ಗೋಣಿಕೊಪ್ಪಲು, ಸೆ. ೧೫: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗೋಣಿಕೊಪ್ಪ ಸೇವಾ ಕೇಂದ್ರದ ವತಿಯಿಂದ ರಕ್ಷಾ ಬಂಧನ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಗೋಣಿಕೊಪ್ಪ ಬೈಪಾಸ್ ರಸ್ತೆಯ ಸಫಲತಾ ಭವನದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರಕ್ಷಾ ಬಂಧನ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಧ್ಯಾತ್ಮಿಕ ಹಿನ್ನೆಲೆ ಕುರಿತು ವಿಶೇಷ ಉಪನ್ಯಾಸವನ್ನು ಕುಶಾಲನಗರ ಸೇವಾ ಕೇಂದ್ರದ ಬಿ.ಕೆ. ಲಲಿತಮಣಿ ಅಕ್ಕ ನೀಡಿದರು. ಮುಖ್ಯ ಅತಿಥಿಯಾಗಿ ಸರ್ವದೈವತಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಮನೆಯಪಂಡ ಶೀಲಾ ಬೋಪಣ್ಣ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಂಗವಾಗಿ ರಾಧಾ-ಕೃಷ್ಣರ ವೇಷ ಧರಿಸಿದ್ದ ಮಕ್ಕಳಿಗೆ ಉಡುಗೊರೆ ಗಳನ್ನು ವಿತರಿಸಲಾಯಿತು. ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೋಣಿಕೊಪ್ಪ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ. ರೇಖಾ ಅಕ್ಕ ಸ್ವಾಗತಿಸಿದರು. ಶಿಕ್ಷಕಿ ಅಲಿಮಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.