ಮಡಿಕೇರಿ: ಕೊಡಗು ಗೌಡ ಸಮಾಜಗಳ ಒಕ್ಕೂಟದ ವಿಶೇಷ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗಿಯಾಗಿದ್ದ ನಾವು ಅಲ್ಲಿ ಕೈಗೊಂಡ ನಿರ್ಧಾರಗಳನ್ನು ಪೂರ್ತಿಯಾಗಿ ಬೆಂಬಲಿಸುತ್ತೇವೆ. ಒಂದು ಜನಾಂಗದ ಭಾಷೆಯ ಎಂಟನೇ ಪರಿಚ್ಛೇದಕಾಗಲಿ, ಕೋವಿಯ ತಕರಾರಗಲಿ ಸಂಸ್ಕೃತಿಯ ವಿರುದ್ಧವಾಗಲಿ ಅಲ್ಲಿ ಯಾವುದೇ ನಿರ್ಣಯಗಳು ಅಥವಾ ಮಾತುಗಳು ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ಕುಶಾಲನಗರ ಗೌಡ ಸಮಾಜ ಹೇಳಿದೆ.

ಕರ್ನಾಟಕದ ಸಮಗ್ರ ರಾಜ್ಯೋತ್ಸವ ವಿರೋಧಿಸುವ, ಗಣರಾಜ್ಯೋತ್ಸವವನ್ನು ಅಣಕಿಸುವ, ರಾಷ್ಟ್ರದ ಹಿತ ಮರೆತು ಲೀವಾಕ್ ಎಂಬ ರಾಷ್ಟ್ರ ವಿರೋಧಿ ಸಂಘಟನೆಗಳ ಹುಟ್ಟು ಹಾಕಿದ ಸಿ ಎನ್ ಸಿ ಸಂಘಟನೆಯ ಜೊತೆ ಸಮಾಜಗಳು ಮತ್ತು ಸಂಘಟನೆಗಳು ಬೆಂಬಲ ವ್ಯಕ್ತಪಡಿಸುವುದು ಆಘಾತಕಾರಿ ವಿಷಯ ಎಂದಿರುವ ಸಮಾಜ ಸಿಎನ್‌ಸಿ ಕೇಳುತ್ತಿರುವ ಕೊಡವ ಸ್ವಾಯತ್ತ ಮಂಡಳಿ ರೂಪಿಸಿ ಉಳಿಕೆ ಶೇ ೯೨ ಜನ ಈ ಮಂಡಳಿಯ ಮಾತು ಕೇಳಬೇಕು ಎನ್ನುವ ಸ್ಥಿತಿ ಉಂಟಾಗಲಿದೆ ಎಂದಿದೆ.

ಹಾಗೆಯೇ ಕೇವಲ ಶೇ ಎಂಟು ಜನಸಂಖ್ಯೆ ಹೊಂದಿರುವ ಜನಾಂಗಕ್ಕೆ ಅತಿ ಚಿಕ್ಕ ಜಿಲ್ಲೆ ಕೊಡಗಿನಲ್ಲಿ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ಕೊಟ್ಟರೆ ಜನಸಂಖ್ಯೆ ಆಧಾರದಲ್ಲಿ ನಿರ್ಧಾರವಾಗಬೇಕಾದ ಶಾಸಕ ಮತ್ತು ಸಂಸದರ ಪಾಲು ಉಳಿದ ೯೨% ಕೊಡಗಿನ ಜನತೆಗೆ ಎಲ್ಲಿ ಸಿಗಲಿದೆ ಎಂದು ಪ್ರಶ್ನಿಸಿದೆ.

ಎಸ್‌ಟಿ ಸೌಲಭ್ಯ ಒಂದು ಆರ್ಥಿಕ ಪ್ರಬಲವಾಗಿರುವ, ಅಧಿಕಾರ ಹೊಂದಿರುವ ಒಂದು ಜನಾಂಗಕ್ಕೆ ಸಿಕ್ಕಿದರೆ ಏನಾಗಬಹುದು ಎಂಬುದು ಕೊಡಗಿನ ಜನತೆ ಊಹೆ ಮಾಡಬೇಕಿದೆ ಎಂದು ಗೌಡ ಸಮಾಜ ಹೇಳಿಕೆ ನೀಡಿದೆ. ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿಲುವಿಗೆ ಕುಶಾಲನಗರ ಗೌಡ ಸಮಾಜವು ನಿರಂತರವಾಗಿ ಬೆಂಬಲಕ್ಕೆ ನಿಲ್ಲಲಿದೆ ಎಂದಿದೆ.