ವೀರಾಜಪೇಟೆ, ಸೆ. ೧೩: ಗೌರಿ-ಗಣೇಶ ಪ್ರತಿಷ್ಠಾಪನೆಗೆ ಸರಿಯಾಗಿ ಒಂದು ದಿನ ಮುಂಚಿತವಾಗಿ (ಗೌರಿ ವ್ರತದ ದಿನ) ಗೌರಮ್ಮನ ಭವ್ಯ ಪಲ್ಲಕ್ಕಿ ಉತ್ಸವವನ್ನು ವೀರಾಜಪೇಟೆಯ ಜೈನರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ (ಬಸವನಗುಡಿ) ದೇವಸ್ಥಾನದಲ್ಲಿ ನಡೆಸುತ್ತಾ ಬರಲಾಗಿದ್ದು, ಇಂತಹ ವಿಶಿಷ್ಟ ಹಾಗೂ ತಲೆತಲಾಂತರದ ಶ್ರದ್ಧಾ ಭಕ್ತಿಯ ಸಂಪ್ರದಾಯಕ್ಕೆ ಈ ಬಾರಿಯೂ ಇಡೀ ಪಟ್ಟಣ ಸಾಕ್ಷಿಯಾಯಿತು.
ವರಮಹಾಲಕ್ಷಿö್ಮ ಹಬ್ಬದ ದಿನದಿಂದ ಆರಂಭಗೊAಡು ಕಳೆದ ನಾಲ್ಕು ವಾರಗಳಿಂದ ಸುಮಂಗಲಿಯರು, ಯುವತಿಯರು ಹಾಗೂ ಹೆಣ್ಣುಮಕ್ಕಳು ಅತ್ಯಂತ ಶ್ರದ್ಧೆಯಿಂದ ಆಚರಿಸಿಕೊಂಡು ಬಂದ ಮಂಗಳ ಗೌರಿ ವ್ರತಾಚರಣೆಯು, ಭಾನುವಾರ ಗೌರಿ ದೇವಿಯ ಭವ್ಯ ಆಗಮನದೊಂದಿಗೆ ಸಂಪನ್ನಗೊAಡಿತು.
ಉತ್ಸವಕ್ಕೆ ಚಾಲನೆ ನೀಡುವ ಮುನ್ನ ಕಾಫಿ ಪ್ಲಾಂಟರ್ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಅವರ ಕೆರೆಯಲ್ಲಿ ದೇವಾಲಯದ ಅರ್ಚಕರಿಂದ ಗಂಗೆ ಪೂಜೆ ನೆರವೇರಿತು. ಶ್ರೀ ದೇವಿಗೆ ಪ್ರಿಯವಾದ ಕುಂಕುಮ, ಅರಿಶಿಣ, ಗಂಧ, ವಿವಿಧ ರಂಗಿನ ಬಳೆಗಳು, ಹೂವು, ಮಡಿವಸ್ತç ಹಾಗೂ ಕರಿಮಣಿ, ಬಿಚ್ಚೋಲೆ, ಕಾಡಿಗೆ, ಮೊರ ಸೇರಿದಂತೆ ಮಂಗಳ ಪೂಜಾ ದ್ರವ್ಯಗಳನ್ನು ಬಾಗಿನದಲ್ಲಿರಿಸಿ ಈಡುಗಾಯಿ ಒಡೆದು ಕೆರೆಗೆ ಅರ್ಪಿಸಲಾಯಿತು. ವಿಧಿಯ ನಂತರ, ಪೂಜಾ ಸಾಮಗ್ರಿಗಳನ್ನು ಅರ್ಪಿಸಿದ ಸ್ಥಳದಲ್ಲಿ ನೀರು ಸಂಪೂರ್ಣವಾಗಿ ತಿಳಿಯಾಗಿ, ಪರಿಶುದ್ಧಗೊಂಡು ಕಾಣುವುದು ಇಲ್ಲಿನ ಐತಿಹಾಸಿಕ ವಿಸ್ಮಯವಾಗಿದೆ.
ಗೌರಿ ವ್ರತದಂದು ಬೆಳಗ್ಗಿನ ಪವಿತ್ರ ಮುಹೂರ್ತದಲ್ಲಿ ದೇವಸ್ಥಾನದ ಅರ್ಚಕರು ದೇವರಿಗೆ ಜಳಕ ಮಾಡಿಸಿ, ಆ ತಿಳಿನೀರಿನ ಕೆರೆಗೆ ಇಳಿದು ಮುಳುಗೆದ್ದು, ತಮ್ಮ ಕೈಗೆ ಸಿಗುವ ವಸ್ತುವನ್ನು ಮೇಲೆ ತರುವ ಆಚರಣೆ ನಡೆಯಿತು. ಹೀಗೆ ಕೆರೆಯಿಂದ ಹೊರತರುವ ವಸ್ತುವು ಆ ವರ್ಷದ ನಾಡಿನ ಕ್ಷೇಮ ಮತ್ತು ಶುಭ-ಅಶುಭಗಳ ಸೂಚಕ ಎಂಬ ದೃಢ ನಂಬಿಕೆಯಿದೆ.
