ಶನಿವಾರಸಂತೆ, ಸೆ. ೯: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯಲ್ಲಿ ನಿಸರ್ಗಸಿರಿ ಇಕೋ ಕ್ಲಬ್ ವತಿಯಿಂದ ಪರಿಸರ ಸ್ನೇಹಿ ಬಣ್ಣರಹಿತ ಗಣೇಶ ಮೂರ್ತಿ ತಯಾರಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಇಕೋ ಕ್ಲಬ್ ಸಂಚಾಲಕಿ ಹಾಗೂ ಶಿಕ್ಷಕಿ ಸವಿತಾ ಮಾತನಾಡಿ, ರಾಸಾಯನಿಕ ಬಣ್ಣಗಳು ಪರಿಸರದ ಮೇಲೆ ಅತೀವ ಪರಿಣಾಮ ಬೀರುತ್ತವೆ. ಹಾಗಾಗಿ, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಸ್ವತಃ ಗಣೇಶ ಮೂರ್ತಿಗಳನ್ನು ತಯಾರಿಸಿ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳೋಣ ಎಂದು ಕರೆ ನೀಡಿದರು.
ಮುಖ್ಯ ಶಿಕ್ಷಕಿ ಕೆ.ಎಸ್.ಸುಚಿತ್ರಾ, ಶಿಕ್ಷಕರಾದ ಕೆ.ಪಿ.ಜಯಕುಮಾರ್, ಸಂದೇಶ್, ಅಂಜನಪ್ಪ, ಶ್ರೀಕಲಾ, ತೀರ್ಥಾನಂದ್, ಭವ್ಯಾ, ಪ್ರತಿಭಾ ಹಾಜರಿದ್ದರು.