ಕೊಡ್ಲಿಪೇಟೆ, ಸೆ. ೨೧ : ವಿಶ್ವಕರ್ಮ ಸಮುದಾಯವು ತನ್ನ ಕಲೆ, ಕೌಶಲ್ಯ ಹಾಗೂ ಶ್ರಮದ ಮೂಲಕ ಸಮಾಜದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಸ್ಮರಣೀಯ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.

ಕೊಡ್ಲಿಪೇಟೆ ಚೌಡೇಶ್ವರಿ ಸಮುದಾಯ ಭವನದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪಾರಂಪರಿಕ ಕಲೆ ಮತ್ತು ವೃತ್ತಿ ಕೌಶಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಹಾಗೂ ಸಮುದಾಯದ ಅಭಿವೃದ್ಧಿಗೆ ಅಗತ್ಯವಾದ ಸಹಕಾರ ನೀಡುವುದಾಗಿ ಶಾಸಕರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಮಾಜ ಬಾಂಧವರು ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಹಾಗೂ ಅನುದಾನ ಕೋರಿ ಶಾಸಕರಿಗೆ ಮನವಿ ಸಲ್ಲಿಸಿದರು. ಸ್ಥಳೀಯವಾಗಿ ಸ್ಥಳ ಗುರುತಿಸಿದರೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ತಿಳಿಸಿದರು.

ಕೊಡ್ಲಿಪೇಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಆರ್.ಚಂದ್ರಶೇಖರ್ ಮತ್ತು ಔರಂಗಜೇಬ್ ಮಾತನಾಡಿದರು. ಹೋಬಳಿ ವಿಶ್ವಕರ್ಮ ಸಮಿತಿಯ ಅಧ್ಯಕ್ಷ ಕೆ.ಎ.ನಾಗೇಶ್, ಗೌರವ ಅಧ್ಯಕ್ಷ ಸುಬ್ರಹ್ಮಣ್ಯಾಚಾರ್, ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಜನಾರ್ದನ್, ತಾಲೂಕು ಕೆ.ಡಿ.ಪಿ.ಸದಸ್ಯ ವೇದಕುಮಾರ್, ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಹರೀಶ್, ಹಿರಿಯರಾದ ಜಯರಾಂ ಆಚಾರ್ ಉಪಸ್ಥಿತರಿದ್ದರು.