ಮಡಿಕೇರಿ, ಸೆ. ೧೫: ಕೊಡವ ನ್ಯಾಷನಲ್ ಕೌನ್ಸಿಲ್ ಮುಂದಿಟ್ಟಿರುವ ಕೆಲವೊಂದು ಬೇಡಿಕೆಯ ವಿರುದ್ಧವಷ್ಟೆ ನಮ್ಮ ಹೋರಾಟವಾಗಿದ್ದು, ಕೊಡವ ಸಮುದಾಯದ ವಿರುದ್ಧವಲ್ಲ ಎಂದು ಗೌಡ ಸಮಾಜಗಳ ಒಕ್ಕೂಟ ಹೇಳಿದ್ದು, ಈ ವಿಚಾರದಲ್ಲಿ ಗೌಡ ಜನಾಂಗದ ವಿರುದ್ಧ ಮಾಡುತ್ತಿರುವ ಹೇಳಿಕೆ ಖಂಡನೀಯ. ಸಮುದಾಯವನ್ನು ಗುರಿ ಮಾಡಿ ನೀಡುತ್ತಿರುವ ಹಾನಿಕಾರಕ ಹೇಳಿಕೆಯ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ಪ್ರಮುಖರು ಎಚ್ಚರಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಕೊಡಗು ಗೌಡ ಸಮಾಜಗಳ ಒಕ್ಕೂಟ ಗೌಡ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಹಿತಾಸಕ್ತಿಗಳ ರಕ್ಷಣೆಯೊಂದಿಗೆ ಕೊಡಗಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ. ನಾವು ಯಾವುದೇ ಸಮುದಾಯದ ವಿರುದ್ಧವಲ್ಲ. ಕೊಡಗಿನ ನೆಲದಲ್ಲಿ ತಲತಲಾಂತರದಿAದ ಸಹಬಾಳ್ವೆ ನಡೆಸುತ್ತಿರುವ ಎಲ್ಲಾ ಸಮುದಾಯಗಳ ಹಕ್ಕು, ಗೌರವ ಮತ್ತು ಅಸ್ತಿತ್ವವನ್ನು ಗೌರವಿಸುತ್ತೇವೆ ಎಂದರು.

ಪ್ರಸ್ತುತ ನಡೆಯುತ್ತಿರುವ ವಿದ್ಯಮಾನ ಯಾವುದೇ ಹೊಸ ನ್ಯಾಯಾಂಗ ಹೋರಾಟವಲ್ಲ. ಸಿಎನ್‌ಸಿ ಕೇಂದ್ರ ಮತ್ತು ಕರ್ನಾಟಕ ಸರ್ಕಾರವನ್ನು ಪ್ರತಿವಾದಿಗಳನ್ನಾಗಿ ಮಾಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೊಡಗಿಗೆ ಕೊಡವ ಸ್ವಾಯತ್ತ ಮಂಡಳಿ, ಬೌಗೋಳಿಕ - ರಾಜಕೀಯ ಸ್ವಾಯತ್ತತೆಯ ಬೇಡಿಕೆ, ಕೊಡವ ಲ್ಯಾಂಡ್, ಭೌಗೋಳಿಕ ಹಾಗೂ ರಾಜಕೀಯ ಸ್ವಾಯತ್ತ ಪ್ರದೇಶವನ್ನು ಪ್ರತ್ಯೇಕವಾಗಿ ರಚಿಸಿ ಆಂತರಿಕ ಸ್ವಯಂ ನಿರ್ಣಯದ ಹಕ್ಕು, ಅಧಿಕಾರವನ್ನು ನೀಡುವ ಬೇಡಿಕೆಯನ್ನು ಮುಂದಿಟ್ಟಿದ್ದು, ೨೦೨೩ರಲ್ಲಿ ಸೂರ್ತಲೆ ಸೋಮಣ್ಣ ಅಧ್ಯಕ್ಷತೆಯಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟವು ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ತನ್ನ ನಿಲುವನ್ನು ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ವಿರೋಧ ದಾಖಲಿಸಿದೆ. ಇದೇ ವಿಷಯದಲ್ಲಿ ಜಿಲ್ಲಾ ಒಕ್ಕಲಿಗರ ಸಂಘ, ಕೊಡವ ಮುಸ್ಲಿಂ ಅಸೋಸಿಯೇಷನ್, ಜೇನು ಕುರುಬ ಸಂಘಟನೆ, ಆದಿವಾಸಿ ಒಕ್ಕೂಟ, ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಉಚ್ಚನ್ಯಾಯಾಲಯದಲ್ಲಿ ವಿಚಾರಣೆ ಮುಂದಿದ್ದು, ಈ ವಿದ್ಯಮಾನಗಳ ಮಾಹಿತಿ ನೀಡಲು ಮಡಿಕೇರಿಯ ಗೌಡ ಸಮಾಜದಲ್ಲಿ ಸಭೆ ನಡೆಸಿ ವಿವರಣೆ ನೀಡಿದ್ದೇವೆ. ಅಲ್ಲಿ ನ್ಯಾಯಾಲಯದಲ್ಲಿ ಮುಂದುವರೆಯಲು ನಿರ್ಧರಿಸಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ ಎಂದರು.

