ಎಲ್ಲಿಂದಾದರೂ ಓಕೆ ಎನ್ನುತ್ತೀರಾ.. ? ಸರಿ ಬಿಡಿ. ಬನ್ನಿ ಮಡಿಕೇರಿಯಿಂದ ಮೇಕೇರಿ, ಮೂರ್ನಾಡು ಮಾರ್ಗ ವಾಗಿ ವೀರಾಜಪೇಟೆಗೆ ಹೋಗಿ ಅಲ್ಲಿಂದ ಅಮ್ಮತ್ತಿ ಸಿದ್ದಾಪುರ ಚೆಟ್ಟಳ್ಳಿ ಮಾರ್ಗವಾಗಿ ಮಡಿಕೇರಿ ತಲುಪೋಣ. ಸಾಧ್ಯವಾದರೆ ಸಿದ್ದಾಪುರ ಪಾಲಿಬೆಟ್ಟ ಮಾರ್ಗವಾಗಿ ಗೋಣಿಕೊಪ್ಪಲುವಿಗೂ ಹೋಗಿಬರೋಣ.
ಕಲ್ಪಿಸಿಕೊಳ್ಳಿ...ಒಂದು ಜೀಪಿನಲ್ಲಿ ಹೋಗುತ್ತಿದ್ದೇವೆ...ಜೀಪೇ ಯಾಕೆ ಎಂದಿರಾ....? ಕಾರಾದರೆ ಅಲ್ಲಿ ಇಲ್ಲಿ ರಸ್ತೆಯ ಭಾಗಗಳು ಕಾರಿನ ಬಾಡಿಗೆ ತಗಲುತ್ತದೆ. ಸರಿ ಭದ್ರವಾಗಿ ಕುಳಿತುಕೊಳ್ಳಿ. ಮೇಕೇರಿ ಮಸೀದಿ ವರೆಗೆ ತೊಂದರೆ ಇಲ್ಲ. ಅಲ್ಲಿಂದ ಮುಂದೆ ನಿಮ್ಮ ಹಣೆ ಬರಹ...ಹೇಗೆ ಕುಳಿತುಕೊಳ್ಳುತ್ತೀರೋ ನಿಮಗೆ ಬಿಟ್ಟದ್ದು. ಚಾಲಕ ನಾನಾಗಿರುವುದರಿಂದ ನನಗೆ ನಿಮ್ಮನ್ನು ಗಮನಿಸಲು ಸಾಧ್ಯವಾಗುವುದಿಲ್ಲ. ನನ್ನ ಕಣ್ಣು ಗುಂಡಿಯಲ್ಲಿ ರಸ್ತೆಯನ್ನು ಹುಡುಕುವ ಕಾಯಕದಲ್ಲಿರುತ್ತದೆ.ಸರಿ ಹಾಗೋ ಹೀಗೋ ನನ್ನಿಂದ ಸಾಧ್ಯವಾದಷ್ಟರ ಮಟ್ಟಿಗೆ ರಸ್ತೆಯ ಗುಂಡಿಗಳನ್ನು ತಪ್ಪಿಸಿ ಕಾಕೋಟುಪರಂಬುವರೆಗೆ ಕರೆದುಕೊಂಡು ಬಂದಿದ್ದೇನೆ.ಇನ್ನು ಕದನೂರಿನವರೆಗೆ ನಾನು ಕೂಡಾ ಸ್ವಲ್ಪ ಅರಾಮಾಗಿ ಗಾಡಿ ಚಲಾಯಿಸುತ್ತೇನೆ..ನೀವೂ ಕೂಡಾ ಬಿಗಿ ಹಿಡಿದ ಉಸಿರನ್ನು ನಿಶ್ವಾಸಿಸಿ ಕೈ ಕಾಲು ಮೈ ಆರಾಮಾಗಿಸಿಕೊಳ್ಳಿ.
