(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಸೆ. ೧೭: ಕೊಡವ ಕುಟುಂಬಗಳ ನಡುವೆ ಅತಿ ಹೆಚ್ಚು ಜನಪ್ರಿಯವಾಗಿ ನಡೆಯುವ ಕೌಟುಂಬಿಕ ಹಾಕಿ ನಮ್ಮೆ ಒಂದೆಡೆಯಾದರೆ, ಇದರೊಂದಿಗೆ ಕ್ರಿಕೆಟ್ ನಮ್ಮೆ, ಕೇರ್‌ಬಲಿ ನಮ್ಮೆ, ಕಬಡ್ಡಿ, ಫುಟ್‌ಬಾಲ್, ವಾಲಿಬಾಲ್ ಸೇರಿದಂತೆ ಇತರ ಹಲವು ಕ್ರೀಡಾಕೂಟಗಳೂ ನಡೆದುಕೊಂಡು ಬರುತ್ತಿವೆ.
ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿ ಕಳೆದ ವರ್ಷದಿಂದ ಕೌಟುಂಬಿಕ ತೋಕ್‌ನಮ್ಮೆಯೂ ಸೇರ್ಪಡೆಗೊಂಡಿದೆ. ಕೊಡಗಿನಲ್ಲಿ ಪೂಜನೀಯ ಪರಿಕರವಾಗಿಯೂ ಕೋವಿ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಜನಾಂಗದಲ್ಲಿ ಅವಿಭಾಜ್ಯ ಅಂಗವಾಗಿದೆ. ಕಳೆದ ಹಲವು ವರ್ಷಗಳಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ರೋಚಕ ಸ್ಪರ್ಧೆಯೂ ಹೆಚ್ಚು ಹೆಚ್ಚಾಗಿ ನಡೆದುಕೊಂಡು ಬರುತ್ತಿದೆ.
ಕಳೆದ ವರ್ಷ ಪೆಮ್ಮಂಡ ಕುಟುಂಬಸ್ಥರು ಈ ಸ್ಪರ್ಧೆಗೆ ಕೌಟುಂಬಿಕ ಕ್ರೀಡೆಯ ಸ್ವರೂಪ ನೀಡಿದ್ದು, ೨೦೨೫ ರಲ್ಲಿ ಪೊನ್ನಂಪೇಟೆಯಲ್ಲಿ ಅದ್ದೂರಿಯಾಗಿ ಆಯೋಜನೆಗೊಂಡಿತ್ತು. ಇದರ ಮುಂದುವರಿದ ಭಾಗವಾಗಿ ಪ್ರಸಕ್ತ ವರ್ಷ ಕಿರುಗೂರು ಮೂಲದ ಆಲೆಮಾಡ ಕುಟುಂಬಸ್ಥರು ಆಲೆಮಾಡ ತೋಕ್‌ನಮ್ಮೆ - ೨೦೨೬ ಅನ್ನು ಪೊನ್ನಂಪೇಟೆಯಲ್ಲೇ ಆಯೋಜಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕುಟುಂಬದಿAದ ಸಿದ್ಧತೆ ನಡೆದಿದೆ. ಅಂತರ ಕೊಡವ ಕುಟುಂಬಗಳ ನಡುವಿನ ಶೂಟಿಂಗ್ ಸ್ಪರ್ಧೆಯಾಗಿ ತೋಕ್‌ನಮ್ಮೆ ಗಮನ ಸೆಳೆಯಲಿದೆ.
ಅಕ್ಟೋಬರ್ ೧೦ ಹಾಗೂ ೧೧ ರಂದು ಪೊನ್ನಂಪೇಟೆಯ ಕೆ.ಪಿ.ಎಸ್. ಶಾಲಾ ಮೈದಾನದಲ್ಲಿ ಈ ಕ್ರೀಡಾಹಬ್ಬ ನಿಗದಿಯಾಗಿದೆ. ಕೊಡವ ಶೂಟರ್ಸ್ ಫೆಡರೇಷನ್ ಸಹಯೋಗದಲ್ಲಿ ಹಾಗೂ ಅದರ ನಿಯಮಾವಳಿಗೆ ಒಳಪಟ್ಟು ಎರಡು ದಿನಗಳ ಕಾಲ ಈ ಸ್ಪರ್ಧೆ ನಡೆಯಲಿದ್ದು, ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.
೨೦೨೫ ಪೆಮ್ಮಂಡ ತೋಕ್‌ನಮ್ಮೆಯಲ್ಲಿ ೨೪೮ ಕುಟುಂಬಗಳು ಭಾಗಿಯಾಗಿದ್ದು, ಈ ಬಾರಿ ಇದಕ್ಕಿಂತ ಹೆಚ್ಚಿನ ಕುಟುಂಬಗಳು (ಸುಮಾರು ೩೫೦) ಪಾಲ್ಗೊಳ್ಳುವ ನಿರೀಕ್ಷೆಯನ್ನು ಆಯೋಜಕರು ಹೊಂದಿದ್ದಾರೆ.
