ಮತ್ತೆ ಗಣೇಶ ಹಬ್ಬ ಬಂದಿದೆ. ಏಕತೆ ಮತ್ತು ಸಮಾನತೆಯ ಹಿನ್ನೆಲೆಯಲ್ಲಿ ಗಣೇಶೋತ್ಸವವು ನಾಡಿಗೆ ಮಹತ್ವದ ಕೊಡುಗೆ ನೀಡುತ್ತದೆ. ಗಣಪತಿಯ ವ್ಯಕ್ತಿತ್ವವು ಸಮಾಜಕ್ಕೆ ನೀಡುವ ತತ್ವ ಹಾಗೂ ಸಂದೇಶಗಳು ಬಹಳ ಆಳ ಮತ್ತು ವಿಸ್ತಾರ. ಇದು ಸಾರ್ವಕಾಲಿಕ ಸತ್ಯಗಳು. ‘ಗಣ' ಎಂದರೆ ಜನಸಮೂಹ. ‘ಪತಿ' ಎಂದರೆ ನಾಯಕ ಎಂಬ ಅರ್ಥ. ಸಮಾಜವನ್ನು ಸತ್ಪಥದಲ್ಲಿ ಮುಂದುವರಿಯಲು ಅಗತ್ಯ ಇರುವ ಎಲ್ಲಾ ಗುಣಗಳನ್ನೂ ರೂಢಿಸಿಕೊಂಡು, ಜನಹಿತ ಮತ್ತು ಲೋಕಹಿತದಲ್ಲಿ ನಡೆಯುವ ಅನೇಕ ವಿಚಾರಗಳು ಗಣಪತಿಯ ವ್ಯಕ್ತಿತ್ವದಲ್ಲಿ ಅರಳುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಗಣಪತಿಯ ತತ್ವಗಳು ಜನತೆಗೆ ಸೇವಾ ಮನೋಭಾವ, ತಾಳ್ಮೆ, ಪರಿಸರ ಪ್ರೇಮ, ಎಲ್ಲರನ್ನೂ ಗೌರವಿಸುವ ಮತ್ತು ಉತ್ತಮ ಸಮಾಜ ನಿರ್ಮಾಣದ ದೀಕ್ಷೆಯನ್ನು ನೀಡುತ್ತದೆ. ಗಣಪತಿಯ ಶರೀರ, ಸ್ವರೂಪವು, ಮಾನವನು ಸಮಾಜದಲ್ಲಿ ಹೇಗೆ ಉತ್ತಮ ನಾಯಕನಾಗಬಹುದು ಎಂಬುವುದಕ್ಕೆ ದೀವಿಗೆಯಾಗುತ್ತದೆ.

ಗಣೇಶೋತ್ಸವವು ಐತಿಹಾಸಿಕವಾಗಿ ಅವಲೋಕಿಸಿದಾಗ ಬಾಲಗಂಗಾಧರ ತಿಲಕರು ಬ್ರಿಟಿಷರ ವಿರುದ್ಧ ಜನರನ್ನು ಒಗ್ಗೂಡಿಸಲು ‘ಸಾರ್ವಜನಿಕ ಗಣೇಶೋತ್ಸವ’ ಎಂಬ ಸಂಪ್ರದಾಯವನ್ನು ಅನುಷ್ಠಾನಗೊಳಿಸಿದರು. ಇದು ಎಲ್ಲಾ ಸಾಮಾಜಿಕ ಚೌಕಟ್ಟುಗಳನ್ನೂ ಮೀರಿ ಸರ್ವ ಸಮಾನತೆ ಹಾಗೂ ಐಕ್ಯತೆಯ ಮಾನದಂಡದಲ್ಲಿ ನಡೆಸಲ್ಪಡುತ್ತದೆ. ಇದರಲ್ಲಿ ‘ವಸುದೈವ ಕುಟುಂಬಕಮ್' ಎಂಬ ಕಲ್ಪನೆಯೂ ಇದೆ. ಒಂದಾಗಿ ಬದುಕುವ ಚಿಂತನೆ ಇದೆ. ಆನೆಯ ತಲೆ, ಮಾನವ ಶರೀರ, ವಾಹನವಾಗಿ ಸಣ್ಣ ಇಲಿ, ದೊಡ್ಡ ಹೊಟ್ಟೆಗೆ ಹಾವಿನ ಬಳ್ಳಿಗಳನ್ನು ಕಂಡಾಗ, ಪ್ರಕೃತಿಯ ರಕ್ಷಣೆಯ ಕಾಳಜಿ ಇದೆ. ಪ್ರಾಣಿ ಮತ್ತು ಮಾನವನ ನಡುವಿನ ಸಮತೋಲನ ಹಾಗೂ ಸಹಬಾಳ್ವೆಯನ್ನು ಇದು ಸೂಚಿಸುತ್ತದೆ. ಗಣೇಶನು ಬುದ್ಧಿ ಹಾಗೂ ಸಿದ್ಧಿಯ ಅಧಿದೇವತೆ ಎನ್ನಲಾಗಿದೆ. ಸಮಾಜದ ಅಭಿವೃದ್ಧಿಗೆ ಕೇವಲ ಬುದ್ಧಿವಂತಿಕೆ ಸಾಲದು. ಕಾರ್ಯವನ್ನು ಸರಿಯಾಗಿ ಕಾರ್ಯಗತಗೊಳಿಸುವ ಜಾಣ್ಮೆಯೂ, ಸಾಮರ್ಥ್ಯವೂ ಅಗತ್ಯ. ಸಾಮಾಜಿಕವಾದ ಎಡರು - ತೊಡರುಗಳನ್ನು, ಸವಾಲುಗಳನ್ನು ಶಾಂತರೂಪದಿAದ ಪರಿಹರಿಸಿಕೊಳ್ಳಲು ದೃಢಚಿತ್ತವೂ ಬೇಕು. ಈ ವಿವೇಕ ಪ್ರಜ್ಞೆಯು ಜಾಗೃತವಾಗಬೇಕಾದರೆ ಗಣೇಶ ತತ್ವಗಳನ್ನು ಅರ್ಥ ಮಾಡಿಕೊಳ್ಳಬೇಕು.

ಗಣೇಶೋತ್ಸವದಲ್ಲಿ ಮಣ್ಣಿನ ಗಣೇಶ ವಿಗ್ರಹವನ್ನು ರಚಿಸಿ, ಪೂಜಿಸಿ ನಂತರ ಮಣ್ಣಿಗೆ ಸೇರಿಸುವ ಪ್ರಕ್ರಿಯೆಯೂ ನಡೆಯುತ್ತದೆ. ಇದರಲ್ಲಿ ಮಣ್ಣಿನಿಂದಲೇ ಬಂದ ಮಾನವ ಸಹಿತ ಎಲ್ಲವೂ ಕೂಡಾ ಅಂತಿಮವಾಗಿ ಮಣ್ಣನ್ನೇ ಸೇರುವುದು ಎಂಬ ಅರಿವು ಇದೆ. ಇದು ನಶ್ವರ ತತ್ವದ ಪಾಠ. ಅಥರ್ವ ವೇದವೂ ಕೂಡಾ ಮಣ್ಣಿನಿಂದಲೇ ಸಕಲ ಜೀವಸೃಷ್ಟಿ ಎಂದು ಸಾರುತ್ತದೆ. ಗಣಪತಿಯು ಗರಿಕೆ ಪ್ರಿಯ. ಆಹಾರದ ಕೊರತೆ ಇದ್ದಾಗ, ಗರಿಕೆಯನ್ನು ಜಗಿಯುತ್ತಿದ್ದರೆ, ಹಸಿವೆಯ ಬಾಧೆ ಆಗುವುದಿಲ್ಲ ಎಂಬ ನಂಬಿಕೆ ಇದೆ. ಗರಿಕೆಯು ಔಷಧೀಯ ಗುಣಗಳನ್ನೂ ಹೊಂದಿದೆ. ಪ್ರಕೃತಿಯ ಪಂಚತತ್ವಗಳನ್ನು ಸಂಘಟಿಸುವವನೇ ಗಣಪತಿ. ವಾಯು ಮಂತ್ರದಿAದ ಗಾಳಿಯನ್ನೂ, ವರುಣ ಮಂತ್ರದಿAದ ನೀರನ್ನೂ, ಅಗ್ನಿ ಮಂತ್ರದಿAದ ಬೆಂಕಿಯನ್ನೂ ನಿಯಂತ್ರಿಸಲು ಗಣಪತಿಯ ಅನುಗ್ರಹ ಬೇಕು. ಚೌತಿಗೆ ಬರುವ ಮಗನನ್ನು ಬರ ಮಾಡಿಕೊಳ್ಳಲು, ಗೌರಿ ಮಾತೆಯು ಒಂದು ದಿನ ಮೊದಲೇ ಬರುವಳು ಎಂದು ಭಕ್ತ ಜನರ ನಂಬಿಕೆ.