ಹಾ ಅದೋ ಕದನೂರು ತಲುಪಿದ್ದೇವೆ. ಸೇತುವೆಯಿಂದಾಚೆಯಿAದ ಒಂದಷ್ಟು ದೂರ ಕೈಗೆ ಸಿಗುವ ರಾಡ್‌ಗಳನ್ನು ಭದ್ರವಾಗಿ ಹಿಡಿದುಕೊಳ್ಳಿ. ಒಬ್ಬರ ಮೇಲೊಬ್ಬರು ಬೀಳುತ್ತಿದ್ದೀರೆಂದಾದರೆ ಜಗಳವಾಡದೇ ಸುಧಾರಿಸಿಕೊಳ್ಳಿ... ಮತ್ತೆ ಇಂಥಾ ಅವಕಾಶ ಸಿಗುವುದಿಲ್ಲಾ.... ಯಾಕೆಂದರೆ ಕೋಟಿ ರೂಪಾಯಿ ಕೊಡುತ್ತೇವೆಂದರೂ ಮತ್ತೆ ನೀವು ಸುತಾರಾಂ ಈ ರಸ್ತೆಯಲ್ಲಿ ಪ್ರಯಾಣಿಸುವುದಿಲ್ಲ. ಅಬ್ಬಾ ಹಾಗೋ ಹೀಗೋ ನಾವೆಲ್ಲರೂ ವೀರಾಜಪೇಟೆ ತಲುಪಿದ್ದಾಯಿತು. ನೀವೆಲ್ಲರೂ ಇಲ್ಲೇ ಎಲ್ಲಾದರೂ ಕಾಫಿನೋ, ಟೀನೋ ಕುಡಿದು ಆರಾಮು ಮಾಡುತ್ತಿರಿ. ನಾನು ಎಲ್ಲೆಲ್ಲೋ ಸದ್ದಾಗುತ್ತಿರುವ ಜೀಪನ್ನು ಮೆಕಾನಿಕ್‌ಗೆ ತೋರಿಸಿ ನೆಟ್, ಬೋಲ್ಟ್ ಟೈಟ್ ಮಾಡಿಸಿಕೊಂಡು ಬರುತ್ತೇನೆ.
ಸರಿ ಹೊರಡೋಣವೇ....ಕತ್ತಲಾಗೋ ಮುಂಚೆ ಮಡಿಕೇರಿ ತಲುಪೋಣ. ಇಲ್ದಿದ್ರೆ ರಸ್ತೆ ಯಾವುದು ಗುಂಡಿ ಯಾವ್ದುಂತಾನೇ ಗೊತ್ತಾಗಲ್ಲಾ... ನಿಮಗೂ ಮಜಾ ಸಿಗೊಲ್ಲ !
ನೋಡೀ ವೀರಾಜಪೇಟೆ ಟೌನ್ ದಾಟೋವರೆಗೂ ಸ್ವಲ್ಪ ಹುಷಾರಾಗಿ ಕೂತ್ಕೋಳಿ. ಅಮೇಲೆ ಆನಂದಪುರದವರೆಗೆ ಸುಖ ಪ್ರಯಾಣ. ನಂತರ ನಡುವೆ ಒಂದಷ್ಟು ಕುಣಿದಾಟ ಮತ್ತೆ ಸರಾಗ. ಆಮೇಲೆ ಚೆಟ್ಟಳ್ಳಿ ವರೆಗೆ ನೋಡೀಪ ಒಂಥರಾ ಕಸರತ್ತು. ಒಂದೊAದ್ಸಾರಿ ನಿಮಗೂ ಅನ್ನಿಸುತ್ತೆ, ಗಾಡಿ ದಡ ಬಡಾ ಸದ್ದು ಕೇಳಿಸುತ್ತಿದ್ದರೇನೇ ಚೆಂದಾ ಅಂತಾ. ಅಬ್ಬಾ ನೋಡಿ ಚೆಟ್ಟಳ್ಳಿ ತಲುಪಿದ್ವಿ... ಇನ್ನೊಂದಷ್ಟು ದೂರದ ಕಾಂಕ್ರೀಟ್ ರೋಡ್ ಪಯಣ. ರಸ್ತೆ ಬದಿಯ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಹೋಗೋಣ.
ಅಯ್ಯೋ ಯಾರಿಗೆ ಏನಾಯ್ತು...? ನಿದ್ದೆ ಮಾಡಿದ್ರಾ....ಕ್ಷಮಿಸಿ ಕಿರಿದಾದ ರಸ್ತೆ ಎದುರಿಂದ ಬಸ್ ಬಂತಾ....ನಮ್ಮ ಗಾಡಿ ಗುಂಡಿಗೆ ಬಿತ್ತು. ಇನ್ನು ಸ್ವಲ್ಪ ದೂರ ನಿದ್ದೆ ಮಾಡ್ಬೇಡಿ. ಹೇಗೋ ರಸ್ತೆ ಹುಡುಕಿಕೊಂಡು ಕರ್ಕೊಂಡು ಹೋಗ್ತೀನಿ.ಅಮೇಲೆ ಮತ್ತೆರಡು ಕಿಲೋ ಮೀಟರ್ ಕಾಂಕ್ರೀಟ್ ರೋಡ್ ಸಿಗುತ್ತೆ ಆಗ ನಿದ್ದೆ ಮಾಡ್ಕೊಳ್ಳಿ.
