ಮಡಿಕೇರಿ, ಸೆ. ೨೨: ಪ್ರಸಕ್ತ ವರ್ಷ ಕರ್ನಾಟಕ ರಾಜ್ಯದಲ್ಲಿನ ಹವಾಮಾನ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ ಕಾವೇರಿ ತವರು ಕೊಡಗು ಜಿಲ್ಲೆ ಒಂದಷ್ಟು ಧನ್ಯವೆನಿಸಿತ್ತು... ಆದರೆ ಇದೀಗ ದಿನಗಳು ಉರುಳುತ್ತಿರುವಂತೆ ಸುಭಿಕ್ಷವಾಗಿರುತ್ತಿದ್ದ ಕೊಡಗು ಜಿಲ್ಲೆಯೂ ಆತಂಕದ ಛಾಯೆಯನ್ನು ಎದುರಿಸುವಂತಾಗಿದೆ.

ಈ ವರ್ಷ ಇಡೀ ರಾಜ್ಯದಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಇತರೆಡೆಗೆ ಹೋಲಿಸಿದರೆ ಕೊಡಗಿಗೆ ಜುಲೈ - ಆಗಸ್ಟ್ ತಿಂಗಳು ವರದಾನವಾಗಿತ್ತು. ಈ ಎರಡು ತಿಂಗಳು ಜಿಲ್ಲೆ ಒಂದಷ್ಟು ಮಳೆ ಕಾಣದಿದ್ದರೆ ಜಿಲ್ಲೆಯ ಪರಿಸ್ಥಿತಿ ಕಲ್ಪನಾತೀತವಾಗಿರುತ್ತಿತ್ತು. ಆದರೂ ಈಗಿನ ಸನ್ನಿವೇಶ ಮುಂದಿನ ದಿನಗಳ ಪರಿಸ್ಥಿತಿಯ ಗಂಭೀರತೆಯನ್ನು ನೆನಪಿಸುತ್ತಿದ್ದು, ಪ್ರಾಕೃತಿಕ ತಪ್ಪಲಿನ ಕೊಡಗು ಜಿಲ್ಲೆಗೂ ಎಚ್ಚರಿಕೆಯ ಕರೆ ಗಂಟೆಯಾಗುತ್ತಿದೆ.

ಈಗಾಗಲೇ ಅನಾವೃಷ್ಟಿಯ ಚಿತ್ರಣ ಕಂಡುಬರುತ್ತಿದ್ದು, ಜಲಕ್ಷಾಮ ಖಚಿತ ಎನ್ನುವಂತಹ ಸ್ಥಿತಿ ಎದುರಾಗುತ್ತಿದೆ. ಸೆಪ್ಟೆಂಬರ್ ಎರಡನೆಯ ವಾರದಲ್ಲೇ ಬಿಸಿಲಿನ ಧಗೆಯನ್ನು ಎದುರಿಸುವಂತಾಗಿದ್ದು, ಜನತೆ ಪರಿತಪಿಸುವಂತಾಗಿದೆ.

ದಿನೇ ದಿನೇ ಜಲಮೂಲಗಳು ಕ್ಷೀಣಿಸುತ್ತಿರುವುದು ಜನತೆಯ ಅನುಭವಕ್ಕೆ ಬರುತ್ತಿದೆ. ಈ ಸಮಯದಲ್ಲಿ ತುಂಬಿ ಹರಿಯುತ್ತಿದ್ದ ನದಿ - ತೋಡುಗಳಲ್ಲಿ ನೀರಿನ ಮಟ್ಟದಲ್ಲಿ ಭಾರೀ ಇಳಿಕೆಯಾಗಿದೆ.

ಕೃಷಿ, ಕಾಫಿ ಮತ್ತಿತರ ಬೆಳೆಗಳನ್ನು ಅವಲಂಬಿಸಿರುವ ಕೃಷಿಕರು, ಬೆಳೆಗಾರರು ದಿನಂಪ್ರತಿ ಆಗಸವನ್ನು ದಿಟ್ಟಿಸುತ್ತಿದ್ದಾರೆ. ಫಸಲುಗಳ ಮೇಲೆ, ಹೊಸ ಕಾಫಿ ಗಿಡ ಮತ್ತಿತರ ಗಿಡಗಳನ್ನು ನೆಟ್ಟಿರುವವರು ಇದನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಕಾಫಿ ತೋಟಗಳಿಗೆ ಎರಡು - ಮೂರನೇ ಸುತ್ತಿನ ಗೊಬ್ಬರ ಹಾಕಲು ಸಮಯ ಎದುರಾಗಿದ್ದು ಇದಕ್ಕೂ ಹೊಡೆತ ಬಿದ್ದಿದೆ. ಕೆಲವೆಡೆಗಳಲ್ಲಿ ಸೆಪ್ಟೆಂಬರ್‌ನಲ್ಲೇ ನೀರು ಹಾಯಿಸುತ್ತಿರುವ ದೃಶ್ಯವೂ ಕಂಡುಬರುತ್ತಿದೆ. ಜೊತೆಗೆ ಬಿಸಿಲಿನ ತಾಪಮಾನದಲ್ಲೂ ಈ ಸಮಯದಲ್ಲೇ ಬೇಸಿಗೆಯ ರೀತಿಯಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತಿರುವುದು ಮತ್ತೊಂದು ರೀತಿಯ ಆತಂಕ ಮೂಡಿಸುತ್ತಿದೆ.

