ಬೆಂಗಳೂರು, ಸೆ. ೧೭: ರಾಜ್ಯದ ಹಲವು ಭಾಗಗಳಲ್ಲಿನ ಒಣ ಹವಾಮಾನದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಗುರುವಾರ ಮತ್ತೆ ೨೩ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಇಲ್ಲಿಯವರೆಗೆ ಬರಪೀಡಿತ ಎಂದು ಘೋಷಿಸಲಾದ ಒಟ್ಟು ತಾಲೂಕುಗಳ ಸಂಖ್ಯೆ ೧೨೪ಕ್ಕೆ ಏರಿಕೆಯಾಗಿದೆ.

ಈ ಪೈಕಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕುಗಳನ್ನು ಮಧ್ಯಮ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಳನ್ವಯ ಅಗತ್ಯ ಪರಿಹಾರ ಮತ್ತು ತುರ್ತು ಸ್ಪಂದನಾ ಕ್ರಮಗಳನ್ನು ಕೈಗೊಳ್ಳಲು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ಮುಖ್ಯಸ್ಥರಾಗಿರುವ ಆಯಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಅಧಿಕಾರ ನೀಡಿದೆ. ಬೆಳೆ ನಷ್ಟದ ಸಮೀಕ್ಷೆಯನ್ನು ಜಂಟಿಯಾಗಿ ನಡೆಸುವಂತೆ ಹಾಗೂ ಪರಿಹಾರದ ಅಂದಾಜು ವರದಿಗಳನ್ನು ಆದಷ್ಟು ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಕೃಷಿ ಆಯುಕ್ತರು, ತೋಟಗಾರಿಕೆ ನಿರ್ದೇಶಕರು ಮತ್ತು ಸಂಬAಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಕೆಎಸ್‌ಎನ್‌ಡಿಎಂಸಿ ಪ್ರತಿ ವಾರ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ ಎಂದು ಸರ್ಕಾರ ತಿಳಿಸಿದೆ. ಅರ್ಹತೆಯ ಆಧಾರದ ಮೇಲೆ ಹೆಚ್ಚುವರಿ ತಾಲೂಕುಗಳನ್ನು ಹಂತ ಹಂತವಾಗಿ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗುವುದು ಎಂದೂ ಸರ್ಕಾರ ಹೇಳಿದೆ.