ಇನ್ನು ಇರೋದು ಮಜಾ.... ಮಡಿಕೇರಿ ಸಮೀಪಿಸ್ತಾ ಇದೆ. ನಮ್ಮ ಜೀಪ್‌ನ ಯಾವ ಭಾಗದಲ್ಲಿ ಏನೇನು ಶಬ್ಧ ಕೇಳಿಸುತ್ತೆ ಅನ್ನೋ ಟಾಸ್ಕನ್ನ ನಿಮಗೆ ಕೊಡ್ತಿದೀನಿ. ಗಮನ ಇಟ್ಟು ಕೇಳಿಸ್ಕೊಳ್ಳಿ.
ಅಲ್ಲಾ ನೀವು ಯಾರಿಗೋ ಬಯ್ಯುತ್ತಿದ್ದೀರಿ ಅನ್ಸುತ್ತೆ.....ಸರಕಾರಕ್ಕೆ ಹಿಡಿ ಶಾಪ ಹಾಕ್ತಿದೀರಾ..? ಶಾಸಕರಿಗೆ ಬಯ್ತಿದೀರಾ...?
ಸರಕಾರ ಏನು ಮಾಡೋಕೆ ಅಗುತ್ತೆ ಹೇಳಿ. ಆಡಳಿತ ನಡೆಸ್ತಿರೋರಿಗೆ ಇದೆಲ್ಲಾ ಒಂದು ಸಮಸ್ಯೆನೇ ಅಲ್ಲಾ. ಅವರಿಗೆ ಏನಿದ್ದರೂ ಗ್ಯಾರಂಟಿ ಭಾಗ್ಯಗಳ ಬಗ್ಗೆ ಮಾತ್ರ ಕಾಳಜಿ. ಯಾಕಂದ್ರೆ ಮುಂದೆ ಅಧಿಕಾರ ಸಿಗಬೇಕು ಅಂದ್ರೆ ಓಟ್ ಬೇಕಲ್ವಾ. ಅದರ ನಡುವೆ ಒಂದೆರಡು ವರ್ಷ ಕುರ್ಚಿಗಾಗಿ ಕಿತ್ತಾಡೋದ್ರಲ್ಲೇ ಕಾಲ ಕಳೆದುಬಿಟ್ರು ಮತ್ತೆಲ್ಲಿ ಇತ್ತ ಗಮನ ಹರಿಸೋಕೆ ಸಾಧ್ಯ ಹೇಳಿ. ಒಂದಷ್ಟು ಕೋಟಿ ಅನುದಾನ ಸ್ಯಾಂಕ್ಷನ್ ಆಗಿದೆ ...ಆ ರೋಡ್ ಕೆಲಸ ಅಗುತ್ತೆ, ಈ ರೋಡ್ ಕೆಲಸ ಆಗುತ್ತೆ ಅಂತ ಮಾತು ಕೊಟ್ಟು, ನಮ್ಮನ್ನ ನಂಬ್ಸಿದ್ರು, ನಾವೂ ಹೌದೇನೋ ಅಂತ ಯಾಮಾರಿದ್ವಿ. ಅಲ್ಲಾ....ಈ ವರ್ಷ ಮಳೆ ತುಂಬಾನೇ ಕಮ್ಮಿ ಇತ್ತು. ಹಾಗಾಗಿ ರಸ್ತೇಲಿ ಅಷ್ಟೋ ಇಷ್ಟೋ ಡಾಂಬರು ಕಾಣಿಸ್ತಿದೆ.ಮಾಮೂಲಿನಂತೆ ಮಳೆ ಏನಾದ್ರೂ ಇದ್ದಿದ್ದರೆ ನಮ್ಮ ಪ್ರಯಾಣ ಹೀಗಲ್ಲಾ, ನಮ್ಮ ವಾಹನದ ಒಂದೊAದೇ ಪಾರ್ಟ್ ಉದುರಿಸಿಕೊಂಡು ಚಾಸಿ ಮಾತ್ರ ಉಳಿಸಿಕೊಂಡು ಪ್ರಯಾಣ ಮಾಡಬೇಕಿತ್ತು.... ಏನಂದ್ರಿ...ಅದೂ ಒಂಥರಾ ಮಜಾ ಇರ್ತಿತ್ತು ಅಂದ್ರಾ...ಅದೂ ಸರಿ ಅನ್ನಿ.