ಗಣೇಶೋತ್ಸವವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಆಚರಿಸಲಾಗುತ್ತದೆ. ಗಣಪತಿಯ ಶಾರೀರಿಕ ಸ್ವರೂಪಗಳಲ್ಲೂ ಕೂಡಾ ಜೀವನ ತತ್ವಗಳಿವೆ. ಸಮಾಜದಲ್ಲಿ ಉತ್ತಮ ನಾಯಕನಾಗಬೇಕಾದರೆ ಇತರರ ಕಷ್ಟ-ಸುಖಗಳನ್ನು ಸಹನೆಯಿಂದ ಕೇಳಬೇಕು. ಇದೇ ಅರ್ಥದಲ್ಲಿ ಗಣಪತಿಗೆ ದೊಡ್ಡ ಕಿವಿಗಳಿವೆ. ಗಣಪತಿಯ ಚಿಕ್ಕ ಕಣ್ಣುಗಳು ಯಾವುದೇ ಕಾರ್ಯವನ್ನು ಗುರಿಯ ಕಡೆಗೆ ತೀಕ್ಷ÷್ಣವಾದ ನೋಟದ ಮೂಲಕ ಸಾಗಿ ಗೆಲ್ಲಬೇಕು ಎಂದು ಸೂಚಿಸುತ್ತದೆ. ಏಕಾಗ್ರತೆಯಿಂದ ಯಾವುದೇ ಕೆಲಸಗಳು ಸುಲಭವಾಗಿ ನೆರವೇರುತ್ತದೆ ಎಂದು ತಿಳಿಯಲಾಗಿದೆ. ಸಾಮಾಜಿಕವಾಗಿ ಜೀವನದಲ್ಲಿ ಅನೇಕ ಆರೋಪಗಳು, ಟೀಕೆಗಳು, ನಿಂದನೆಗಳು ಸಹಜ. ಎಲ್ಲವನ್ನೂ ಸಮಚಿತ್ತದಿಂದ ಅರಗಿಸಿಕೊಳ್ಳಬೇಕಾದರೆ ಸಹನೆ ಪ್ರಾಮುಖ್ಯ. ಟೀಕೆಗಳಿಂದ ವ್ಯಕ್ತಿಯ ಸಾಧನೆಯ ಚಲನೆ ಹಾಗೂ ಸಾಧನೆಯ ತವಕ ಬದಲಾಗಬಾರದು. ಕುಗ್ಗಬಾರದು. ಎಲ್ಲಾ ಕುಹಕಗಳನ್ನೂ ಜೀರ್ಣಿಸಿಕೊಳ್ಳುವ ಹಿನ್ನೆಲೆಯಲ್ಲಿ ದೊಡ್ಡ ಹೊಟ್ಟೆಯನ್ನು ಸಾಂಕೇತಿಸಲಾಗಿದೆ. ಸಣ್ಣ ಇಲಿಯನ್ನು ವಾಹನವಾಗಿ ಆರಿಸಿಕೊಂಡಿರುವುದು ಗಣಪತಿಯ ಸರಳತೆಗೆ ಸಾಕ್ಷಿ. ಇದು, ನಮ್ಮಲ್ಲಿ ಅಧಿಕಾರ, ಸಾಮರ್ಥ್ಯ ಇದ್ದರೂ, ವಿಧೇಯತೆ ಹಾಗೂ ಸರಳ ಜೀವನ ಪದ್ಧತಿ ಜತೆಗಿರಬೇಕು ಎನ್ನುತ್ತದೆ. ಸರಳ ಜೀವನದಲ್ಲಿ ಸುಖವಿದೆ ಎಂದು ಸಾರುತ್ತದೆ.

