ಮಡಿಕೇರಿ: ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ವಿಭಾಗ ಆಯೋಜಿಸಿದ್ದ ತಾಲೂಕುಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವೀರಾಜಪೇಟೆಯ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಿದ್ದಾಪುರದ ಸೈಂಟ್ ಆ್ಯನ್ಸ್ನಲ್ಲಿ ನಡೆದ ಥ್ರೋಬಾಲ್ ಪಂದ್ಯಾಟದಲ್ಲಿ ವಿನ್ನರ್ಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪೊನ್ನAಪೇಟೆಯ ಸರ್ವದೈವತಾ ಪಿಯು ಕಾಲೇಜಿನಲ್ಲಿ ನಡೆದ ಟಿಟಿ ಪಂದ್ಯಾಟದಲ್ಲಿ ಬಾಲಕಿಯರು ವಿನ್ನರ್ಸ್ ಟ್ರೋಫಿಯನ್ನು ಪಡೆದುಕೊಂಡರು. ಹುಡುಗರ ತಂಡವು ರನ್ನರ್ಸ್ ಆಗಿ ಹೊರಹೊಮ್ಮಿದ್ದಾರೆ. ಹಾಗೆ ಕಾಪ್ಸ್ ಕಾಲೇಜಿನಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕಿಯರ ತಂಡವು ರನ್ನರ್ಸ್ ಸ್ಥಾನ ಪಡೆದುಕೊಂಡಿದ್ದಾರೆ.ಮಡಿಕೇರಿ: ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ಪ್ಲೇಹೋಮ್, ಕಿಂಡರ್ಗಾರ್ಟನ್ ಹಾಗೂ ೧ನೇ ತರಗತಿಯ ಪುಟಾಣಿ ಮಕ್ಕಳು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರದಿಂದ ಆಚರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಪ್ರಾಂಶುಪಾಲೆ ಸುಮಿತ್ರಾ ಕೆ.ಎಸ್., ಆಡಳಿತ ಮುಖ್ಯಸ್ಥ ರವಿ ಪಿ. ಹಾಗೂ ಸಂಯೋಜಕಿ ಭಾರತಿ ಕೆ.ಕೆ. ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ಲೇಹೋಮ್ನಿಂದ ೧ನೇ ತರಗತಿಯವರೆಗಿನ ಮಕ್ಕಳು ಶ್ರೀ ಕೃಷ್ಣ ಹಾಗೂ ರಾಧೆಯ ವೇಷಭೂಷಣಗಳಲ್ಲಿ ಕಂಗೊಳಿಸಿ, ನೃತ್ಯ, ರ್ಯಾಂಪ್ ವಾಕ್ ಹಾಗೂ ಶ್ರೀ ಕೃಷ್ಣನ ಕುರಿತಾದ ಸುಮಧುರ ಗೀತೆಗಳ ಮೂಲಕ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಕಾಳಿಂಗ ಮರ್ಧನದ ನೃತ್ಯ ಹಾಗೂ ಭಕ್ತ ಕನಕದಾಸರ ‘ಕನಕನ ಕಿಂಡಿ’ ಕುರಿತ ನಾಟಕವನ್ನು ಮಕ್ಕಳು ಮನೋಜ್ಞವಾಗಿ ಪ್ರದರ್ಶಿಸಿದರು. ಮುಖ್ಯ ಅತಿಥಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಮಕ್ಕಳ ಪ್ರತಿಭೆಯನ್ನು ಶ್ಲಾಘಿಸಿ, ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹತ್ವ ಹಾಗೂ ಶ್ರೀ ಕೃಷ್ಣನ ಜೀವನ ಸಂದೇಶಗಳನ್ನು ವಿವರಿಸಿದರು.
ವಿದ್ಯಾರ್ಥಿಗಳಾದ ಗ್ರಹಿತ್, ಯುಧ್ವಿತಾ ಹಾಗೂ ಮೋಕ್ಷ್, ಶ್ಲೋಕ ಪಠಣದ ಮೂಲಕ ಗಮನ ಸೆಳೆದರು. ವಿದ್ಯಾರ್ಥಿಗಳಾದ ಜಾನ್ವಿ ಸಿ. ಹಾಗೂ ಸಮವೇದ್ ಕೆ.ಎಸ್. ನಿರೂಪಿಸಿದರು. ರಿಯಾ ಜೈನ್ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹತ್ವ ಕುರಿತು ಮಾತನಾಡಿದರು.
ಶಮಿಕ್ ಇಬ್ರಾಹಿಂ ಸ್ವಾಗತಿಸಿ, ಶಿಕ್ಷಕಿ ರಾಜೇಶ್ವರಿ ಮುಖ್ಯ ಅತಿಥಿಯ ಪರಿಚಯವನ್ನು ಮಾಡಿದರು. ವಿದ್ಯಾರ್ಥಿನಿ ಬಿನಿಷಾ ಬೋಪಣ್ಣ ಎಂ. ವಂದಿಸಿದರು. ಪುಟಾಣಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.*ಗೋಣಿಕೊಪ್ಪ: ಶಿಕ್ಷಕರ ದಿನಾಚರಣೆ ಅಂಗವಾಗಿ ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ವತಿಯಿಂದ ಶಾಲೆಯ ಶಿಕ್ಷಕರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಶಿಕ್ಷಕರಿಗೆ ವಿಶೇಷ ಗೌರವ ಸಲ್ಲಿಸುವ ಉದ್ದೇಶದಿಂದ ಶಾಲೆಯ ದ್ವಾರದಿಂದಲೇ ಭವ್ಯ ಸ್ವಾಗತ ಮೆರವಣಿಗೆ ಆಯೋಜಿಸಲಾಗಿತ್ತು. ಎಸ್ಡಿಎಂಸಿ ಸದಸ್ಯರು ಆರತಿ ತಟ್ಟೆ ಹಿಡಿದು ಮೆರವಣಿಗೆಯ ಮುಂಭಾಗದಲ್ಲಿ ಸಾಗಿದರು.
