ಮಡಿಕೇರಿ,ಸೆ. ೨೧; ಐತಿಹಾಸಿಕ ಹಿನ್ನೆಲೆಯಿರುವ ಮಡಿಕೇರಿ ದಸರಾ-ನಾಡಹಬ್ಬವನ್ನು ಅ.೨೧ರಂದೇ ನಡೆಸುವಂತೆ ಮಡಿಕೇರಿ ನಗರ ದಸರಾ ಸಮಿತಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದರೊಂದಿಗೆ ದಸರಾ ಆಚರಣೆ ಸಂಬAಧಿಸಿದAತೆ ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆಯಲಾಗಿದೆ.

ದಸರಾ ಆಚರಣೆಯ ದಿನಾಂಕದ ಬಗ್ಗೆ ಗೊಂದಲವೇರ್ಪಟ್ಟಿದ್ದ ಹಿನ್ನೆಲೆಯಲ್ಲಿ ಇಂದು ದಸರಾ ಸಮಿತಿ ಅಧ್ಯಕ್ಷೆ ಕಲಾವತಿ ಅವರ ಅಧ್ಯಕ್ಷತೆಯಲ್ಲಿ ಹೊಟೇಲ್ ರಾಜ್‌ದರ್ಶನ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆದು ಅ. ೨೧ರಂದು ದಸರಾ ಅಚರಿಸುವಂತೆ ತೀರ್ಮಾನಿಸಲಾಯಿತಲ್ಲದೆ, ಈ ಬಗ್ಗೆ ನಾಲ್ಕು ಶಕ್ತಿ ಕರಗ ದೇವಾಲಯಗಳ ಪ್ರಮುಖರಿಗೆ ತಿಳಿಯಪಡಿಸುವಂತೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್‌ಕುಮಾರ್; ದಸರಾ ಆಚರಣೆ ಬಗ್ಗೆ ನಾಲ್ಕು ಕರಗ ಸಮಿತಿಗಳ ನಡುವೆ ಗೊಂದಲ ಏರ್ಪಟ್ಟಿದೆ. ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಸಭೆ ನಡೆಸಿದ ಕರಗ ದೇವಾಲಯಗಳ ಪ್ರಮುಖರು ಅ.೨೦ರಂದು ದಸರಾ ಆಚರಣೆ ಮಾಡುವದಾಗಿ ತೀರ್ಮಾನ ಮಾಡಿ ನೀಡಿದ್ದ ಮಾಹಿತಿಯನ್ನು ಪ್ರಕಟ ಮಾಡಿದ್ದೇವೆ. ಈ ನಡುವೆ ಕಂಚಿ ಕಾಮಾಕ್ಷಮ್ಮ ದೇವಾಲಯ ಸಮಿತಿಯವರು ಇತಿಹಾಸದಿಂದಲೇ ಕಾಮಾಕ್ಷಮ್ಮ ದೇವಾಲಯದಲ್ಲಿಯೇ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತಿದ್ದು, ಅದರಂತೆ ಅ.೨೧ರಂದು ದಸರ ಆಚರಿಸುವದಾಗಿ ಪತ್ರಿಕಾಗೋಷ್ಠಿ ಮೂಲಕ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ದಸರಾ ಆಚರಣೆ ಬಗ್ಗೆ ಗೊಂದಲ ಉಂಟಾಗಿದ್ದು, ಈ ಗೊಂದಲ ನಿವಾರಿಸಿ ದಿನಾಂಕ ನಿಗದಿಪಡಿಸಬೇಕಾಗಿದೆ. ಸಮಯಾವಕಾಶ ಕೂಡ ಕಡಿಮೆ ಇರುವದರಿಂದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಿದೆ. ಈ ಸಭೆಯಲ್ಲಿ ದಿನಾಂಕ ನಿಗದಿ ಮಾಡಿ ಮುಂದಿನ ದಿನಗಳಲ್ಲಿ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಿಮಗೊಳಿಸಬೇಕಾಗಿದೆ ಎಂದು ಹೇಳಿದರು.