ಸಿಎನ್‌ಸಿ ಮುಂದಿಟ್ಟಿರುವ ಬೇಡಿಕೆಗೆ ಇತರ ಸಮುದಾಯಗಳು ವಿರೋಧಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೂ ಅರೆಭಾಷೆ ಗೌಡ ಜನಾಂಗದÀ ಮೇಲೆ ಮಾತ್ರ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ರಾಜ್ಯೋತ್ಸವವನ್ನು ಕರಾಳ ದಿನವಾಗಿ, ಗಣರಾಜ್ಯೋತ್ಸವವನ್ನು ವಿರೋಧಿಸುವ ಸಿಎನ್‌ಸಿ ಬೇಡಿಕೆಗಳನ್ನು ಕೊಡಗಿನ ಎಲ್ಲಾ ಸಮುದಾಯದವರು ಆತ್ಮಗೌರವದಿಂದ ವಿರೋಧಿಸಬೇಕೆಂದು ಕೋರಿದ ಆನಂದ್, ಆರೆಭಾಷೆ ಗೌಡ ಜನಾಂಗಕ್ಕೆ ತನ್ನದೇ ಆದ ಸಂಸ್ಕೃತಿ, ಪದ್ಧತಿ ಇದೆ. ಅದನ್ನು ಆಚರಿಸಲು ಯಾರ ಅಪ್ಪಣೆಯ ಅವಶ್ಯಕತೆ ಇಲ್ಲ. ಯಾರ ಹಕ್ಕನ್ನು ಕಸಿದುಕೊಳ್ಳುವುದು ನಮ್ಮ ಉದ್ದೇಶವಲ್ಲ. ಕೊಡಗಿನ ಭವಿಷ್ಯದ ಆಡಳಿತ ವ್ಯವಸ್ಥೆಯ ಬಗ್ಗೆ ನಿರ್ಧಾರವಾಗುವ ಕೊಡಗಿನ ಪ್ರತಿಯೊಂದು ಸಮುದಾಯದ ಹಕ್ಕು ಮತ್ತು ಹಿತಾಸಕ್ತಿಯೂ ಪರಿಗಣನೆಯಾಗಬೇಕೆಂಬುದು ನಮ್ಮ ನಿಲುವಾಗಿದೆ. ಭೌಗೋಳಿಕ ರಾಜಕೀಯ ಸ್ವಾಯತ್ತತೆ ಕೇವಲ ಒಂದು ಸಮುದಾಯದ ಭಾಷೆ, ಸಂಸ್ಕೃತಿ, ಪರಂಪರೆಯ ರಕ್ಷಣೆಯಲ್ಲ. ಅಂತಹ ವ್ಯವಸ್ಥೆಯ ಸ್ವರೂಪದ ಮೇಲೆ ಅವಲಂಬಿತವಾಗಿ ಸ್ಥಳೀಯ ಆಡಳಿತ, ಕಾನೂನು ರೂಪಿಸುವಿಕೆ, ಭೂಮಿ, ನೈಸರ್ಗಿಕ ಸಂಪನ್ಮೂಲಗಳು, ಸಾಂಪ್ರದಾಯಿಕ ಕಾನೂನು, ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಮತ್ತು ತೆರಿಗೆ, ಆದಾಯ ಮುಂತಾದ ವಿಷಯಗಳಲ್ಲಿ ವಿಶೇಷ ಅಧಿಕಾರಗಳು ಇರಬಹುದಾಗಿದೆ ಎಂದು ಹೇಳಿದರು.

