ಮಡಿಕೇರಿ, ಸೆ. ೧೬: ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ನೂತನ ಕಚೇರಿಯನ್ನು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ ಕೇಶವ ಕಾಮತ್, ನಿಕಟಪೂರ್ವ ಅಧ್ಯಕ್ಷ ಟಿ.ಪಿ ರಮೇಶ್, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಸೇರಿದಂತೆ ಗಣ್ಯರು ದೀಪ ಬೆಳಗಿಸಿ, ಕನ್ನಡಾಂಬೆಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ನಾಡಗೀತೆಯೊಂದಿಗೆ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಎಂ.ಪಿ.ಕೇಶವ ಕಾಮತ್ ಅವರು, ಮೂರ್ನಾಡು ಹೋಬಳಿ ಘಟಕಕ್ಕೆ ಪಂಚಾಯಿತಿ ವತಿಯಿಂದ ಕಚೇರಿ ದೊರೆತಿರುವುದು ಸಂತಸದ ವಿಚಾರವಾಗಿದೆ. ಇದಕ್ಕಾಗಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಒಂದು ವರ್ಷದಿಂದ ನಡೆಸಿದ ನಿರಂತರ ಪ್ರಯತ್ನಕ್ಕೆ ಇದೀಗ ಫಲ ದೊರೆತ್ತಿದೆ. ಕೊಡಗು ಜಿಲ್ಲೆಯಲ್ಲಿ ಕೆಲವೇ ಹೋಬಳಿ ಘಟಕಗಳಿಗೆ ಸ್ವಂತ ಕಚೇರಿ ಸೌಲಭ್ಯವಿದ್ದು, ಇದೀಗ ಮೂರ್ನಾಡು ಘಟಕವೂ ಆ ಪಟ್ಟಿಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಈರಮಂಡ ಹರಿಣಿ ವಿಜಯ್ ಅವರು, ನೂತನ ಕಚೇರಿ ಉದ್ಘಾಟನೆಯಾಗಿರುವುದು ಒಂದು ವರ್ಷದ ನಿರಂತರ ಪ್ರಯತ್ನಕ್ಕೆ ದೊರೆತ ಫಲವಾಗಿದೆ. ಈ ಕಚೇರಿ ಕೇವಲ ನಾಲ್ಕು ಗೋಡೆಗಳ ಕಚೇರಿಯಾಗದೆ, ಕನ್ನಡ ಸಾಹಿತ್ಯ, ನಾಡು-ನುಡಿ, ಸಂಸ್ಕೃತಿ ಮತ್ತು ಕಲೆಯ ಕಾರ್ಯಕ್ರಮಗಳು ನಡೆಯುವ ಚಟುವಟಿಕೆಯ ಕೇಂದ್ರವಾಗಬೇಕು ಎಂದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಅವರು ಮಾತನಾಡಿ, ಕನ್ನಡ ನಾಡು-ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರ್ನಾಡು ಘಟಕಕ್ಕೆ ನೂತನ ಕಚೇರಿ ದೊರೆತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರು ಮಾತನಾಡಿ, ಮೂರ್ನಾಡು ಹೋಬಳಿ ಘಟಕಕ್ಕೆ ನೂತನ ಕಚೇರಿ ದೊರೆತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಕನ್ನಡ ಸಾಹಿತ್ಯ, ನಾಡು-ನುಡಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸಿದರು.
ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ ಅನಂತಶಯನ ಅವರು ಮಾತನಾಡಿ, ಯಾವುದೇ ಜವಾಬ್ದಾರಿಯನ್ನು ವಹಿಸಿಕೊಂಡಾಗ ಅದನ್ನು ಸಂಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಿದಾಗ ಮಾತ್ರ ಒಂದು ಸಂಸ್ಥೆ ಎತ್ತರಕ್ಕೆ ಬೆಳೆಯಲು ಸಾಧ್ಯ. ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಹರಿಣಿ ವಿಜಯ್ ಅವರು ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರೂ ಅದು ಪೂರ್ಣಗೊಳ್ಳುವವರೆಗೆ ಶ್ರಮಿಸುವ ಗುಣ ಹೊಂದಿದ್ದಾರೆ. ಇಂತಹ ಅಧ್ಯಕ್ಷರು ಪರಿಷತ್ತಿನಲ್ಲಿ ಇರುವುದು ಹೆಮ್ಮೆಯ ವಿಚಾರ ಎಂದರು.