ಪ್ರತ್ಯೇಕ ಪತ್ರಗಳು

ದಸರಾ ಆಚರಣೆಗೆ ಸಂಬAಧಿಸಿದAತೆ ದಶಮಂಟಪಗಳಿಗೆ ಪ್ರತ್ಯೇಕವಾಗಿ ಪತ್ರ ನೀಡಿದ ಕಂಚಿ ಕಾಮಾಕ್ಷಮ್ಮ ದೇವಾಲಯ ಸಮಿತಿಯವರು ಅ.೨೧ರಂದು ಮಡಿಕೇರಿ ದಸರಾ, ಕರಗ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ನಾಲ್ಕು ದೇವಾಲಯಗಳ ಕರಗ ಸೇವೆ ಮಾಡುವವರು ಮತ್ತು ದೇವಾಲಯಗಳ ನಿತ್ಯ ರೂವಾರಿಗಳು ಎಂದು ಸಹಿ ಮಾಡಿದ ಕೆಲವರು ಪತ್ರ ನೀಡಿ; ಅ.೨೦ರಂದೇ ವಿಜಯದಶಮಿ ಆಚರಣೆ ಆಗಲಿದ್ದು, ಇದಕ್ಕೆ ವಿರುದ್ಧವಾಗಿ ಯಾರೇ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ತೀರ್ಮಾನ ಕೈಗೊಂಡರೂ ಇದರಿಂದ ನಾಡಿನಲ್ಲಿ ಸಾರ್ವಜನಿಕ ತೊಂದರೆ ಉಂಟಾಗುವ ಭಯ ಕಾಡಲಿದೆ. ಇದಕ್ಕಾಗಿ ದೈವಪ್ರಶ್ನೆ ಇಟ್ಟು ದಿನಾಂಕ ನಿಗದಿಪಡಿಸುವಂತೆ ಕೋರಿಕೊಂಡಿದ್ದರು. ಈ ಬಗ್ಗೆ ಇಂದು ೧೦ ಮಂಟಪಗಳ ಪ್ರತಿನಿಧಿಗಳು ಪಾಲ್ಗೊಂಡು ಒಟ್ಟಾರೆಯಾಗಿ ಮಂಟಪ ಸಮಿತಿಯವರಿಗೆ ತೀವ್ರ ಸಮಸ್ಯೆ ಉಂಟಾಗಿದ್ದು, ಸಭೆಯಲ್ಲಿ ಇಂದೇ ದಿನಾಂಕ ನಿರ್ಧರಿಸಬೇಕೆಂದು ಒತ್ತಾಯಿಸಿದರು.

ಗೌರವ ಸಲಹೆಗಾರರಾದ ಜಿ.ಚಿದ್ವಿಲಾಸ್ ಮಾತನಾಡಿ; ಕರಗ ಸಮಿತಿಯವರ ಗೈರು ಹಾಜರಿಯಲ್ಲಿ ತೀರ್ಮಾನ ಕೈಗೊಂಡರೆ ಹೇಗೆ ಸ್ವೀಕಾರ ಮಾಡುತ್ತಾರೆ. ಇದು ಮತ್ತೊಂದು ಗೊಂದಲಕ್ಕೆ ಕಾರಣವಾಗಬಹುದು. ಎಲ್ಲರನ್ನೊಳಗೊಂಡು ತೀರ್ಮಾನವಾಗಬೇಕಿದೆ. ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ತೀರ್ಮಾನ ಮಾಡುವದು ಅಪ್ರಸ್ತುತವಾಗಬಹುದೆಂದು ಸಲಹೆ ಮಾಡಿದರು. ಮತ್ತೋರ್ವ ಗೌರವ ಸಲಹೆಗಾರರಾದ ಚುಮ್ಮಿ ದೇವಯ್ಯ ಮಾತನಾಡಿ; ದೇವತಾ ಕಾರ್ಯ ಸರಿಯಾದ ಮಾರ್ಗದಲ್ಲಿ ನಡೆಯಬೇಕಿದೆ. ನಾಲ್ಕು ಶಕ್ತಿದೇವತೆಗಳ ಮೆರವಣಿಗೆಯ ನಂತರ ಬನ್ನಿ ಕಡಿಯಬೇಕು. ಬೇರೆ ರೀತಿಯಲ್ಲಿ ಮಾಡುವದು ಸರಿಯಲ್ಲ; ಉತ್ಸವ ಜಾತ್ಯತೀತವಾಗಿ ನಡೆಯಬೇಕಿದ್ದು, ಹಿರಿಯರು ತೀರ್ಮಾನ ಮಾಡಲಿ ಎಂದು ಹೇಳಿದರು.