ಜಲಕ್ಷಾಮದೊಂದಿಗೆ ಮುಂದಿನ ದಿನಗಳಲ್ಲಿ ವಿದ್ಯುತ್ ಕ್ಷಾಮವೂ ಎದುರಾಗುವ ಮುನ್ಸೂಚನೆಯಿದೆ.

ಸರಾಸರಿ ೬೦ ಇಂಚು ಮಳೆ ಕಾಣದ ಜಿಲ್ಲೆ

ಕಳೆದ ವರ್ಷ ಜಿಲ್ಲೆಯ ಹಲವಾರು ಕಡೆಗಳಲ್ಲಿ ೨೦೦ - ೨೫೦ - ೩೦೦ ಇಂಚುಗಳಷ್ಟು ಮಳೆಯಾಗಿತ್ತು. ಜಿಲ್ಲಾ ಸರಾಸರಿಯೂ ಸುಮಾರು ೧೫೦ ಇಂಚುಗಳಷ್ಟಾಗಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಇನ್ನೂ ಸರಾಸರಿ ೬೦ ಇಂಚು ಮಳೆಯಾಗಿಲ್ಲ.

ಕಳೆದ ವರ್ಷ ಜಿಲ್ಲೆಯಲ್ಲಿ ಸೆಪ್ಟೆಂಬರ್ ಎರಡನೇ ವಾರದ ವೇಳೆಗೆ ೧೦೭ ಇಂಚು ಮಳೆಯಾಗಿತ್ತು. ಆದರೆ ಈ ಬಾರಿ ಕೇವಲ ೫೭ ಇಂಚು ಮಾತ್ರ ಮಳೆಯಾಗಿದೆ. ಸರಾಸರಿ ಮಳೆ ಕಳೆದ ವರ್ಷಕ್ಕೆ ಹೋಲಿಸಿದರೆ ೫೧ ಇಂಚುಗಳಷ್ಟು ಕಡಿಮೆಯಿದೆ.

ಮಡಿಕೇರಿ ತಾಲೂಕಿನಲ್ಲಿ ೬೮ ಇಂಚು ಕಡಿಮೆ

ಮಡಿಕೇರಿ ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ೬೮ ಇಂಚು ಮಳೆ ಕಡಿಮೆಯಾಗಿದೆ. ಕಳೆದ ವರ್ಷ ೧೬೨ ಇಂಚು ಮಳೆಯಾಗಿದ್ದರೆ ಈ ಬಾರಿ ೯೪ ಇಂಚು ಮಾತ್ರ ಮಳೆ ಬಿದ್ದಿದೆ.

ವೀರಾಜಪೇಟೆ ತಾಲೂಕಿನಲ್ಲಿ ೪೭, ಪೊನ್ನಂಪೇಟೆ ೪೮, ಸೋಮವಾರಪೇಟೆ ೬೦, ಕುಶಾಲನಗರದಲ್ಲಿ ೨೬ ಇಂಚು ಮಳೆ ಕಡಿಮೆಯಿದೆ.

ಕಳೆದ ವರ್ಷ ವೀರಾಜಪೇಟೆ ತಾಲೂಕಿನಲ್ಲಿ ಈ ಸಮಯಕ್ಕೆ ೯೭, ಪೊನ್ನಂಪೇಟೆ ೯೬, ಸೋಮವಾರ ಪೇಟೆ ೧೨೩, ಕುಶಾಲನಗರದಲ್ಲಿ ೫೨ ಇಂಚು ಮಳೆಯಾಗಿತ್ತು. ಈ ಬಾರಿ ವೀರಾಜಪೇಟೆ ೫೦, ಪೊನ್ನಂಪೇಟೆ ೪೮, ಸೋಮವಾರಪೇಟೆ ೬೩ ಹಾಗೂ ಕುಶಾಲನಗರಕ್ಕೆ ೨೬ ಇಂಚು ಮಾತ್ರ ಮಳೆಯಾಗಿದೆ.