ವೀರಾಜಪೇಟೆ, ಸೆ. ೯: ವೀರಾಜಪೇಟೆಯ ರಾಮನಗರದಲ್ಲಿ ನಿರ್ಮಾಣಗೊಂಡಿರುವ ನೂತನ ಸಮುದಾಯ ಭವನದ ಉದ್ಘಾಟನೆ ಯನ್ನು ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ನೆರವೇರಿಸಿದರು.
ಈ ಹಿಂದೆ ರಾಮನಗರ ನಿವಾಸಿಗಳು ಶಾಸಕರನ್ನು ಭೇಟಿಯಾದ ಸಂದರ್ಭ ತಮ್ಮ ಭಾಗದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮವನ್ನು ಮಾಡಲು ಅಗತ್ಯವಿರುವ ಸಮುದಾಯ ಭವನ ಅಥವಾ ಛತ್ರಗಳು ಇಲ್ಲದಿರುವುದನ್ನು ಗಮನಕ್ಕೆ ತಂದಾಗ, ಶಾಸಕರ ವಿಶೇಷ ಕಾಳಜಿಯಿಂದ ಒದಗಿ ಬಂದ ಸರಕಾರದ ಅನುದಾನದ ರೂ. ೩೫ ಲಕ್ಷಗಳಲ್ಲಿ ಈ ಸಮುದಾಯ ಭವನವನ್ನು ನಿರ್ಮಿಸಲಾಯಿತು.
ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಶುಭ ಕೋರಿದ ಶಾಸಕರು, ರಾಜ್ಯ ಸರಕಾರವು ನಾಡಿನ ಅನೇಕ ಸಮುದಾಯಗಳ ಹಿತಚಿಂತನೆ ಯಿಂದ ಅವರ ಅನುಕೂಲಕ್ಕಾಗಿ ಸಮುದಾಯ ಭವನಗಳನ್ನು ನಿರ್ಮಿಸಿ ಕೊಡುತ್ತಿದೆ. ಇದನ್ನು ಜೋಪಾನವಾಗಿ ಎಲ್ಲರೂ ಸದ್ಬಳಕೆ ಮಾಡಿಕೊಳ್ಳುತ್ತಾ ತಮ್ಮ ಮುಂದಿನ ಪೀಳಿಗೆಗೂ ಇದರ ಅನುಕೂಲ ಒದಗುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬನ ಜವಾಬ್ದಾರಿ ಎಂದು ಹೇಳಿದರು.
ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವಲಯ ಅಧ್ಯಕ್ಷ ವರ್ಗಿಸ್, ತಾಲೂಕು ಕೆಡಿಪಿ ಸದಸ್ಯ ಮಾಳೇಟಿರ ಪ್ರಶಾಂತ್, ಶಶಿ, ವೀರಾಜಪೇಟೆ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಶಬರೀಶ್ ಶೆಟ್ಟಿ, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಮತೀನ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಶೌಕತ್ ಆಲಿ, ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಕ್ಷಿತ್ ಚಂಗಪ್ಪ, ವಿನಾಯಕ ಯುವಕÀ ಸಂಘದ ಅಧ್ಯಕ್ಷ ವಸಂತ ಕಟ್ಟಿ, ಬೇಟೋಳಿ ಗ್ರಾ.ಪಂ. ಪಿಡಿಓ ಮಂಜುಳಾ, ಕೆದಮುಳ್ಳೂರು ಗ್ರಾ.ಪಂ. ಪಿಡಿಓ ಮಣಿ, ಲತಾ, ರಜಾಕ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.