ದಶಮಂಟಪ ಸಮಿತಿ ಪದಾಧಿಕಾರಿ, ಕರವಲೆ ಭಗವತಿ ದೇವಾಲಯದ ಪ್ರಮುಖ ಗಜೇಂದ್ರ ಮಾತನಾಡಿ; ನಾಲ್ಕು ಕರಗ ದೇವಾಲಯಗಳ ಅರ್ಚಕರು, ಹಿರಿಯರು ಕುಂದುರುಮೊಟ್ಟೆ ದೇವಾಲಯದಲ್ಲಿ ಸಭೆ ನಡೆಸಿ ಅ.೨೦ರಂದು ಆಚರಣೆ ಮಾಡುವಂತೆ ತೀರ್ಮಾನಿಸಿ ಪತ್ರ ನೀಡಿದ್ದಾರೆ. ನಂತರದಲ್ಲಿ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ನಡೆದ ಸಭೆಯಲ್ಲಿ ಅ.೨೧ರಂದು ನಡೆಸುವದಾಗಿ ತೀರ್ಮಾನ ಮಾಡಿ ಕಂಚಿ ಕಾಮಾಕ್ಷಿ ದೇವಾಲಯದವರು ಪತ್ರ ನೀಡಿದ್ದಾರೆ. ಈ ಗೊಂದಲ ಸರಿಪಡಿಸಬೇಕು. ಇದನ್ನು ಉಸ್ತುವಾರಿ ಸಚಿವರು ಮಾಡುವದಲ್ಲ, ಸಭೆಯಲ್ಲಿ ತೀರ್ಮಾನ ಆಗಬೇಕೆಂದು ಹೇಳಿದರು.

ಸಲಹೆಗಾರ ಬಿ.ಜಿ.ಅನಂತಶಯನ ಮಾತನಾಡಿ; ಉಸ್ತುವಾರಿ ಸಚಿವರು ಬರುವ ಮುಂಚೆಯೇ ಈ ಬಗ್ಗೆ ತೀರ್ಮಾನ ಮಾಡಬೇಕಿದೆ. ಇಲ್ಲವಾದಲ್ಲಿ ಸಮಯ ಹಾಗೂ ಚರ್ಚೆಗಳು ದಂಡವಾಗಲಿವೆ ಎಂದರು. ಬೈ.ಶ್ರೀ. ಪ್ರಕಾಶ್ ದನಿಗೂಡಿಸಿ ಹಿಂದಿನಿAದಲೂ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ನಾಲ್ಕು ಕರಗ ದೇವಾಲಯಗಳ ಪ್ರಮುಖರು ಸಭೆ ನಡೆಸಿ ತೀರ್ಮಾನ ಕೈಗೊಂಡ ಬಳಿಕ ನಿರ್ಧಾರ ಕೈಗೊಳ್ಳುತ್ತಿದ್ದರು. ಈ ಬಾರಿ ಗೊಂದಲವಾಗಿದೆ, ಸರಿಪಡಿಸಬೇಕೆಂದರು.

ಕAಚಿ ಕಾಮಾಕ್ಷಿ ದೇವಾಲಯ ಸಮಿತಿ ಪ್ರಮುಖ ಜಿ.ಸಿ. ಜಗದೀಶ್ ದೇವಾಯಲದಲ್ಲಿ ಸಭೆ ನಡೆಸಿ ತೆಗೆದುಕೊಂಡ ತೀರ್ಮಾನವನ್ನು ಹೇಳಿದರಲ್ಲದೆ, ಅ.೧೧ರಿಂದ ೨೧ರವರೆಗೆ ದಸರಾ ಆಚರಿಸಲು ನಿರ್ಣಯ ಕೈಗೊಂಡಿರುವದಾಗಿ ಹೇಳಿದರು.

ಸಮಿತಿಯ ಗೌರವ ಅಧ್ಯಕ್ಷ ಜಿ.ವಿ.ರವಿಕುಮಾರ್ ದನಿಗೂಡಿಸಿ ಅನಾದಿ ಕಾಲದಿಂದಲೂ ನಾಲ್ಕು ಕರಗ ದೇವತೆಗಳ ಹಿರಿಯರು, ಗೌಳಿ ಸಮುದಾಯದವರು ದೇವಾಲಯದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡು ಶಾಸ್ತೊçÃಕ್ತವಾಗಿ ಆಚರಿಸುತ್ತಾ ಬರಲಾಗುತ್ತಿದೆ. ಈ ಬಾರಿ ಅಧಿಕ ದಿನ ಬಂದಿದೆ. ಆದರೂ ಮೈಸೂರು, ಮಂಗಳೂರು, ಗೋಣಿಕೊಪ್ಪದಲ್ಲೂ ಕೂಡ ೨೧ರಂದೇ ಆಚರಿಸಲಾಗುತ್ತಿದೆ. ಅಂತೆಯೇ ಮಡಿಕೇರಿಯಲ್ಲಿಯೂ ಅದೇ ದಿವಸ ಆಚರಿಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ದೈವ ಪ್ರಶ್ನೆಗೆ ಸಲಹೆ

