ಮಡಿಕೇರಿ, ಸೆ. ೧೧: ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರು ರಚಿಸಿರುವ ಕೂಟದ ೧೨೭ನೇ ಪುಸ್ತಕ ‘ಆಟ್ ಪಾಟ್ ಪಡಿಪು’ವಿನ (ಸಂಗ್ರಹಾತಿ) ಏಳನೇ ಆವೃತ್ತಿ ಬಿಡುಗಡೆಗೊಂಡಿತು.
ನಗರದ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ನಡೆದ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾಹಿತಿ ಬೊಜ್ಜಂಗಡ ಡಾ. ಅವನಿಜ ಸೆ
Ãಮಯ್ಯ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಕೊಡವ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪರಂಪರೆ ಇಡೀ ವಿಶ್ವದಲ್ಲೇ ವಿಶಿಷ್ಟ ಸ್ಥಾನ ಹೊಂದಿದೆ. ಈ ಅಪರೂಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮಕ್ಕಳಲ್ಲಿ ಅದರ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ‘ಆಟ್ ಪಾಟ್ ಪಡಿಪು’ ಮಕ್ಕಳಿಗೆ ಕೊಡವ ಸಂಸ್ಕೃತಿಯನ್ನು ಪರಿಚಯಿಸುವ ಅತ್ಯಂತ ಉಪಯುಕ್ತ ಪುಸ್ತಕವಾಗಿದ್ದು, ಪ್ರತಿಯೊಬ್ಬ ಮಗುವಿಗೂ ಈ ಪುಸ್ತಕವನ್ನು ತಲುಪಿಸುವ ಪ್ರಯತ್ನವಾಗಬೇಕು ಎಂದು ಹೇಳಿದರು.
ಕೊಡವ ಮಕ್ಕಡ ಕೂಟವು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಾ ಬಂದಿದ್ದು, ಅದರ ಸಾಹಿತ್ಯ ಕೃಷಿ ನಿರಂತರವಾಗಿ ಮುಂದುವರಿಯಲಿ ಎಂದು ಅವರು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಕೂಟವು ಕಳೆದ ೧೩ ವರ್ಷಗಳಿಂದ ಸಾಮಾಜಿಕ ಕಳಕಳಿಯೊಂದಿಗೆ ಸಾಹಿತ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿದೆ. ದಾನಿಗಳಾದ ಆಪಾಡಂಡ ಯಮುನಾ ತಿಮ್ಮಯ್ಯ ಅವರು ತಮ್ಮ ಪತಿ ದಿವಂಗತ ಆಪಾಡಂಡ ಎಂ. ತಿಮ್ಮಯ್ಯ ಹಾಗೂ ಪುತ್ರ ಹ್ಯಾರಿ ತಮ್ಮಯ್ಯ ಅವರ ಜ್ಞಾಪಕಾರ್ಥ ಹಾಗೂ ಮಂಗಳೂರು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಚೆಕ್ಕೇರ ಪ್ರಮೋದ್ ಅವರು ಪುಸ್ತಕ ಪ್ರಕಟಣೆಗೆ ಆರ್ಥಿಕ ಸಹಕಾರ ನೀಡಿದ್ದಾರೆ. ಮಕ್ಕಳಿಗೆ ಕೊಡವ ಸಂಸ್ಕೃತಿಯನ್ನು ಮನದಟ್ಟು ಮಾಡಿಕೊಡುವ ಉದ್ದೇಶದಿಂದ ಪುಸ್ತಕವನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ದೇಶಕಟ್ಟ್ ಪಾಟ್, ಪುತ್ತರಿ ಕೋಲ್, ತಾಲಿ ಪಾಟ್, ಉಮ್ಮತ್ತಾಟ್ ಪಾಟ್, ಸಮ್ಮಂಧ ಅಡ್‌ಕುವ/ಪರಜೆ, ಪುತ್ತರಿ ಪಾಟ್, ಕೊಡವ ತಿಂಗಳು, ವಾರ ಹಾಗೂ ಕೊಡವ ಭಾಷೆಯಲ್ಲಿ ದಿಕ್ಕುಗಳ ಹೆಸರುಗಳು ಸೇರಿದಂತೆ ವಿವಿಧ ವಿಷಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ನಾಪೋಕ್ಲು ಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಸಮಾಜ ಸೇವಕ ಅಜ್ಜಮಾಡ ಎನ್. ಬೆಳ್ಯಪ್ಪ, ಫೀ.ಮಾ. ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ., ಕೊಡಗು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ಪ್ರೊ.ಮೇಚಿರ ರವಿಶಂಕರ್ ನಾಣಯ್ಯ, ಸಮಾಜ ಸೇವಕ ಅಜ್ಜಮಾಡ ಬೆಳ್ಯಪ್ಪ, ಮಿಲಿಟರಿ ಕ್ಯಾಂಟೀನ್ ವ್ಯವಸ್ಥಾಪಕ ಲೆಫ್ಟಿನೆಂಟ್ ಕರ್ನಲ್ ಮುಲ್ಲೇರ ಕಾವೇರಪ್ಪ, ಸ್ಚೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು, ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಮತ್ತಿತರರು ಉಪಸ್ಥಿತರಿದ್ದರು.