ವಿದ್ಯಾರ್ಥಿಗಳು ಶಿಕ್ಷಕರಿಗೆ ಪುಷ್ಪವೃಷ್ಟಿ ಸುರಿಸುತ್ತಾ ವೇದಿಕೆಯತ್ತ ಕರೆತಂದರು. ವೇದಿಕೆಯ ಮುಂಭಾಗದಲ್ಲಿ ಶಿಕ್ಷಕರಿಗೆ ಆರತಿ ಬೆಳಗಿ, ತಿಲಕ ಹಚ್ಚುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಬಳಿಕ ಶಿಕ್ಷಕರನ್ನು ವೇದಿಕೆಯಲ್ಲಿ ನಿಗದಿಪಡಿಸಿದ್ದ ಆಸನಗಳಲ್ಲಿ ಗೌರವಪೂರ್ವಕವಾಗಿ ಆಸೀನರನ್ನಾಗಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಅಧ್ಯಕ್ಷತೆಯಲ್ಲಿ ಡಮರುಗ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್ ಸೇರಿದಂತೆ ಶಿಕ್ಷಕರುಗಳಾದ ಜೋಸ್ಲಿಯ, ಇಂದಿರಾ, ದಮಯಂತಿ, ಅನಿತಾ ಕುಮಾರಿ, ಯಸ್ವಿನಿ, ಅರ್ಷಿಯ, ಕ್ಲೆಮೆಂಟಿನ್, ಸಹನಾ, ಶಾರದಾ, ನಾಗರಾಜು, ಸ್ನೇಹ ಕಾವೇರಮ್ಮ, ಮಂಜುಳಾ, ಸಿದ್ದರಾಜು, ಪೂಜಾ, ಅರ್ಷಿಯ, ಪಾರ್ವತಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಎಸ್ಡಿಎಂಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ, “ಒಬ್ಬ ಉತ್ತಮ ಶಿಕ್ಷಕನ ಪಾಠ ಮುಗಿದರೂ, ಅವರ ಮಾತು ವಿದ್ಯಾರ್ಥಿಯ ಬದುಕಿನಲ್ಲಿ ಎಂದಿಗೂ ಮುಗಿಯುವುದಿಲ್ಲ. ವರ್ಷಗಳು ಕಳೆದರೂ ಯಾವುದೋ ಒಂದು ಸಂದರ್ಭದಲ್ಲಿ ಶಿಕ್ಷಕರು ಹೇಳಿದ ಮಾತು ನೆನಪಾಗುತ್ತದೆ. ಕಷ್ಟ ಬಂದಾಗ ಅವರ ಧೈರ್ಯದ ಮಾತು ದಾರಿ ತೋರಿಸುತ್ತದೆ. ಸೋಲಿನ ಸಂದರ್ಭದಲ್ಲಿ ಅವರ ನಂಬಿಕೆ ಮತ್ತೆ ಎದ್ದು ನಿಲ್ಲುವ ಶಕ್ತಿ ನೀಡುತ್ತದೆ. ಅದಕ್ಕಾಗಿಯೇ ಶಿಕ್ಷಕರು ಮನುಷ್ಯರನ್ನು ರೂಪಿಸುವ ಮೌನ ಶಿಲ್ಪಿಗಳು. ಅವರು ಕಟ್ಟುವುದು ಕಟ್ಟಡವಲ್ಲ, ಭವಿಷ್ಯ. ಅವರು ಬೆಳೆಸುವುದು ಬೆಳೆಯಲ್ಲ, ಪೀಳಿಗೆ. ಅವರು ಬಿತ್ತುವುದು ಕೇವಲ ಅಕ್ಷರವಲ್ಲ, ಆಲೋಚನೆ” ಎಂದು ಹೇಳಿದರು. ವೇದಿಕೆ ಕಾರ್ಯಕ್ರಮದ ಬಳಿಕ ಶಿಕ್ಷಕರಿಗಾಗಿ ವಿವಿಧ ಮನರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ನೀರು ತುಂಬಿಸುವುದು, ಸೇಬು ಕಚ್ಚುವುದು, ಮಡಿಕೆ ಒಡೆಯುವುದು, ಪಾಸಿಂಗ್ ದಿ ಬಾಲ್, ಮ್ಯೂಸಿಕಲ್ ಚೇರ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು.
ನAತರ ಶಿಕ್ಷಕರಿಗಾಗಿ ವಿಶೇಷ ಭೋಜನಕೂಟ ಏರ್ಪಡಿಸಲಾಗಿತ್ತು. ಎಸ್ಡಿಎಂಸಿ ಉಪಾಧ್ಯಕ್ಷೆ ದಿವ್ಯ ಪ್ರಾರ್ಥನೆ ನೆರವೇರಿಸಿದರು. ಸದಸ್ಯೆ ಗೌರಿ ಸ್ವಾಗತಿಸಿದರು. ಸೌಮ್ಯ ವಂದಿಸಿದರು. ಚಂದ್ರಕಲಾ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರು. ಎಸ್ಡಿಎಂಸಿ ಸದಸ್ಯರುಗಳಾದ ಅನಿತಾ, ಕೌಸರ್, ಮಂಜುಳ, ಮೀನ, ರಾಕೇಶ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.