ಈ ಸಂದರ್ಭದಲ್ಲಿ ಮಾತನಾಡಿದ ಗಜೇಂದ್ರ; ನಾಲ್ಕು ಕರಗ ದೇವತೆಗಳ ಅರ್ಚಕರು ಮತ್ತೊಂದು ಪತ್ರ ಸಲ್ಲಿಸಿದ್ದು, ಪ್ರಥಮ ಸಭೆಯಲ್ಲಿ ಅ.೨೦ರಂದು ಮಧ್ಯಾಹ್ನ ನಂತರ ದಶಮಿ ಇರುವದರಿಂದ ಅಂದೇ ಆಚರಣೆ ಎಂದು ತೀರ್ಮಾನಿಸಲಾಗಿತ್ತು. ಇದೀಗ ಮತ್ತೊಂದು ಸಭೆ ನಡೆಸಿ ೨೧ರಂದು ಆಚರಣೆ ಮಾಡಿ ನಂತರ ಬನ್ನಿ ಕಡಿಯುವದಕ್ಕೆ ಅಸಮಾಧಾನವಿದೆ. ನಮ್ಮ ಸಭೆಯ ಅಭಿಪ್ರಾಯಗಳಿಗೆ ಮನ್ನಣೆ ನೀಡದೆ ಪ್ರತ್ಯೇಕವಾಗಿ ಆಚರಣೆ ಮಾಡುವದರಿಂದ ತೊಂದರೆ ಆಗಲಿದೆ, ಹಾಗಾಗಿ ದೈವ ಪ್ರಶ್ನೆ ಇರಿಸಿ ಗೊಂದಲ ಪರಿಹರಿಸುವಂತೆ ಕೋರಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

ಕಂಚಿ ಕಾಮಾಕ್ಷಿ ದೇವಾಲಯ ಸಮಿತಿ ಗೌರವ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ; ನಮಗಳಿಗೆ ಯಾವದೇ ಮಾಹಿತಿ ನೀಡದೆ ಸಭೆ ನಡೆಸಿ ತೀರ್ಮಾನ ಮಾಡಲಾಗಿದೆ, ಇದರಿಂದಾಗಿ ಗೊಂದಲ ಉಂಟಾಗಿದೆ. ಇಂದಿನ ಸಭೆಯಲ್ಲಿ ದಿನಾಂಕ ನಿಗದಿಪಡಿಸಿ, ಪ್ರಶ್ನೆ ಇರಿಸುವದು ಸಮಂಜಸವಲ್ಲ ಎಂದು ಅಭಿಪ್ರಾಯಿಸಿದರು. ದಶಮಂಟಪ ಸಮಿತಿ ಅಧ್ಯಕ್ಷ ಪೂಣಚ್ಚ ಮಾತನಾಡಿ; ಕರಗ ಸಮಿತಿಯಲ್ಲೇ ಗೊಂದಲಗಳಿದ್ದು, ನೀವುಗಳೇ ಒಮ್ಮತದಿಂದ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಕಳಂಕ ಬರಲಿದೆ

