ಸುಂಟಿಕೊಪ್ಪ, ಸೆ. ೧೧: ಮಿಠಾಯಿ ಖರೀದಿಸಿ ರಸ್ತೆ ದಾಟಲು ಮುಂದಾದ ಆರು ವರ್ಷದ ಬಾಲಕಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.
ಚೆಸ್ಕಾಂ ಕಚೇರಿ ಸಮೀಪದ ಹೊಸ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಮೂಲತಃ ಅಸ್ಸಾಂ ರಾಜ್ಯದ, ಸುಂಟಿಕೊಪ್ಪದಲ್ಲಿ ನೆಲೆಸಿದ್ದ ಸಿರಾಜು ರೆಹಮಾನ್ ಹಾಗೂ ಜಹನಾರ್ ದಂಪತಿ ಪುತ್ರಿ ಮುಸುಮತ್ ಪಿಂಕಿಕತ್ತುಲ್ (೬) ಮೃತ ಬಾಲಕಿ.
ಶುಕ್ರವಾರ ಬೆಳಿಗ್ಗೆ ಸುಮಾರು ೧೧.೪೫ರ ವೇಳೆಗೆ ಹೆದ್ದಾರಿ ಬದಿಯ ಅಂಗಡಿಯೊAದಕ್ಕೆ ತೆರಳಿ ಮಿಠಾಯಿ ಖರೀದಿಸಿದ್ದಾಳೆ. ನಂತರ ರಸ್ತೆ ದಾಟಲು ಒಂದೆರಡು ಹೆಜ್ಜೆ ಮುಂದಿಟ್ಟ ಸಂದರ್ಭದಲ್ಲಿ ಮೈಸೂರು-ಕುಕ್ಕೆ ಸುಬ್ರಹ್ಮಣ್ಯ ಮಾರ್ಗವಾಗಿ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ (ಕೆಎ-೦೯ ಎಫ್-೫೪೧೯) ಬಾಲಕಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಸ್ಥಳೀಯರು ಹಾಗೂ ಪೊಲೀಸರು ಕೂಡಲೇ ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಬಾಲಕಿ ಮೃತಪಟ್ಟಿದ್ದಾಳೆ.
ಈ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.