ಉಪಾಧ್ಯಕ್ಷ ತೇನನ ರಾಜೇಶ್ ಮಾತನಾಡಿ, ಸ್ವಾಯತ್ತತೆ ಎಂಬ ಪದವನ್ನು ಕೇವಲ ಸಾಂಸ್ಕೃತಿಕ ಹಕ್ಕು ಎಂದು ಪರಿಗಣಿಸದೆ ಅದರ ಸಂಪೂರ್ಣ ಸಂವಿಧಾನಿಕ ಮತ್ತು ಆಡಳಿತಾತ್ಮಕ ಪರಿಣಾಮಗಳನ್ನು ಪರಿಶೀಲಿಸಬೇಕು. ಎಸ್‌ಟಿ ಸ್ಥಾನಮಾನ ಮತ್ತು ಭೌಗೋಳಿಕತೆ ಸ್ವಾಯತ್ತತೆ ಎರಡು ವಿಭಿನ್ನ ಸಾಂವಿಧಾನಿಕ ವಿಷಯಗಳಾಗಿದೆ. ಆದರೆ, ಇವೆರಡನ್ನು ಒಟ್ಟಾಗಿ ಬೇಡಿಕೆ ಸಲ್ಲಿಸಿದಾಗ ಅದರ ಪರಿಣಾಮ ಆ ಪ್ರದೇಶದಲ್ಲಿ ವಾಸಿಸುವ ಇತರ ಸಮುದಾಯಗಳ ಭೂಮಿ, ರಾಜಕೀಯ ಪ್ರಾತಿನಿಧ್ಯ, ಆಡಳಿತಾತ್ಮಕ ಹಕ್ಕುಗಳು, ಭವಿಷ್ಯದ ಅವಕಾಶಗಳ ಮೇಲೆ ಏನಾಗಬಹುದು ಎಂಬುದನ್ನು ಸರಕಾರ ಸಮಗ್ರವಾಗಿ ಪರಿಶೀಲಿಸಬೇಕೆಂದು ಒತ್ತಾಯಿಸಿದರು.

ಕೊಡಗು ಒಂದೇ ಸಮುದಾಯಕ್ಕೆ ಸೇರಿದ ಪ್ರದೇಶವಲ್ಲ. ತಲೆಮಾರುಗಳಿಂದ ವಿವಿಧ ಸಮುದಾಯಗಳು ಸಹಬಾಳ್ವೆಯಿಂದ ಬದುಕುತ್ತಿರುವ ಭೂಮಿ ಇದಾಗಿದೆ. ಒಂದು ಸಮುದಾಯದ ಹಕ್ಕುಗಳನ್ನು ರಕ್ಷಿಸುವ ಹೆಸರಿನಲ್ಲಿ ಮತ್ತೊಂದು ಸಮುದಾಯದ ಹಕ್ಕುಗಳು ಕುಗ್ಗಬಾರದು ಎಂಬುದು ನಮ್ಮ ಮೂಲಭೂತ ನಿಲುವಾಗಿದೆ. ರಾಜಕೀಯ ಪ್ರಾತಿನಿಧ್ಯ, ಮತದಾನದ ಹಕ್ಕು, ಭೂಮಿ, ಆಸ್ತಿ ಹಕ್ಕು, ಆಡಳಿತಾತ್ಮಕ ಅಧಿಕಾರ, ಸಾಂಪ್ರದಾಯಿಕ ಕಾನೂನುಗಳು, ಭವಿಷ್ಯದ ಪೀಳಿಗೆ ವಿಚಾರದಲ್ಲಿ ನಮಗೆ ಆತಂಕವಿದ್ದು, ಇದು ಕೊಡವ ಸಮುದಾಯದ ವಿರುದ್ಧ ಹೋರಾಟವಲ್ಲ ಎಂದು ಪುನರುಚ್ಚರಿಸಿದರು.