ಹಿರಿಯ ಗೌರವ ಸಲಹೆಗಾರರಾದ ಜಿ.ರಾಜೇಂದ್ರ ಮಾತನಾಡಿ; ಭಿನ್ನ ನಿಲುವು ಹೊಂದಿರುವ ಸಮಿತಿಯವರ ಗೈರು ಹಾಜರಿಯಲ್ಲಿ ಚರ್ಚೆ ಮಾಡುವದೇ ತಪ್ಪು, ವಿಚಾರಗಳನ್ನು ಎಲ್ಲರೂ ಒಟ್ಟಾಗಿ ಹೇಳಬಹುದಿತ್ತು. ಹಿಂದೆಯೂ ಅಧಿಕ ದಿನ ಬಂದಾಗ ಏಕಾದಶಿಯಲ್ಲಿಯೂ ಬನ್ನಿ ಕಡಿದ ನಿದರ್ಶನಗಳಿವೆ. ಉದಯಕಾಲದ ಮುಹೂರ್ತವೇ ಇಡೀ ದಿನದ ಮುಹೂರ್ತವಾಗಲಿದೆ. ಉದಯಕಾಲದಲ್ಲಿ ದಶಮಿ ಇದ್ದು, ಮಧ್ಯಾಹ್ನದವರೆಗೆ ಇರಲಿದೆ. ಚಾಮುಂಡೇಶ್ವರಿ ಅದಿದೇವತೆಯಾಗಿದ್ದು, ಮೈಸೂರಿನಲ್ಲಿ ಅ.೨೧ರಂದೇ ಆಚರಣೆ ಮಾಡಲಾಗುತ್ತಿದೆ. ಇದನ್ನು ಉಲ್ಲಂಘನೆ ಮಾಡಿ ದಸರಾ ಆಚರಣೆ ಮಾಡಿದರೆ ತಾಯಿಗೆ ನೋವಾಗಲಿದೆ. ಈ ರೀತಿಯ ಗೊಂದಲ ಇತಿಹಾಸದಲ್ಲೇ ಆಗಿಲ್ಲ. ದೈವಜ್ಞರ ಆಜ್ಞೆಯೊಂದಿಗೆ ಪ್ರಮುಖರ ಮಾರ್ಗದರ್ಶನ ಪಡೆದು ತೀರ್ಮಾನ ಕೈಗೊಳ್ಳಬೇಕಿದೆ, ಹಾಗಾಗಿ ಅ.೨೧ರಂದೇ ಆಚರಣೆ ಮಾಡುವದು ಸೂಕ್ತ ಎಂದು ಸಲಹೆ ಮಾಡಿದರು. ಈ ನಾಡ ಹಬ್ಬ ಎಲ್ಲ ಜನಾಂಗದವರು ಸೇರಿ ಆಚರಿಸುವ, ಎಲ್ಲ ಸಮುದಾಯದವರ ಹಬ್ಬವಾಗಿದ್ದು, ಅದಕ್ಕೆ ಮಾನ್ಯತೆ ನೀಡಬೇಕು. ದೇವಾಲಯಗಳ ಅರ್ಚಕರ ಮಾರ್ಗದರ್ಶನ ಪಡೆಯಬಹುದು, ಪ್ರಶ್ನೆ ಇಟ್ಟು ಮಾಡುವಂತದ್ದಲ್ಲ, ಪಂಚಾAಗಗಳಲ್ಲಿ ಅದೇ ಮಾರ್ಗದರ್ಶನವಿದೆ. ಮಾರ್ಗದರ್ಶನ ಪಡೆದು ಮಾಡಲಿ, ದಸರಾವನ್ನು ಭಿನ್ನವಾಗಿ ನೋಡಿದರೆ ನಾಡಿಗೆ ಕಳಂಕ ಬರಲಿದೆ. ಎಲ್ಲರೂ ಒಂದೆಡೆ ಸೇರಿ ತೀರ್ಮಾನ ಮಾಡಲಿ, ನಾಡ ಹಬ್ಬ ಎಲ್ಲರಿಗೂ ಸೇರಿದ್ದು ಎಂದು ಸಲಹೆ ಮಾಡಿದರು.

