ಮಡಿಕೇರಿ, ಸೆ. ೧೩: ಶಿಕ್ಷಕರ ವೃತ್ತಿಯು ಸಮಾಜದಲ್ಲಿ ಪುಣ್ಯದ ಕೆಲಸವಾಗಿದ್ದು, ಈ ವೃತ್ತಿಯಲ್ಲಿ ತೊಡಗಿಸಿಕೊಂಡವರನ್ನು ಸಮಾಜ ಗೌರವಿಸಬೇಕೆಂದು ನಿವೃತ್ತ ಮುಖ್ಯೋಪಾಧ್ಯಾಯ ಮತ್ತು ಸಾಹಿತಿ ಬಾರಿಯಂಡ ಜೋಯಪ್ಪ ಕರೆ ನೀಡಿದರು.
ನಗರದಲ್ಲಿ ರೋಟರಿ ವುಡ್ಸ್ ವತಿಯಿಂದ ಆಯೋಜಿತ ಶಿಕ್ಷಕರ ದಿನಾಚರಣೆ ಅಂಗವಾಗಿನ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಕರಿಗೆ ದಿನನಿತ್ಯ ಸಮಾಜದ ಜನರಿಂದ ಮತ್ತು ವಿದ್ಯಾರ್ಥಿಗಳಿಂದ ದೊರಕುವ ಗೌರವಪೂರ್ವಕ ನಮಸ್ಕಾರ ಸಮಾಜದ ಇತರ ವೃತ್ತಿಯಲ್ಲಿ ಇರುವವರಿಗೆ ದೊರಕುವುದಿಲ್ಲ. ಶಿಕ್ಷಕರನ್ನು ಜನತೆ ಸದಾ ಗೌರವ ಭಾವದಿಂದಲೇ ಕಾಣುತ್ತಾರೆ. ಹೀಗಿರುವಾಗ ಶಿಕ್ಷಕರು ಕೂಡ ತಮ್ಮ ವೃತ್ತಿ ಗೌರವವನ್ನು ಉಳಿಸಿಕೊಳ್ಳುವಂತೆ ಕರೆ ನೀಡಿದರು. ಪಾಠದಂತೆ ಪಠ್ಯೇತರ ಚಟುವಟಿಕೆಗಳಿಗೂ ಶಾಲೆಗಳಲ್ಲಿ ಪ್ರಾಮುಖ್ಯತೆ ನೀಡಿ ಎಂದು ಸಲಹೆ ನೀಡಿದ ಜೋಯಪ್ಪ, ಶಾಲೆಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.
ರೋಟರಿ ವಲಯ ೬ರ ಸಹಾಯಕ ಗವರ್ನರ್ ಎಂ.ಡಿ. ರಂಗಸ್ವಾಮಿ ಮಾತನಾಡಿ, ವ್ಯಕ್ತಿ ನಿರ್ಮಾಣದ ಮೂಲಕವೇ ದೇಶ ಕೂಡ ನಿರ್ಮಾಣವಾಗುತ್ತದೆ. ಹೀಗಿರುವಾಗ ದೇಶಕ್ಕೆ ಸತ್ಪçಜೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಶಿಕ್ಷಕರನ್ನು ನಾವೆಲ್ಲಾ ಸದಾ ಗೌರವಿಸಬೇಕೆಂದು ಕರೆ ನೀಡಿದರು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಸಾಕಷ್ಟು ಕಾರ್ಯಗಳ ಒತ್ತಡದಿಂದಲೇ ಕಾರ್ಯನಿರ್ವಹಿಸುವ ನಡುವೆಯೂ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವ ಪವಿತ್ರತೆ ಉಳಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ರೋಟರಿ ವಲಯ ಸೇನಾನಿ ವಸಂತ್ ಕುಮಾರ್ ಮಾತನಾಡಿ, ಸಮಾಜಕ್ಕೆ ಸದಾ ಪ್ರೇರಣದಾಯಕರಾಗಿರುವ ಶಿಕ್ಷಕರನ್ನು ರೋಟರಿ ಸಂಸ್ಥೆಗಳು ಪ್ರತಿ ವರ್ಷ ಸೆಪ್ಟೆಂಬರ್ ಮಾಹೆಯಲ್ಲಿ ನೇಷನ್ ಬಿಲ್ಡರ್ ಪ್ರಶಸ್ತಿ ಮೂಲಕ ಗೌರವಿಸುತ್ತಿದೆ. ರೋಟರಿ ನೀಡುವ ಈ ಪ್ರಶಸ್ತಿಯು ಗೌರವಯುತವಾಗಿದ್ದು ಪ್ರತಿ ವರ್ಷವೂ ಅತ್ಯುತ್ತಮ ಆಯ್ಕೆ ಆಗುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ವಿದ್ಯಾರ್ಥಿಗಳೇ ಸದಾ ಶಿಕ್ಷಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಈ ಬಾರಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ರೋಟರಿ ವುಡ್ಸ್ ನಿರ್ದೇಶಕರಾದ ಎಸ್.ಡಿ. ಪ್ರಶಾಂತ್ ಅವರನ್ನೂ ಸನ್ಮಾನಿಸಲಾಯಿತು. ಕೊಡಗು ಡೆಕೋರೇಟರ್ಸ್ ಅಸೋಸಿಯೇಷನ್ ಸ್ಫಾಪಕಾಧ್ಯಕ್ಷರಾದ ರೋಟರಿ ವುಡ್ಸ್ ನಿರ್ದೇಶಕ ಅಜ್ಜೇಟಿರ ಲೋಕೇಶ್ ಅವರನ್ನೂ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ರೋಟರಿ ವುಡ್ಸ್ನಿಂದ ಆಯೋಜಿತ ಬೈಕ್ ರೈಡ್‌ನ ಪೋಸ್ಟರ್ ಮತ್ತು ಲೋಗೋವನ್ನೂ ಅನಾವರಣಗೊಳಿಸಲಾಯಿತು. ರೋಟರಿ ವುಡ್ಸ್ನ ವಾರ್ತಾ ಸಂಚಿಕೆಯನ್ನೂ ವಾರ್ತಾ ಸಂಚಿಕೆ ಸಂಪಾದಕ ವಿನು ಈರಪ್ಪ ನೇತೃತ್ವದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ರೋಟರಿ ಜಿಲ್ಲಾ ನಿರ್ದೇಶಕ ಅನಿಲ್ ಎಚ್.ಟಿ, ರೋಟರಿ ಪ್ರಮುಖರಾದ ಬಿ.ಜಿ. ಅನಂತಶಯನ, ಎಸ್.ಎಸ್ ಸಂಪತ್ ಕುಮಾರ್ ಸೇರಿದಂತೆ ರೋಟರಿ ಸದಸ್ಯರು ಪಾಲ್ಗೊಂಡಿದ್ದರು. ರೋಟರಿ ವುಡ್ಸ್ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಸ್ಮಿತಾ ಚಂಗಪ್ಪ ವಂದಿಸಿದರು
ಸನ್ಮಾನಿತರು
ರೋಟರಿ ವುಡ್ಸ್ ವತಿಯಿಂದ ಐವರು ಶಿಕ್ಷಕಿಯರನ್ನು ನೇಷನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಯಿತು. ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಕಡಗದಾಳು ಶಾಲಾ ಶಿಕ್ಷಕಿ ಹೆಚ್.ಎಸ್ ಭಾರತಿ, ಎಮ್ಮೆಮಾಡು ಶಾಲಾ ಶಿಕ್ಷಕಿ ರಮ್ಯಾ, ಕುಶಾಲನಗರ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಭಾರತೀ ಪ್ರಸನ್ನ, ಎ.ಎಲ್.ಜಿ. ಕ್ರೆಸೆಂಟ್ ಶಾಲಾ ಪ್ರಾಂಶುಪಾಲೆ ಜಾಯ್ಸಿ ವಿನಯ್ ಅವರನ್ನು ಸನ್ಮಾನಿಸಲಾಯಿತು.