ಸಿದ್ದಾಪುರ, ಸೆ. ೧೩: ಅಭಿವೃದ್ಧಿ ಕಾರ್ಯಗಳಿಗೆ ರಾಜಕೀಯ ಮಾಡುವುದು ಹಾಗೂ ಅಡ್ಡಿಪಡಿಸುವುದು ಸರಿಯಲ್ಲ ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ

ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಹೇಳಿದರು.

ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ ಗ್ರಾಮದ ವ್ಯಾಪ್ತಿಯಲ್ಲಿ ಮೂರು ಕುಡಿಯುವ ನೀರಿನ ಕೊಳವೆ ಬಾವಿಯ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಮಾನವೀಯತೆ ತೋರಬೇಕು ಆದರೆ ಕೆಲವರು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದು ಯಾರು ಕೂಡ ರಾಜಕೀಯ ಮಾಡಬಾರದೆಂದು ಹೇಳಿದ ಅವರು ರಾಜಕೀಯ ಮಾಡಿದಲ್ಲಿ ಅಥವಾ ಅಡ್ಡಿಪಡಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮೈಸೂರಿನ ಕೆ .ಆರ್ .ಎಸ್ ಜಲಾಶಯದಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು ಈ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಜವಾಬ್ದಾರಿಯಿಂದ ಬಳಸಬೇಕು ಅನಗತ್ಯವಾಗಿ ವ್ಯರ್ಥ ಮಾಡಬಾರದು. ಮಳೆಯ ಅಭಾವದಿಂದ ಬರಗಾಲದ ಪರಿಸ್ಥಿತಿಯಿಂದಾಗಿ ಕೃಷಿ ಇಲಾಖೆಗಳ ಮೂಲಕ ರೈತರಿಗೆ ನೀಡುತ್ತಿರುವ ಬಿತ್ತನೆ ಬೀಜ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪೊನ್ನಣ್ಣ ಹೇಳಿದರು. ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈಗಾಗಲೇ ಅಭಿವೃದ್ಧಿ ಕಾರ್ಯಗಳಿಗೆ ರೂ೩ ಕೋಟಿ ೭೦ಲಕ್ಷ ಅನುದಾನವನ್ನು ನೀಡಿ ರಸ್ತೆ ಅಭಿವೃದ್ಧಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು ಇದೀಗ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ, ಇಂಜಿಲಗೆರೆ, ಕಲ್ಲು ಕೋರೆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಇದನ್ನು ನೀಗಿಸಲು ರೂ.೪.೫೦ ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ಸದ್ಯದಲ್ಲೇ ಸಣ್ಣ ನೀರಾವರಿ ಇಲಾಖೆಯ ಮೂಲಕ ರೂ. ೫೦ ಲಕ್ಷ ವೆಚ್ಚದಲ್ಲಿ ಈ ಭಾಗಕ್ಕೆ ತಡೆಗೋಡೆ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದೆಂದು ಮಾಹಿತಿ ನೀಡಿದರು. ಸರ್ಕಾರವು ಕುಡಿಯುವ ನೀರಿನ ಅಭಿವೃದ್ಧಿ, ರಸ್ತೆ ನಿರ್ಮಾಣ, ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಹಂತ ಹಂತವಾಗಿ ಅನುದಾನ ನೀಡುತ್ತಾ ಬರುತ್ತಿದ್ದು ಜನರ ಸಮಸ್ಯೆಗೆ ಸ್ಪಂದಿಸುವ ಮೂಲಕ ಶೋಷಿತ ವರ್ಗದ ಅಭಿವೃದ್ಧಿಗೆ ಸ್ಪಂದನ ನೀಡಲಾಗುವುದೆಂದು ಭರವಸೆ ನೀಡಿದರು. ಕುಡಿಯುವ ನೀರಿನ ಕೊಳವೆಬಾವಿ ತೆಗೆಯಲು ಪುಲಿಯೇರಿ ಮತ್ತು ಇಂಜಿಲಗೆರೆ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ನಿವಾಸಿಗಳಾದ ಟಿ.ಕೆ. ರಾಧಾಕೃಷ್ಣ ಮತ್ತು ಜೋಸೆಫ್ ಅವರು ಜಾಗವನ್ನು ಉದಾರವಾಗಿ ನೀಡಿದ್ದು ಇವರ ಕಾರ್ಯ ಶ್ಲಾಘನೀಯ ಎಂದರು.

ಇದೇ ಸಂದರ್ಭ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಮರು ನೇಮಕವಾದ ತೀತಿರ ಧರ್ಮಜ ಉತ್ತಪ್ಪ , ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಜು ಸುಬ್ಬಯ್ಯ , ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜಿಮ್ಮಿ ಸೀಕ್ವೆರ, ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ , ಮತ್ತು ಕೊಳವೆ ಬಾವಿಗೆ ಜಾಗ ನೀಡಿದ ಸ್ಥಳ ದಾನಿಗಳಾದ ರಾಧಾಕೃಷ್ಣನ್‌ಮತ್ತು ಜೋಸೆಫ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ , ವೀರಾಜಪೇಟೆ ಪುರಸಭೆ ಮಾಜಿ ಅಧ್ಯಕ್ಷ ದೇಚಮ್ಮ ಕಾಳಪ್ಪ, ಮಾಜಿ ಸದಸ್ಯ ಶಬರೀಶ್ ಶೆಟ್ಟಿ ಹಾಜರಿದ್ದರು. ಅಮ್ಮತ್ತಿ ವಲಯ ಕಾಂಗ್ರೆಸ್ ಅಧ್ಯಕ್ಷ ಕೆ. ಎನ್ ರಾಜನ್, ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಪ್ರತೀಶ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ನೌಷಾದ್, ಉಮ್ಮರ್, ಅನಿಲ್ ಶೀನಪ್ಪ, ಚೇಕು, ಪಕ್ಷದ ಪದಾಧಿಕಾರಿಗಳಾದ ಡೇವಿಡ್, ವೇಲಿಯಾಸನ್, ಕಾವೇರಪ್ಪ, ಕರುಣಾಕರನ್, ನಿಶ್ಚಿತ ಇನ್ನಿತರರು ಹಾಜರಿದ್ದರು. ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶಶಿ ಕಾರ್ಯಕ್ರಮ ನಿರೂಪಿಸಿದರು ಜಿಮ್ಮಿ ಸಿಕ್ವೇರಾ ಸ್ವಾಗತಿಸಿ, ಪ್ರೇಮ ನವೀನ್ ವಂದಿಸಿದರು.

-ವಾಸು