ಇತಿಹಾಸ ಮರೆಮಾಚಲು ಸಾಧ್ಯವಿಲ್ಲ

ಹಿರಿಯ ಸಲಹೆಗಾರ ಟಿ.ಪಿ.ರಮೇಶ್ ಮಾತನಾಡಿ; ಈ ರೀತಿಯ ದ್ವಂದ್ವ ನಿಲುವು ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ. ಭಾರತ-ಪಾಕಿಸ್ತಾನ ಯದ್ಧ ಸಂದರ್ಭದಲ್ಲೂ ಕೂಡ ನಗರದಲ್ಲಿ ಕರಗ ಉತ್ಸವದೊಂದಿಗೆ ದಸರಾ ಆಚರಣೆ ಮಾಡಲಾಗಿದೆ. ಪ್ರಸ್ತುತ ಸಮಿತಿಗಳಲ್ಲಿ ಯುವಕರಿದ್ದು, ಹಿರಿಯರಿಂದ ಮಾಹಿತಿ ಪಡೆದು ಎಲ್ಲರೂ ಒಟ್ಟಾಗಿ ಮುನ್ನಡೆಸಡಬೇಕು ಎಂದರು. ಮೈಸೂರಿನಲ್ಲಿ ಅರಸರ ಪರಿವಾರ ಹಾಗೂ ವಿದ್ವಾಂಸರು ಅ.೨೦-೨೧ರಂದು ಆಚರಣೆಗೆ ದಿನಾಂಕ ನಿಗದಿ ಮಾಡಿ ಅದಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ. ಮಡಿಕೇರಿಯಲ್ಲಿ ಇಂದಿಗೂ ಯಾವದೇ ಜಾತಿ ಭೇದವಿಲ್ಲದೆ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಗೌಳಿ ಕುಟುಂಬದವರು ಕರಗ ಆರಾಧಕರಾಗಿದ್ದು, ಪ್ರತಿವರ್ಷ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಸಭೆ ನಡೆಸಿ ಆ ತೀರ್ಮಾನಕ್ಕೆ ಸ್ಥಿರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದುವರೆಗೆ ಯಾರೂ ವಿರುದ್ಧ ಹೋಗಿಲ್ಲ. ಈ ವಿಚಾರದಲ್ಲಿ ಗೊಂದಲ ಮಾಡಬೇಡಿ. ದಸರಾ ವಿಚಾರಗಳು ಕಂಚಿ ಕಾಮಾಕ್ಷಿ ದೇವಾಲಯದ ತೀರ್ಮಾನಕ್ಕೆ ಬದ್ಧರಾಗಬೇಕು. ಯಾವದೇ ಕಾರಣಕ್ಕೂ ಇತಿಹಾಸ ಮರೆಮಾಚಲು ಸಾಧ್ಯವಿಲ್ಲ, ಎಲ್ಲ ಭಾಗದಂತೆ ಇಲ್ಲಿಯೂ ಆಚರಣೆಯಾಗಲಿ. ವ್ಯತ್ಯಾಸಗಳನ್ನು ಮರೆತು, ವೈಷಮ್ಯ-ಗೊಂದಲ ಬದಿಗೊತ್ತಿ ಆಚರಿಸೋಣ ಎಂದು ಸಲಹೆ ಮಾಡಿದರು.

ಕಾರ್ಯಾಧ್ಯಕ್ಷ ಅರುಣ್‌ಕುಮಾರ್ ಮಾತನಾಡಿ; ಹಿರಿಯರ ತೀರ್ಮಾನದಂತೆ ಅ.೨೦ರಂದು ಆಯುಧಾ ಪೂಜೆ ಹಾಗೂ ಅ. ೨೧ರಂದೇ ದಸರಾ ಆಚರಣೆ ಮಾಡುವ ಬಗ್ಗೆ ಪ್ರಕಟಿಸಿದರು. ದಸರಾ ಸಮಿತಿ ಅಧ್ಯಕ್ಷೆ ಕಲಾವತಿ ಮಾತನಾಡಿ; ಎಲ್ಲ ಕರಗ ಸಮಿತಿಯವರನ್ನು ಕರೆದು, ಸಭೆ ನಡೆಸಿ ತೀರ್ಮಾನ ಕೈಗೊಳ್ಳೋಣ. ಎಲ್ಲರೂ ಒಂದಾಗಿ ಸೇರಿ ದಸರಾ ಆಚರಣೆ ಮಾಡೋಣವೆಂದು ಹೇಳಿದರು.

ವೇದಿಕೆಯಲ್ಲಿ ದಸರಾ ಸಮಿತಿ ಉಪಾಧ್ಯಕ್ಷ ಮಹೇಶ್ ಜೈನಿ, ಖಜಾಂಚಿ ಸಬಿತ, ಕಾರ್ಯದರ್ಶಿ, ನಗರಸಭಾ ಆಯುಕ್ತ ರಮೇಶ್ ಇದ್ದರು. ದಸರಾ ಸಮಿತಿ ಪದಾಧಿಕಾರಿಗಳು, ವಿವಿಧ ಉಪ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರಧಾನ ಕಾರ್ಯದರ್ಶಿ ಅರುಣ್‌ಶೆಟ್ಟಿ ಸ್ವಾಗತಿಸಿ, ವಂದಿಸಿದರು.