ಕೊಡವರ ಭಾಷೆ, ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ನಾವು ಗೌರವಿಸುತ್ತೇವೆ. ಕೊಡವರ ನ್ಯಾಯಸಮ್ಮತ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಕ್ಕುಗಳ ರಕ್ಷಣೆಗೆ ನಮ್ಮ ವಿರೋಧವಿಲ್ಲ. ಒಂದು ಸಮುದಾಯದ ಹಕ್ಕುಗಳನ್ನು ರಕ್ಷಿಸುವ ಹೆಸರಿನಲ್ಲಿ ಮತ್ತೊಂದು ಹಕ್ಕುಗಳನ್ನು ಕಡಿಮೆ ಮಾಡುವ ಯಾವುದೇ ವ್ಯವಸ್ಥೆಯನ್ನು ನಾವು ಒಪ್ಪುವುದಿಲ್ಲ. ಅಸಮಾನತೆ ಉಂಟುಮಾಡಬಹುದಾದ ವಿಷಯದ ವಿರುದ್ಧ ಸಂವಿಧಾನಬದ್ಧ ಆಕ್ಷೇಪಣೆಯಾಗಿದೆ ಎಂದು ಹೇಳಿದರು.

ಸಿಎನ್‌ಸಿ ಬೇಡಿಕೆಗಳು ಸಾಂಸ್ಕೃತಿಕ ಬೇಡಿಕೆಗಳೆಂದು ಪರಿಗಣಿಸದೆ ಸಂಪೂರ್ಣ ಸಂವಿಧಾನಿಕ, ಕಾನೂನು ಮತ್ತು ಸಾಮಾಜಿಕ ದೃಷ್ಟಿಕೋನದಿಂದ ಪರಿಶೀಲಿಸಬೇಕು. ಕೊಡಗಿನ ಎಲ್ಲಾ ಸಮುದಾಯಗಳ ಐತಿಹಾಸಿಕ ನೆಲೆ, ಭೂಮಿ ಮತ್ತು ಆಸ್ತಿ ಹಕ್ಕುಗಳು, ಎಲ್ಲಾ ಅರ್ಹ ನಾಗರಿಕರ ಮತದಾನದ ಹಕ್ಕು, ರಾಜಕೀಯ ಪ್ರಾತಿನಿಧ್ಯ, ಆಡಳಿತಾತ್ಮಕ ಅಧಿಕಾರಿಗಳ ವ್ಯಾಪ್ತಿ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮ, ಮಹಿಳೆಯರು ಮತ್ತು ಯುವಕರ ಹಕ್ಕು, ಮುಂದಿನ ಪೀಳೀಗೆಯ ಹಿತಾಸಕ್ತಿ, ಭಾರತ ಸಂವಿಧಾನದ ಮೂಲಭೂತ ಹಕ್ಕುಗಳು, ಸಮಾನತೆಯ ತತ್ವಗಳನ್ನು ಪರಿಶೀಲಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.

ನಾವು ಭಾವನಾತ್ಮಕ ಅಥವಾ ದ್ವೇಷದ ಹೋರಾಟ ಬಯಸುವುದಿಲ್ಲ. ಕಾನೂನು, ಸಂವಿಧಾನ ಮತ್ತು ವಾಸ್ತವಾಂಶಗಳ ಆಧಾರದ ಮೇಲೆ ಮಾತ್ರ ಮಂಡಿಸುತ್ತೇವೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಮಡಿಕೇರಿ ಕೊಡಗು ಗೌಡ ಸಮಾಜದ ಅಧ್ಯಕ್ಷ ದಂಬೆಕೋಡಿ ಆನಂದ್, ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಒಕ್ಕೂಟದ ನಿರ್ದೇಶಕರುಗಳಾದ ಕುಂಭಗೌಡನ ಜಲಜಾಕ್ಷಿ, ಕುಯ್ಯಮುಡಿ ರಾಜು ಹಾಜರಿದ್ದರು.