ಏನೋಪ್ಪಾ ಮೊನ್ನೆ ಮೊನ್ನೆ ತಾನೆ ನಮ್ಮ ಡಿಕೆಶಿ ಸಾಹೇಬ್ರು ನಮ್ಮ ಅಧಿಕಾರದ ೧೦೦ ದಿನ ಪೂರೈಸಿದ್ದಾರೆ. ಅಲ್ಲೇನೋ ಹೇಳ್ತಿದ್ರು ಮಲೆನಾಡು, ಉ.ಕನ್ನಡ, ದ.ಕನ್ನಡ, ಸೇರಿದಂತೆ ನಮ್ಮ ಕೊಡಗೂ ಜಿಲ್ಲೆನೂ ಟೂರಿಸಂ ಜೋನ್ ಮಾಡ್ತಾರಂತೆ. ಆಗ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ಕೊಡ್ತಾರಂತೆ. ರಸ್ತೆಗಳು ಅಭಿವೃದ್ಧಿ ಆಗ್ತಾವಂತೆ. ಎಲ್ಲಾ ಅಂತೆ ಕಂತೆಗಳ ಬೊಂತೆ ಅಂತಾ ಯಾರೋ ಹೇಳ್ತಿದ್ರು, ಆದ್ರೆ ಒಳ್ಳೆದೇ ಅಲ್ವಾ.
ಏನಂದ್ರಿ ರಸ್ತೆ ಅಭಿವೃದ್ಧಿ ಅದ್ಮೇಲೆ ಮತ್ತೆ ಕೊಡಗಿಗೆ ಬರ್ತೀವಿ ಅಂದ್ರಾ....ಆಯ್ತು ಬಿಡಿ ನಿಮ್ಮಿಷ್ಟ.ಆದ್ರೆ ನಿಮ್ಮಲ್ಲಿ ಒಂದು ರಿಕ್ವೆಸ್ಟ್.... ನಮ್ಮ ಜಿಲ್ಲೆಯ ರಸ್ತೆಗಳು ಇಷ್ಟು ಕೆಟ್ಟದಾಗಿವೆ ಅಂತ ಯಾರಿಗೂ ಹೇಳ್ಬೇಡಿ ಪ್ಲೀಸ್. ಬರೋರು ಬರದೇ ಆಗ್ಬಿಡ್ತಾರೆ...ಮತ್ತೆ ನಮ್ಮ ಜಿಲ್ಲೆಯ ರೆವಿನ್ಯೂಗೆ ಹೊಡೆತ ಬಿದ್ಬಿಡುತ್ತೆ.
ಸರಿ ಮಡಿಕೇರಿ ಬಂತು...ಈಗ ನೀವೆಲ್ಲಾ ಇಳ್ಕೋಳಿ. ಸಾಧ್ಯ ಆದ್ರೆ ನಾಳೆ ಬರ್ತೀನಿ. ನಿಮ್ಮ ಮೈ ಕೈ ಸರಿಯಾಗಿದ್ದ್ರೆ ನಾಳೆ ಬೇರೆ ರಸ್ತೇಲಿ ಸುತ್ತಿಸ್ತೀನಿ, ಓಕೇ ನಾ.
ನಾನೀಗ ಹೊಡ್ತೀðನಿ ನನ್ನ ಮನೆ ರಸ್ತೆ ಸರಿ ಇಲ್ಲಾ. ಒಂದೊAದು ಕಡೆ ನಮ್ಮ ವೆಹಿಕಲ್‌ನ ಹೊತ್ಕೊಂಡು ಹೋಗೋವಷ್ಟು ಹಳಾಗಿ ಹೋಗಿದೆ. ಕತ್ತಲಾಗ್ಬಿಟ್ಟ್ರೆ ತುಂಬಾ ಕಷ್ಟ ಆಗುತ್ತೆ. ಹೋಗಿ ಬರ್ತೀನಿ, ಟೇಕ್ ರೆಸ್ಟ್. ಬೈ.
- ಮಾದೇಟಿರ ಬೆಳ್ಯಪ್ಪ
ಕಡಗದಾಳು.