ಮಡಿಕೇರಿ, ಸೆ. ೧೭: ಐತಿಹಾಸಿಕ ಹಿನ್ನೆಲೆಯಿರುವ ಮಡಿಕೇರಿ ದಸರಾ ಕರಗೋತ್ಸವ ಹಾಗೂ ದಶಮಂಟಪಗಳ ಶೋಭಾಯಾತ್ರೆ ಅಕ್ಟೋಬರ್ ೨೧ರಂದು ನೆರವೇರಲಿದೆ ಎಂದು ಕರಗ ದೇವತೆಗಳಲ್ಲೊಂದಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಸ್ಪಷ್ಟಪಡಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವ ಅಧ್ಯಕ್ಷ ಜಿ.ವಿ. ರವಿಕುಮಾರ್; ಅನಾದಿ ಕಾಲದಿಂದಲೂ ಗೌಳಿ ಸಮುದಾಯದವರು ಕರಗ ಆರಾಧನೆ ಮಾಡುತ್ತಾ ಬರುತ್ತಿದ್ದಾರೆ. ಸಮುದಾಯದ ಹಿರಿಯರು, ನಾಲ್ಕು ಕರಗ ದೇವತೆಗಳ ಅರ್ಚಕರು ಸಂಪ್ರದಾಯ ರೂಢಿಯಂತೆ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಸಭೆ ನಡೆಸಿ ದಿನಾಂಕ ನಿಗದಿಪಡಿಸಿ ಕರಗ ಮಹೋತ್ಸವ ನಡೆಸಿ ವಿಜಯದಶಮಿಯಂದು ಶೋಭಾಯಾತ್ರೆ ನಡೆಸಿ ಬನ್ನಿಕಡಿಯುವ ಮೂಲಕ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಈ ಬಾರಿ ಅ.೨೦ ಆಯುಧ ಪೂಜಾ ದಿನದಂದು ಶೋಭಾಯಾತ್ರೆ ನಡೆಸುವ ಬಗ್ಗೆ ಕೆಲವರು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಸಭೆ ನಡೆಸಿ ಹೇಳಿಕೆ ನೀಡಿದ್ದು, ಇದರಿಂದ ಜನರಲ್ಲಿ ಗೊಂದಲ ಉಂಟಾಗಿದೆ, ಈ ಹಿನ್ನೆಲೆಯಲ್ಲಿ ನಿನ್ನೆ ದಿನ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಹಿರಿಯರು, ನಾಲ್ಕು ಕರಗ ದೇವತೆಗಳ ಅರ್ಚಕರ ಸಮ್ಮುಖದಲ್ಲಿ ಸಭೆ ನಡೆಸಿ, ಚರ್ಚಿಸಿ ಅ. ೧೧ರಂದು ಕರಗಗಳ ಆರಂಭ ಹಾಗೂ ೨೧ರ ವಿಜಯದಶಮಿಯಂದು ಶೋಭಾಯಾತ್ರೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ದಶಮಂಟಪಗಳ ಸಮಿತಿಯವರು ಕೂಡ ಒಪ್ಪಿಗೆ ಸೂಚಿಸಿದ್ದು, ಮಂಟಪಗಳ ಶೋಭಾಯಾತ್ರೆ ಕೂಡ ಅಂದೇ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕೆಲವೊಮ್ಮೆ ಅಧಿಕ ದಿನಗಳು ಬರಲಿದ್ದು ಆಚರಣೆ ಬಗ್ಗೆ ಗೊಂದಲ ಉಂಟಾಗುತ್ತದೆ, ಆದರೆ ಈ ಹಿಂದೆ ಕೂಡ ಅಧಿಕ ದಿನ ಬಂದ ಸಂದರ್ಭದಲ್ಲಿಯೂ ವಿಜಯದಶಮಿಯಂದೇ ಶೋಭಾಯಾತ್ರೆ ಹಾಗೂ ಬನ್ನಿ ಕಡಿಯುವ ಸಂಪ್ರದಾಯವನ್ನು ನೆರವೇರಿಸಲಾಗಿದೆ ಎಂದು ರವಿ ವಿವರಿಸಿದರು. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಈ ವರ್ಷ ಕರಗಗಳು ತಾ. ೧೧ ರಿಂದ ಪ್ರಾರಂಭಗೊಳ್ಳಲಿರುವುದರಿAದ ಒಟ್ಟು ೧೧ ದಿನಗಳ ಕಾಲ ದಸರಾ ಉತ್ಸವಗಳು ನೆರವೇರಲಿವೆ.