ಈ ಬಾರಿ ಅರ್ಚಕರು ಕೆರೆಯಲ್ಲಿ ಮುಳುಗಿ ಮೇಲೆದ್ದಾಗ ಅವರ ಕೈಗೆ ಸೌಭಾಗ್ಯ ಸಂಕೇತವಾದ “ಕಾಡಿಗೆ” ಲಭಿಸಿದೆ. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಗೌರಮ್ಮ ದೇವಿ ಉತ್ತಮ ಮುಹೂರ್ತದಲ್ಲಿ ಒಲಿದು, ಶುಭ ಲಕ್ಷಣದೊಂದಿಗೆ ಸಕಲ ಭಕ್ತರನ್ನು ಹರಸಿದ್ದಾಳೆ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು.
ಕೆರೆಯಿಂದ ಸಿಕ್ಕ ಶುಭ ಸೂಚಕ ವಸ್ತು ಹಾಗೂ ಗೌರಿ ದೇವಿಯನ್ನು ಅತ್ಯಂತ ಶ್ರದ್ಧೆಯಿಂದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಪ್ರಥಮ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ ೯ ಗಂಟೆಯಿAದ ರಾತ್ರಿ ೯ ಗಂಟೆಯವರೆಗೆ ಸತತ ೧೨ ಗಂಟೆಗಳ ಕಾಲ ನಗರದಾದ್ಯಂತ ವೈಭವದ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಅವರ ಕೆರೆಯಿಂದ ಆರಂಭವಾದ ಈ ಪಲ್ಲಕ್ಕಿ ಉತ್ಸವ ತೆಲುಗರ ಬೀದಿ, ಮೊಗರಗಲ್ಲಿ, ಗಾಂಧಿನಗರ, ಚಿಕ್ಕಪೇಟೆ, ಶಿವಕೇರಿ ಹಾಗೂ ಅಪ್ಪಯ್ಯ ಸ್ವಾಮಿ ರಸ್ತೆ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜೈನರ ಬೀದಿಯ ಬಸವನಗುಡಿ ದೇವಸ್ಥಾನವನ್ನು ತಲುಪಿತು. ಪಲ್ಲಕ್ಕಿ ಉತ್ಸವಕ್ಕೆ ಶುಭಪ್ರದವಾದ ಮಂಗಳಕರ ಪಂಚವಾದ್ಯಗಳು ಮತ್ತು ವಾದ್ಯಗೋಷ್ಠಿಗಳು ಮೆರುಗು ನೀಡಿದವು.
ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ಪಟ್ಟಣದ ಪ್ರತಿಯೊಂದು ಮನೆಯಿಂದಲೂ ಸುಮಂಗಲಿಯರು, ಯುವತಿಯರು ಹಾಗೂ ಸಾರ್ವಜನಿಕರು ರಂಗೋಲಿ ಬಿಡಿಸಿ, ದೀಪ ಬೆಳಗಿ, ಗೌರಮ್ಮನ ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಾದಸ್ವರ, ಚಂಡೆ ಮದ್ದಳೆ ಹಾಗೂ ಧಾರ್ಮಿಕ ಜಯಘೋಷಗಳೊಂದಿಗೆ ಇಡೀ ವೀರಾಜಪೇಟೆ ಪಟ್ಟಣವೇ ಭಕ್ತಿ ಸಾಗರದಲ್ಲಿ ಮುಳುಗೆದ್ದಿತು.
ಮೆರವಣಿಗೆ ದೇವಸ್ಥಾನ ತಲುಪಿದ ಬಳಿಕ, ವಿದ್ಯುತ್ ಅಲಂಕೃತ ಪೀಠದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರೀ ಗೌರಮ್ಮ ತಾಯಿಗೆ ಭಕ್ತರ ಸಮ್ಮುಖದಲ್ಲಿ ಮಹಾಪೂಜೆ ನೆರವೇರಿಸಲಾಯಿತು. ನಂತರ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಸೋಮವಾರ ಬೆಳಿಗ್ಗೆ ಗೌರಿ ಮೂರ್ತಿಯೊಂದಿಗೆ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
- ಕೆ. ಈಶಾನ್ವಿ