ವೀರಾಜಪೇಟೆ, ಸೆ. ೧೬: ವೀರಾಜಪೇಟೆಯ ಮಲಬಾರ್ ರಸ್ತೆಯಲ್ಲಿರುವ ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆಯನ್ನು ನೆರವೇರಿಸಲಾಯಿತು.

ಸಂಘದ ಮಾಜಿ ಅಧ್ಯಕ್ಷರುಗಳಾದ ಬಿ.ವಿ. ಭವಾನಿ ಶಂಕರ್ ಬೋರ್ಕರ್, ಕೃಷ್ಣರಾವ್ ಹಾಗೂ ಸುಮಿತ್ರಬಾಯಿ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಬಿ.ವಿ. ಭವಾನಿ ಶಂಕರ್ ಬೋರ್ಕರ್ ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘವು ಸಕ್ರಿಯ ಸಂಘವಾಗಿದ್ದು, ಮಲಬಾರ್ ರಸ್ತೆಯ ಬಳಿ ಸಂಘಕ್ಕೆ ೧೯೫೨ ರಲ್ಲಿ ನಿವೇಶನ ದೊರಕಿದ್ದು, ತದನಂತರ ೧೯೫೫ ರಲ್ಲಿ ಅಂದಿನ ಕೊಡಗು ಸಿ ರಾಜ್ಯದ ಮುಖ್ಯಮಂತ್ರಿ ಸಿ.ಎಂ. ಪೂಣಚ್ಚ ಅವರು ಸಂಘದ ಕಟ್ಟಡವನ್ನು ಉದ್ಘಾಟಿಸಿದ್ದರು.

ತದನಂತರ ಈ ಸಂಘದ ವತಿಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಇದೀಗ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.

ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ ನಟರಾಜ್ ಬೋರ್ಕರ್ ಮಾತನಾಡಿ, ಹಿಂದಿನ ಕಟ್ಟಡವು ಹಳೆಯದಾದ್ದರಿಂದ ಇದೀಗ ಸುಸಜ್ಜಿತವಾಗಿ ಕಟ್ಟಡವನ್ನು ನಿರ್ಮಿಸುವ ಸಲುವಾಗಿ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.

ಈ ಸಂದರ್ಭ ಕೊಡಗು ಬಾಲಾವಳಿಕಾರ್ ಉತ್ತಮ ಜೀವನ ಸಹಕಾರ ಸಂಘದ ಕಾರ್ಯದರ್ಶಿ ಉದಯ ಶಂಕರ್, ಉಪಾಧ್ಯಕ್ಷೆ ಸ್ವಾತಿ, ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.