ಗೌರವ ಅಧ್ಯಕ್ಷ ಜಿ.ಜಿ. ಬಾಲಕೃಷ್ಣ ಮಾತನಾಡಿ; ದಸರಾ ಉತ್ಸವ ವಿಜೃಂಭಣೆಯಿAದ ನಡೆಯಬೇಕು. ಆದರೆ, ಅದಕ್ಕೆ ಕಪ್ಪು ಚುಕ್ಕೆ ಎಂಬAತೆ ಕೆಲ ದಿನಗಳ ಹಿಂದೆ ಕೆಲವರು ತೀರ್ಮಾನ ಕೈಗೊಂಡಿದ್ದಾರೆ. ಪೂರ್ವಿಕರ ಕಾಲದಿಂದಲೇ ಕರಗ ಮಹೋತ್ಸವದ ಬಗ್ಗೆ ಕಂಚಿ ಕಾಮಾಕ್ಷಿ ದೇವಾಲಯದಲ್ಲಿಯೇ ಹಿರಿಯರು ಸೇರಿ ತೀರ್ಮಾನ ಕೈಗೊಂಡ ಬಳಿಕ ದಶ ಮಂಟಪ ಸಮಿತಿ, ದಸರಾ ಸಮಿತಿ, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವದು ಸಂಪ್ರದಾಯದAತೆ ನಡೆದುಕೊಂಡು ಬಂದಿದೆ. ಅದನ್ನು ಬದಲಾವಣೆ ಮಾಡುವಂತಿಲ್ಲ, ಇತಿಹಾಸವನ್ನು ತಿರುಚುವಂತಿಲ್ಲ. ಇದೀಗ ಕೆಲವರ ತೀರ್ಮಾನದಿಂದ ಗೊಂದಲ ಉಂಟಾಗಿದ್ದು, ಅದನ್ನು ಸರಿಪಡಿಸಲು ಸಭೆ ಕರದು ತೀರ್ಮಾನಿಸಲಾಗಿದೆ. ದಸರಾ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ತೀರ್ಮಾನಿಸಲಾಗಿದೆ. ಸಂಪ್ರದಾಯ ಹಾಗೂ ಪದ್ಧತಿಯಂತೆ ಉತ್ಸವ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಮಿತಿಯ ಉಪಾಧ್ಯಕ್ಷ ಜಿ.ಸಿ.ಜಗದೀಶ್ ಮಾತನಾಡಿ; ಮೈಸೂರು ದಸರಾ ಉತ್ಸವ ಆಚರಣೆ ಬಳಿಕ ಮಡಿಕೇರಿ ದಸರಾ ನಡೆಯುವದು ಇತಿಹಾಸದಲ್ಲಿದೆ. ಆದರೆ ಕೆಲವರ ತೀರ್ಮಾನದಿಂದ ಸಣ್ಣ ಗೊಂದಲ ಉಂಟಾಗಿತ್ತು. ಇದೀಗ ಗೊಂದಲಕ್ಕೆ ತೆರೆ ಎಳೆಯಲಾಗಿದ್ದು, ಅ.೨೧ರಂದು ಶೋಭಾಯಾತ್ರೆ ಬಳಿಕ ಬನ್ನಿ ಕಡಿಯುವ ಸಂಪ್ರದಾಯವನ್ನು ಮುಂದುವರಿಸಲಾಗುವದು. ದಸರಾ ಆಚರಣೆಗೆ ಶಾಸಕರ ಪ್ರಯತ್ನದಿಂದ ದೊಡ್ಡ ಪ್ರಮಾಣದ ಅನುದಾನ ದೊರೆತ್ತಿದ್ದು, ಉತ್ಸವಕ್ಕೆ ಎಲ್ಲ ರೀತಿಯ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.

ರಸ್ತೆ ದುರಸ್ತಿಗೆ ಆಗ್ರಹ

ದಸರಾ ಸಮೀಪಿಸುತಲಿದ್ದು, ಪ್ರಮುಖ ರಸ್ತೆಯಾದ ರಾಜಾಸೀಟ್ ರಸ್ತೆ ಹಾಗೂ ಕರಗ ದೇವತೆಗಳು ಸಂಚರಿಸುವ ನಗರದ ಎಲ್ಲ ರಸ್ತೆಗಳನ್ನು ಆದಷ್ಟು ಶೀಘ್ರ ದುರಸ್ತಿಪಡಿಸಿಕೊಡಬೇಕೆಂದು ಜಗದೀಶ್ ಆಗ್ರಹಿಸಿದರು. ರಾಜಾಸೀಟ್ ರಸ್ತೆಗೆ ಭೂಮಿಪೂಜೆ ನೆರವೇರಿಸಲಾಗಿದ್ದು, ಶೀಘ್ರದಲ್ಲೇ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಜಿ.ಎಲ್. ದಾಸ್, ಗೌರವ ಅಧ್ಯಕ್ಷ ಜಿ.ಸಿ. ರಮೇಶ್, ಪಿ.ಎ. ಲೋಕನಾಥ್ ಇದ್ದರು.