.ಮಡಿಕೇರಿ, ಸೆ.೧೩ : ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಶೋಭಾಯಾತ್ರೆಯನ್ನು ಅ.೨೦ರಂದು ನಡೆಸಲು ದಸರಾ ದಶಮಂಟಪ ಸಮಿತಿ ಹಾಗೂ ನಾಲ್ಕು ಕರಗ ಸಮಿತಿಗಳು ನಿರ್ಧರಿಸಿವೆ.

ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಆವರಣದಲ್ಲಿ ನಡೆದ ಸಮಿತಿಗಳ ಸಭೆಯಲ್ಲಿ ಶೋಭಾಯಾತ್ರೆಯ ದಿನಾಂಕ ಕುರಿತು ಉಂಟಾಗಿದ್ದ ಗೊಂದಲಕ್ಕೆ ತೆರೆ ಎಳೆಯಲಾಯಿತು.

ಅ.೨೦ರಂದು ದಶಮಂಟಪಗಳ ಶೋಭಾಯಾತ್ರೆ ನಡೆಸಿ, ಅ.೨೧ರಂದು ಬೆಳಿಗ್ಗೆ ಬನ್ನಿ ಕಡಿಯುವ ಮೂಲಕ ದಸರಾ ಹಬ್ಬಕ್ಕೆ ಮಂಗಳ ಹಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಪೂಜಾರಿಗಳಾದ ಬಾಲಕೃಷ್ಣ ಪೂಜಾರಿ, ಪಿ.ಪಿ.ಚಾಮಿ, ಧರ್ಮು ಪೂಜಾರಿ, ಶ್ರೀಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಪಿ.ಸಿ.ಮಧುರಯ್ಯ, ದಂಡಿನ ಮಾರಿಯಮ್ಮ ದೇವಾಲಯದ ಉಮೇಶ್ ಪೂಜಾರಿ, ಶ್ರೀಕೋಟೆ ಮಾರಿಯಮ್ಮ ದೇವಾಲಯದ ಅನೀಶ್ ಕುಮಾರ್, ಉಮೇಶ್ ಸುಬ್ರಮಣಿ, ನಗರಸಭಾ ಅಧ್ಯಕ್ಷರು ಹಾಗೂ ಮಡಿಕೇರಿ ದಸರಾ ಸಮಿತಿಯ ಅಧ್ಯಕ್ಷರಾದ ಪಿ.ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಬಿ.ಕೆ., ದಶಮಂಟಪ ಸಮಿತಿಯ ಅಧ್ಯಕ್ಷ ಪಾಂಡಿರ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ಆಪಾಡಂಡ ವಿನೋದ್ ಕಾರ್ಯಪ್ಪ, ಗೌರವ ಅಧ್ಯಕ್ಷ ಗಜೇಂದ್ರ, ಶ್ರೀಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಸದಸ್ಯರಾದ ದಾಸ್, ಗಣೇಶ, ದಂಡಿನ ಮಾರಿಯಮ್ಮ ದೇವಾಲಯದ ಹರೀಶ್, ಟಿ.ಎಸ್.ಪ್ರಕಾಶ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಮಡಿಕೇರಿಯಲ್ಲಿ ತಾ. ೨೦ ರಂದು ಆಯುಧ ಪೂಜೆ ಹಾಗೂ ದಸರಾ ನಡೆಯಲಿದ್ದು, ಮೈಸೂರಿನಲ್ಲಿ ತಾ. ೨೧ ರಂದು ದಸರಾ ಆಚರಣೆ ನಡೆಯಲಿದೆ.