ಸಮಾಜ ಸೇವಕ ಅವರೆಮಾದಂಡ ಶರಣ್ ಪೂಣಚ್ಚ ಅವರು ಮಾತನಾಡಿ, ಒಂದು ಕನ್ನಡ ಸಂಘಟನೆಯನ್ನು ಕಟ್ಟುವುದು ಹಾಗೂ ಅದನ್ನು ಒಗ್ಗಟ್ಟಿನಿಂದ ಮುನ್ನಡೆಸುವುದು ಸುಲಭದ ಕೆಲಸವಲ್ಲ. ಮೂರ್ನಾಡು ಹೋಬಳಿ ಘಟಕವನ್ನು ಒಗ್ಗೂಡಿಸಿಕೊಂಡು ಹಲವು ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಸಾಹಿತಿ ಕಿಗ್ಗಾಲು ಗಿರೀಶ್, ಬಡುವಂಡ ಅರುಣ್ ಅಪ್ಪಚ್ಚು ಹಾಗೂ ಗ್ರಾಮ ಆಡಳಿತಾಧಿಕಾರಿ ಅಕ್ಷತಾ ಬಿ.ಶೆಟ್ಟಿ ಮಾತನಾಡಿ, ನೂತನ ಕಚೇರಿಯು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಈರಮಂಡ ಹರಿಣಿ ವಿಜಯ್, ವಿಶೇಷ ಆಹ್ವಾನಿತ ಮಠದ ಮನೆ ಧನಂಜಯ್, ಚಂದ್ರಮೌಳಿ ಹಾಗೂ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದರ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಮೂರ್ನಾಡು ಘಟಕದ ಅಧ್ಯಕ್ಷ ಚಾರಿಮಂಡ ಚಂಗಪ್ಪ, ಫ್ರೆಂಡ್ಸ್ ವಾಹನ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಅಬೂಬಕ್ಕರ್, ಹಿಂದೂ ಮಲಯಾಳಿ ಸಂಘದ ಸಹ ಕಾರ್ಯದರ್ಶಿ ಸಜೀವ್, ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ ಸಂಯೋಜಕಿ ಪುಷ್ಪ ಕಿಶೋರ್, ಟೈರ್ಸ್ ಸಂಘದ ಜಿಲ್ಲಾ ಅಧ್ಯಕ್ಷ ಶೇಖ್ ಅಹ್ಮದ್, ದಾನಿ ಸುಮಿತಾ ಪೊನ್ನಮ್ಮ, ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ಸಂಘಟನಾ ಕಾರ್ಯದರ್ಶಿ ಮಮತಾ ಕೊಂಪುಳಿರ, ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷಿö್ಮ, ಮುಂಡoಡ ವಿಜು, ರೋಸ್ಲಿ, ಪರಿಷತ್ತಿನ ಸದಸ್ಯರಾದ ಈರಮಂಡ ವಿಜಯ್, ಅವರೆಮಾದಂಡ ಆಶಾದೇವಮ್ಮ, ಭಾರತಿ ಬಿ.ಎಲ್, ಜಯಂತಿ ಸೇರಿದಂತೆ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ಮೂರ್ನಾಡು ಹೋಬಳಿ ಘಟಕದ ಮಹಿಳಾ ಪ್ರತಿನಿಧಿ ಮೀನಾಕ್ಷಿ ಕೇಶವ ನಿರೂಪಿಸಿದರು. ಕೋಶಾಧಿಕಾರಿ ಮಡೆಯಂಡ ಸೂರಜ್ ಸ್ವಾಗತಿಸಿ, ಪುದಿಯೊಕ್ಕಡ ರಮ್ಯ ವಿಪನ್ ವಂದಿಸಿದರು.