೧೫೦ ಕುಟುಂಬ ನೋಂದಣಿ
ಕುಟುAಬವಾರು ಸ್ಪರ್ಧಿಗಳ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊAಡಿದ್ದು, ಈ ತನಕ ಸುಮಾರು ೧೫೦ ರಷ್ಟು ಕುಟುಂಬಗಳು ಹೆಸರು ನೋಂದಾಯಿಸಿಕೊAಡಿವೆ. ಹೆಸರು ನೋಂದಾವಣಿಗೆ ಸೆಪ್ಟೆಂಬರ್ ೨೫ ರ ತನಕವೂ ಕಾಲಾವಕಾಶವಿದೆ.
ಸ್ಪರ್ಧೆ ಹೇಗೆ...?
ಪ್ರತಿ ತಂಡದಲ್ಲಿ ಇಬ್ಬರು ಸ್ಪರ್ಧಿಗಳು ಇರಬೇಕಿದೆ. ೧೨ ಬೋರ್ ಶಾಟ್‌ಗನ್ ಹಾಗೂ .೨೨ ರೈಫಲ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿ ಕೊಡವ ಕುಟುಂಬದಿAದ ಗರಿಷ್ಠ ನಾಲ್ಕು ತಂಡಗಳು ಭಾಗವಹಿಸಲು ಅವಕಾಶವಿದೆ. ಇದರ ಜೊತೆಗೆ ಓಪನ್ ಈವೆಂಟ್ ಏರ್‌ಗನ್ ಸ್ಪರ್ಧೆಯೂ ಇರಲಿದ್ದು, ಈ ಸ್ಪರ್ಧೆಗೆ ಕ್ರೀಡಾಕೂಟದ ದಿನದಂದು ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಒಟ್ಟು ರೂ. ೩ ಲಕ್ಷ ಬಹುಮಾನ
ಈ ಶೂಟಿಂಗ್ ಪಂದ್ಯಾವಳಿಯಲ್ಲಿ ಒಟ್ಟು ರೂ. ೩ ಲಕ್ಷ ಮೌಲ್ಯದ ಬಹುಮಾನ ಜೊತೆಗೆ ಟ್ರೋಫಿ ನೀಡಲಾಗುವುದು.
೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಟ್ರೋಫಿ, ದ್ವಿತೀಯ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ, ತೃತೀಯ ರೂ. ೪೦ ಸಾವಿರ ನಗದು ಹಾಗೂ ಟ್ರೋಫಿಯನ್ನು ಒಳಗೊಂಡಿದೆ. ನಾಲ್ಕನೇ ಸ್ಥಾನಕ್ಕೆ ರೂ. ೩೦ ಸಾವಿರ ನಗದು ಹಾಗೂ ಟ್ರೋಫಿ, ಐದನೇ ಸ್ಥಾನಕ್ಕೆ ರೂ. ೨೦ ಸಾವಿರ ನಗದು ಹಾಗೂ ಟ್ರೋಫಿ ಬಹುಮಾನವಿದೆ.
ಏರ್‌ಗನ್ ಓಪನ್ ಈವೆಂಟ್ ವಿಜೇತರಿಗೆ ರೂ. ೧೦ ಸಾವಿರ ಹಾಗೂ ರೂ. ೭,೫೦೦, ರೂ. ೫ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವುದು.
ಉದ್ಘಾಟನಾ ದಿನದಂದು
ಉದ್ಘಾಟನಾ ದಿನದಂದು ಬೆಳಿಗ್ಗೆ ಪೊನ್ನಂಪೇಟೆ ಕೊಡವ ಸಮಾಜದಿಂದ ಸ್ಪರ್ಧೆ ನಡೆಯುವ ಮೈದಾನದ ತನಕ ಒಡ್ಡೋಲಗದೊಂದಿಗೆ ಕೋವಿ, ಕತ್ತಿ ಸಹಿತವಾಗಿ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದ ಸಂದರ್ಭ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಸನ್ಮಾನಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೊ. ೯೭೪೧೨೦೩೧೨೩, ೯೯೦೧೨೨೧೯೪೫ ಸಂಖ್ಯೆಯನ್ನು ಸಂಪರ್ಕಿಸಬಹುದು.
ವಿವಿಧ ಶೂರ‍್ಸ್ ಕ್ಲಬ್, ಸಂಘ-ಸAಸ್ಥೆಗಳ ಮೂಲಕ ಕಳೆದ ಹಲವು ವರ್ಷಗಳಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಮೊಟ್ಟೆಗೆ ಗುರಿಯಿಡುವ ಸ್ಪರ್ಧೆ ಜಿಲ್ಲೆಯಾದ್ಯಂತ ಹೆಚ್ಚಾಗಿ ಕಂಡುಬರುತ್ತಿದೆ. ಇದೇ ಸ್ಪರ್ಧೆಯನ್ನು ಕೌಟುಂಬಿಕವಾಗಿ ನಡೆಸುತ್ತಿರುವುದು ಈ ತೋಕ್‌ನಮ್ಮೆಯ ವಿಶೇಷ.