ಸೋಮವಾರಪೇಟೆ, ಸೆ.೧೯ : ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಭಾರೀ ಪ್ರಮಾಣದಲ್ಲಿ ಕೈಕೊಟ್ಟಿದ್ದು, ಕೃಷಿ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿರುವುದು ಒಂದೆಡೆಯಾದರೆ, ಪ್ರಸ್ತುತ ಪರಿಸ್ಥಿತಿ ಬಿರುಬಿಸಿಲಿನಿಂದ ಕೂಡಿದೆ. ರಾಜ್ಯ ಸರ್ಕಾರವು ರಾಜ್ಯದಲ್ಲಿ ಮಳೆ ಕೊರತೆಯುಂಟಾಗಿರುವ ತಾಲೂಕುಗಳ ಪಟ್ಟಿ ಮಾಡಿ ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಇದೀಗ ಇದರಲ್ಲಿ ಸೋಮವಾರಪೇಟೆ ತಾಲೂಕು ಒಳಗೊಂಡಿದೆ.

ಕAದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯಿಂದ ಮುಂಗಾರು ಸಾಲಿನ ಬರ ಘೋಷಣೆ ವಿವರ ಒದಗಿಸಿದ್ದು, ಮಳೆ ಕೊರತೆ, ಬೆಳೆ ಹಾನಿ ಮತ್ತು ಉಪಗ್ರಹ ಆಧಾರಿತ ಸಮೀಕ್ಷೆಗಳನ್ನು ಆಧರಿಸಿ ತಾಲೂಕುಗಳನ್ನು ತೀವ್ರ ಹಾಗೂ ಸಾಧಾರಣ ಬರಪೀಡಿತ ಎಂದು ಗುರುತಿಸಿದೆ. ಈ ಪಟ್ಟಿಯಲ್ಲಿ ಸೋಮವಾರಪೇಟೆ ತಾಲೂಕು ಸಹ ಒಳಗೊಂಡಿದ್ದು, ಪಟ್ಟಿಯ ಅನ್ವಯ ಬರ ಪರಿಹಾರ ಕಾಮಗಾರಿಗಳು, ಕುಡಿಯುವ ನೀರು ಮತ್ತು ಜಾನುವಾರು ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.