ಪೊನ್ನಂಪೇಟೆ, ಸೆ. ೧೫: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನದ ಅಭಿವೃದ್ಧಿ ಕಾಮಗಾರಿಗೆ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್ ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನವನ್ನು ರೂ.೩.೨೦ ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳಿಸಲಾಗುತ್ತಿದ್ದು, ನೂತನ ಸ್ಪಿçಂಕ್ಲರ್ ವ್ಯವಸ್ಥೆ ಹಾಗೂ ಚೈನ್ ಲಿಂಕ್ ಫೆನ್ಸಿಂಗ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು. ಪೊನ್ನಂಪೇಟೆಯಲ್ಲಿ ರೂ.೫ ಕೋಟಿ ವೆಚ್ಚದಲ್ಲಿ ೧೦೦ ವಿದ್ಯಾರ್ಥಿಗಳ ಸಾಮರ್ಥ್ಯದ ಕ್ರೀಡಾ ವಸತಿ ಶಾಲೆಯ ನಿರ್ಮಾಣವೂ ನಡೆಯುತ್ತಿದೆ. ಇದರಲ್ಲಿ ೫೦ ಬಾಲಕರು ಹಾಗೂ ೫೦ ಬಾಲಕಿಯರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಕಾಮಗಾರಿಯನ್ನು ಸುಮಾರು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಹೋಬಳಿಗಳಲ್ಲಿರುವ ಕ್ರೀಡಾ ಮೈದಾನಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ. ಕಾನೂರಿನ ಜನತಾ ಪ್ರೌಢಶಾಲೆ ಹಿಂಭಾಗದ ಮೈದಾನವನ್ನು ಪುನಶ್ಚೇತನಗೊಳಿಸಿ ಫೆನ್ಸಿಂಗ್ ಅಳವಡಿಸುವುದು, ವೀರಾಜಪೇಟೆ ತಾಲೂಕು ಮೈದಾನ ಸೇರಿದಂತೆ ಅಮ್ಮತ್ತಿ ಮತ್ತಿತರ ಹೋಬಳಿಗಳಲ್ಲಿನ ಮೈದಾನಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಕಾರ್ಯಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಬಿ.ಬಾಡಗದಲ್ಲಿ ೧೧.೫ ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ ಸುಮಾರು ರೂ. ೪೦ ರಿಂದ ೪೫ ಕೋಟಿ ವೆಚ್ಚದಲ್ಲಿ ಸಮಗ್ರ ಕ್ರೀಡಾ ತರಬೇತಿ ಕೇಂದ್ರ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆ ಆರಂಭಿಸಲಾಗಿದೆ. ಈಗಾಗಲೇ ಆಡಳಿತ ಕಟ್ಟಡದ ಕಾಮಗಾರಿ ಪ್ರಾರಂಭವಾಗಿದ್ದು, ಕೇಂದ್ರದಲ್ಲಿ ಟೆನ್ನಿಸ್ ಕೋರ್ಟ್ಗಳು, ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ಗಳು, ಅಂತರರಾಷ್ಟ್ರೀಯ ಮಟ್ಟದ ಒಳಾಂಗಣ ಈಜುಕೊಳ, ಹಾಕಿ ಟರ್ಫ್ ಹಾಗೂ ರನ್ನಿಂಗ್ ಟ್ರ್ಯಾಕ್ ಸೇರಿದಂತೆ ವಿವಿಧ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶವಿದೆ ಎಂದು ಪೊನ್ನಣ್ಣ ಹೇಳಿದರು. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಮಾತನಾಡಿ, ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಶೇ.೨ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸುಮಾರು ೭೪ ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಂಡಿದ್ದು, ಕ್ರೀಡಾಪಟುಗಳಿಗೆ ಶೇ.೨ರಷ್ಟು ಮೀಸಲಾತಿ ನೀಡಿರುವುದರಿಂದ ಸುಮಾರು ೧,೪೨೦ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಪಡೆಯಲು ಅವಕಾಶ ದೊರೆಯಲಿದೆ ಎಂದರು.
೮೦ ಸಾವಿರದಂತೆ ೨೦೨೮ ರವರೆಗೆ ಪ್ರೋತ್ಸಾಹಧನ ನೀಡುವ ವ್ಯವಸ್ಥೆ ಮಾಡಲಾಗಿದೆ. ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಚಿನ್ನದ ಪದಕಕ್ಕೆ ರೂ.೬ ಕೋಟಿ, ಬೆಳ್ಳಿಪದರಕ್ಕೆ ರೂ.೪ ಕೋಟಿ ಹಾಗೂ ಕಂಚಿನ ಪದಕಕ್ಕೆ ರೂ.೨ ಕೋಟಿ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿದೆ ಎಂದರು.
ಕೊಡಗಿಗೆ ಮತ್ತೊಂದು ವಿಶೇಷ ಕ್ರೀಡಾಶಾಲೆ ಮಂಜೂರಾಗಿದ್ದು, ಸೂಕ್ತ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಸ್ಥಳ ಅಂತಿಮಗೊAಡರೆ ಪ್ರಸಕ್ತ ವರ್ಷದಿಂದಲೇ ನೂತನ ಕ್ರೀಡಾಶಾಲೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿಸ್ಮಯ ಚಕ್ರವರ್ತಿ, ಒಲಂಪಿಯನ್ ಬಾಳೆಯಡ ಸುಬ್ರಮಣಿ, ಜಿ.ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ಪ. ಪಂ. ಮಾಜಿ ಅಧ್ಯಕ್ಷ ಅಣ್ಣೀರ ಹರೀಶ್, ಒಲಂಪಿಯನ್ ಸಿ ಎಸ್ ಪೂಣಚ್ಚ, ಚೆಪ್ಪುಡೀರ ಕಾರ್ಯಪ್ಪ, ಚೆಕ್ಕೇರ ವಾಸು, ಅಜ್ಜಿಕುಟ್ಟೀರ ಗಿರೀಶ್, ಕರ್ತಮಾಡ ರಶಿಕ, ಮೂಕಳೇರ ಸುಮಿತ್ರಾ, ಅಜ್ಜಿಕುಟ್ಟಿರ ಪೊನ್ನಪ್ಪ, ಮುಂಬರುವ ಅಜ್ಜಿಕುಟ್ಟಿರ ಹಾಕಿ ನಮ್ಮೆ ಅಧ್ಯಕ್ಷ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ಇನ್ನಿತರರು ಇದ್ದರು.
-ಚನ್ನನಾಯಕ