್ತಿದ್ದ ೨ ಲಾರಿಗಳನ್ನು ವಶಕ್ಕೆ ಪಡೆದ ಘಟನೆ ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ನಡೆದಿದೆ.

ಮಾಕುಟ್ಟ ಮತ್ತು ಪೆರುಂಬಾಡಿ ಚೆಕ್‌ಪೋಸ್ಟ್ ಮೂಲಕ ಅಕ್ರಮವಾಗಿ ಕೇರಳದಿಂದ ಕೆಂಪು ಕಲ್ಲು ಸಾಗಾಟ ನಡೆಯುತ್ತಿರುವ ಬಗ್ಗೆ ಕೆಲ ದಿನಗಳ ಹಿಂದೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ಪರಿಶೀಲಿಸಿದಾಗ ೨ ಲಾರಿಗಳಲ್ಲಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. ವಾಹನಗಳನ್ನು ಪರಿಶೀಲಿಸಿದ ವೇಳೆ ಕಲ್ಲು ಸಾಗಾಟಕ್ಕೆ ಯಾವುದೇ ಪರವಾನಗಿ ಹಾಗೂ ಅಗತ್ಯ ಅನುಮತಿ ಕೂಡ ಇಲ್ಲದಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾನೂನುಬಾಹಿರವಾಗಿ ಕೆಂಪು ಕಲ್ಲು ಸಾಗಾಟ ಮಾಡಿದ ಎರಡು ಲಾರಿಗಳನ್ನು ವಶಕ್ಕೆ ಪಡೆದು ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಲಾಗಿತ್ತು.

ಬಳಿಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಕ ಒಂದು ಲಾರಿಗೆ ರೂ. ೫೭ ಸಾವಿರ ಹಾಗೂ ಮತ್ತೊಂದು ಲಾರಿಗೆ ರೂ. ೪೧ ಸಾವಿರ ದಂಡ ವಿಧಿಸಲಾಯಿತು. ದಂಡ ಪಾವತಿಸಿದ ನಂತರವೇ ಮಾಲೀಕರಿಗೆ ಲಾರಿಗಳನ್ನು ಹಸ್ತಾಂತರಿಸಲಾಯಿತು.