ಗಣಪತಿಗೆ ಮೋದಕವು ಬಹಳ ಇಷ್ಟ. ಇದಕ್ಕೆ ಕಾರಣವೂ ಇದೆ. ಒಮ್ಮೆ ಗಣಪತಿಗೆ ಹಸಿವಾಯಿತಂತೆ. ತಾಯಿ ಪಾರ್ವತಿಯು ಏನು ಕೊಟ್ಟರೂ ಅದು ಶಮನವಾಗಲಿಲ್ಲ. ಆಗ ಆಕೆ ಗಣಪತಿಗೆ ೨೧ ಮೋದಕಗಳನ್ನು ನೀಡಿದಳಂತೆ. ಆಗ ಗಣಪತಿಯ ಹಸಿವು ತಗ್ಗಿತಂತೆ. ಆದ್ದರಿಂದ ಗಣಪತಿಗೆ ೨೧ ಮೋದಕಗಳ ಸಮರ್ಪಣೆ ವಿಶೇಷ ಸೇವೆ. ಇನ್ನೊಂದು ಚಿಂತನೆಯ ಪ್ರಕಾರ, ಮೋದಕದ ಮೇಲ್ಭಾಗದ ತುದಿಯು ಅಧ್ಯಾತ್ಮಿಕ ಆನಂದ ಹಾಗೂ ಲೌಕಿಕ ಜೀವನವನ್ನೂ ನೆನಪಿಸುತ್ತದೆ. ಮೋದಕದ ಒಳಗಿರುವ ಬೆಲ್ಲ ಮಿಶ್ರಿತ ತೆಂಗಿನಕಾಯಿಯ ಮಿಶ್ರಣವು ಆಸ್ತಿಕರಿಗೆ ದೊರೆಯುವ ದೈವಿಕ ಆನಂದದ ಪ್ರತೀಕವಾಗಿದೆ. ಗಣಪತಿಯು ವಿಜ್ಞಾನ, ಕಲೆ ಹಾಗೂ ಬುದ್ಧಿವಂತಿಕೆಯ ಅಧಿದೇವತೆಯಾಗಿದ್ದು, ಮೋದಕವು ಪರಿಪೂರ್ಣತೆ ಮತ್ತು ಸತ್ಯದ ಸಾಕ್ಷಾತ್ಕಾರವನ್ನು ತೋರುತ್ತದೆ. ಗಣೇಶ ವಿಸರ್ಜನೆಯು ಜನಿಸಿದ ಯಾವ ವ್ಯಕ್ತಿಯೂ ಕೂಡಾ ಶಾಶ್ವತನಲ್ಲ ಎಂಬ ಕಲ್ಪನೆಗೆ ಪುಷ್ಟಿಯಾಗುತ್ತದೆ. ಪ್ರಸ್ತುತ ದಿನದಲ್ಲಿ ಗಣೇಶ ವಿಗ್ರಹದ ವಿಸರ್ಜನೆಯ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ಮಹತ್ವ ನೀಡಬೇಕು. ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ವಿದೇಶಗಳಲ್ಲೂ ಕೂಡಾ ಗಣಪತಿಯ ಆರಾಧನೆ ಇದೆ. ಜಪಾನ್, ಥೈಲ್ಯಾಂಡ್, ಇಂಡೋನೇಷ್ಯಾ, ಅಮೇರಿಕಾ, ಆಸ್ಟೆçÃಲಿಯಾ, ಯುರೋಪ್ ದೇಶಗಳು, ಬ್ರೆಜಿಲ್ ಮೊದಲಾದ ದೇಶಗಳಲ್ಲಿ ಗಣಪತಿಯನ್ನು ವಿವಿಧ ಹೆಸರುಗಳಲ್ಲಿ ಆರಾಧಿಸುತ್ತಾರೆ. ಪ್ರಥಮ ವಂದನೀಯನಾದ ಗಣೇಶನು ನಾಡಿನ ಜನತೆಯ ಸಕಲ ನೋವು, ದುಗುಡ, ದುಮ್ಮಾನಗಳನ್ನು ಪರಿಹರಿಸಿ, ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ಕರುಣಿಸಲಿ.

- ವಿರಾಜ್ ಅಡೂರು, ಕಾಸರಗೋಡು.