ಮಡಿಕೇರಿ, ಸೆ.೧೭; ಸಿಎನ್‌ಸಿ ಸಂಘಟನೆಯು ಸಲ್ಲಿಸಿರುವ ಕೊಡವ ಸ್ವಾಯತ್ತ ಮಂಡಳಿ ಭೌಗೋಳಿಕ, ರಾಜಕೀಯ ಬೇಡಿಕೆಗಳಿಗೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಹೆಚ್.ವಿ. ಶಿವಪ್ಪ; ಸಿಎನ್‌ಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಪ್ರತಿವಾದಿಗಳನ್ನಾಗಿ ಮಾಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೊಡವ ಸ್ವಾಯತ್ತ ಮಂಡಳಿ ಹಾಗೂ ಭೌಗೋಳಿಕ ಮತ್ತು ರಾಜಕೀಯವಾಗಿ ಸ್ವಾಯತ್ತ ಮಂಡಳಿ ರಚನೆ ಮಾಡುವಂತೆ ಬೇಡಿಕೆ ಇಟ್ಟಿದೆ. ಇದು ಎಲ್ಲ ಜನಾಂಗದವರು ಸೌಹಾರ್ದಯುತವಾಗಿ ಬದುಕು ನಡೆಸುತ್ತಿರುವ ಕೊಡಗು ಜಿಲ್ಲೆಯಲ್ಲಿ ವರ್ಗ ಸಂಘÀರ್ಷಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ಸಂಘಟನೆಯ ಬೇಡಿಕೆಗಳನ್ನು ವಿರೋಧಿಸುವದಲ್ಲದೆ ಬೇಡಿಕೆಗಳನ್ನು ಈಡೇರಿಸಬಾರದೆಂದು ಹೇಳಿದರು. ಜಿಲ್ಲೆಯಲ್ಲಿ ಸಾಂಸ್ಕೃತಿಕ, ಸಾರ್ವಭೌಮತೆಗೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲ ಜನಾಂಗದವರು ಬದುಕು ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಸಂಘಟನೆ ಒಂದು ಜನಾಂಗಕ್ಕೆ ಮಾತ್ರ ಸೀಮಿತವಾಗಿ ಬೇಡಿಕೆ ಇಟ್ಟಿರುವದು ವರ್ಗ ಸಂಗರ್ಷಕ್ಕೆ ದಾರಿಯಾಗಲಿದೆ. ಸುಮಾರು ೨೬೩ ವರ್ಷಗಳ ಕಾಲ ಕೊಡಗು ಜಿಲ್ಲೆಯನ್ನು ಹಾಲೇರಿ ವಂಶಸ್ಥ ರಾಜರು ಆಳ್ವಿಕೆ ಮಾಡಿದ್ದು, ಎಲ್ಲರನ್ನೂ ಸಮಾನಾಗಿ ಕಂಡಿದ್ದಾರೆ. ಜಮ್ಮಾ, ಉಂಬಳಿ, ಬಂದೂಕು ಹಕ್ಕು ಮುಂತಾದ ಸೌಲಭ್ಯಗಳನ್ನು ಕೂಡ ನೀಡಿದ್ದಾರೆ ಎಂಬದು ಇತಿಹಾಸದಲ್ಲಿದೆ. ಅಂತಹದ್ದರಲ್ಲಿ ಇದೀಗ ಒಂದು ಜನಾಂಗಕ್ಕೆ ಪ್ರತ್ಯೇಕ ಬೇಡಿಕೆ ಇಟ್ಟಿರುವದು ಸರಿಯಲ್ಲ, ಕೊಡವ ಜನಾಂಗ, ಅವರ ಸಂಪ್ರದಾಯ, ಆಚರಣೆಗಳಿಗೆ ನಮ್ಮ ಯಾವದೇ ವಿರೋಧವಿಲ್ಲ. ಸಿಎನ್‌ಸಿಯ ಬೇಡಿಕೆಗಳನ್ನು ಮಾತ್ರ ವಿರೋಧಿಸುತ್ತಿರುವದಾಗಿ ಹೇಳಿದರು. ಈ ಸಂಬAಧ ಈಗಾಗಲೇ ನ್ಯಾಯಾಲಯದಲ್ಲಿ ಪ್ರತಿವಾದಿಯಾಗಿ ಅರ್ಜಿ ಸಲ್ಲಿಸಲಾಗಿದೆ ಎಂದೂ ಹೇಳಿದರು.

ಪ್ರಧಾನ ಕಾರ್ಯದರ್ಶಿ ಟಿ.ಎಸ್. ಶಾಂಭಶಿವಯ್ಯ ಮಾತನಾಡಿ; ಬಸವಣ್ಣನವರ ಕಾಲದಿಂದಲೇ ಸಮಾನತೆಯನ್ನು ಕಾಯ್ದುಕೊಂಡು ಬರಲಾಗುತ್ತಿದೆ. ಆದರೆ, ಇದೀಗ ಸಿಎನ್‌ಸಿ ಸಂಘಟನೆ ಶಾಂತಿ ಭಂಗ, ಸಂಘರ್ಷ ಉಂಟುಮಾಡಲು ಹೊರಟಿದೆ. ಸಂಘಟನೆಯು ರಾಜರ ಬಗ್ಗೆ ಕೆಟ್ಟದಾಗಿ ಮಾತುಗಳನ್ನಾಡುತ್ತಿರುವದು ಸರಿಯಲ್ಲ. ಎಲ್ಲರಿಗೂ ಶಾಂತಿ, ಸೌಹಾರ್ದಯುತವಾಗಿ ಬದುಕಲು ಅವಕಾಶ ನೀಡಬೇಕೆಂದು ಹೇಳಿದರು. ಸಂಘಟನೆಯ ಬೇಡಿಕೆಗಳೇ ತಪ್ಪಾಗಿವೆೆ. ಸ್ವಾಯತ್ತತೆ ಕೇಳುವದಾದರೆ ಕೊಡವರಿಗೆ ಮಾತ್ರವಲ್ಲದೆ ಎಲ್ಲ ಜನಾಂಗದವರಿಗೂ ಸೇರಿಕೊಂಡು ಹೋರಾಟ ಮಾಡಲಿ ಅದಕ್ಕೆ ನಮ್ಮ ವಿರೋಧವಿಲ್ಲ, ಕೊಡವರ ಸಂಸ್ಕೃತಿ ಬಗ್ಗೆ ಯಾವದೇ ವಿರೋಧವಿಲ್ಲವೆಂದು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಕುಶಾಲನಗರ ಘಟಕದ ಅಧ್ಯಕ್ಷ ಶುಭಶೇಖರ್, ಜಿಲ್ಲಾ ನೌಕರರ ಸಂಘದ ಮಾಜಿ ಕಾರ್ಯದರ್ಶಿ ವಿರೂಪಾಕ್ಷ ಇದ್ದರು.