ಕೂಡಿಗೆ, ಸೆ. ೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಕಸ ಸಂಗ್ರಹ ಘಟಕ ಮತ್ತು ಜೀರ್ಣೋದ್ಧಾರಗೊಳಿಸಿದ ತೋಳನಕೆರೆ ಉದ್ಘಾಟಿಸಲಾಯಿತು.
ಚಿಕ್ಕತ್ತೂರು ಶ್ರೀ ವಿನಾಯಕ ಯುವಕ ಸಂಘದ ಸಹಯೋಗದಲ್ಲಿ ಬೆಂಗಳೂರಿನ ಗೋಕುಲ್ ದಾಸ್ ಎಕ್ಸ್ಪೋರ್ಟ್ ಫೌಂಡೇಶನ್ನ ಸಾಮಾಜಿಕ ಜವಬ್ದಾರಿ ಅನುದಾನದಲ್ಲಿ ಐಸೆಕ್ ಅಧ್ಯಯನ ಸಂಸ್ಥೆ ಮೂಲಕ ಅನುಷ್ಠಾನಕ್ಕೆ ತಂದ ಅಭಿವೃದ್ಧಿ ಕಾಮಗಾರಿಗಳನ್ನು ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ ಶಶಿಧರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಬೆಂಗಳೂರಿಗೂ ಕೂಡುಮಂಗಳೂರಿನ ಚಿಕ್ಕತ್ತೂರಿಗೆ ಏನೂ ಸಂಬAಧವಿಲ್ಲ. ಆದರೂ ಅಲ್ಲಿನ ಉದ್ಯಮಿಗಳು ಈ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಪರಿಸರಕ್ಕೆ ಪೂರಕವಾದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕಾದ ಅನಿವಾರ್ಯತೆ ಇದೆ. ರೂ.೨ ಲಕ್ಷ ವೆಚ್ಚದಲ್ಲಿ ತೋಳನಕೆರೆ ಜೀರ್ಣೋದ್ಧಾರ ಮಾಡುವ ಮೂಲಕ ಕೆರೆ ಅಸ್ತಿತ್ವ ಉಳಿಸುವುದರೊಂದಿಗೆ ಜನ-ಜಾನುವಾರುಗಳಿಗೆ, ರೈತರಿಗೆ ಅನುಕೂಲ ಒದಗಿಸಿರುವುದು ಮಾದರಿ ಕಾರ್ಯ ಎಂದು ಶ್ಲಾಘಿಸಿದರು. ಗ್ರಾಮದ ನಿವಾಸಿಗಳು ಕೂಡ ಜೀವನಾಡಿಯಾದ ಜಲಮೂಲಗಳಿಗೆ ಕಂಟಕ ಉಂಟಾಗದ ರೀತಿಯಲ್ಲಿ ಜೋಪಾನ ಮಾಡುವ ಜವಬ್ದಾರಿ ತೋರಬೇಕಿದೆ. ಮೂಢನಂಬಿಕೆ, ಅತಿಯಾದ ಧಾರ್ಮಿಕ ಆಚರಣೆಗಳಿಂದ ಕೆರೆ, ನದಿಗಳನ್ನು ಕಲುಷಿತಗೊಳಿಸದಂತೆ ಅವರು ಮನವಿ ಮಾಡಿದರು.
ಗೋಕುಲ್ ದಾಸ್ ಫೌಂಡೇಶನ್ ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಜೇಂದ್ರ ಪ್ರಸಾದ್ ಮಾತನಾಡಿ, ಚಿಕ್ಕತ್ತೂರು ಗ್ರಾಮಕ್ಕೆ ಸಂಸ್ಥೆ ವತಿಯಿಂದ ೧೧ ಲಕ್ಷ ರೂ ಗಳ ಸಿಎಸ್ರ್ ಯೋಜನೆಯಡಿ ಕಸ ಸಂಗ್ರಹ ಘಟಕಗಳ ಸ್ಥಾಪನೆ, ಪರಿಸರ, ಜಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಗೋಡೆ ಬರಹಗಳನ್ನು ರಚಿಸುವುದರೊಂದಿಗೆ ಕೆರೆಯನ್ನು ಜೀರ್ಣೋದ್ಧಾರಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಚಿಕ್ಕತ್ತೂರು ಶ್ರೀ ವಿನಾಯಕ ಯುವಕ ಸಂಘದ ಅಧ್ಯಕ್ಷ ಸಿ.ಸಿ.ಸ್ವಾಮಿ ಮಾತನಾಡಿ, ಗ್ರಾಮಪಂಚಾಯ್ತಿಗಳಿಗೂ ಮಿಗಿಲಾದ ಸೇವೆಗಳು ಸಂಘಸAಸ್ಥೆಗಳಿAದ ಸಾಧ್ಯವಿದೆ. ಗೋಕುಲ್ ದಾಸ್ ಫೌಂಡೇಶನ್ ಕೊಡುಗೆ ಗ್ರಾಮಕ್ಕೆ ವರದಾನವಾಗಿದೆ. ಮುಂದಿನ ದಿನಗಳಲ್ಲಿ ಆನೆಕೆರೆಯನ್ನು ತ್ಯಾಜ್ಯ ಮುಕ್ತವಾಗಿಸುವ ನಿಟ್ಟಿನಲ್ಲಿ ಸುತ್ತಲೂ ಮೆಷ್ ಅಳವಡಿಸಿಕೊಡಲು ಮನವಿ ಮಾಡಿದರು.
ಐಸೆಕ್ ಅಧ್ಯಯನ ಸಂಸ್ಥೆ ಮುಖ್ಯಸ್ಥೆ ಡಾ.ಚನ್ನಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಗೋಕುಲ್ ದಾಸ್ ಎಕ್ಸ್ಪೋರ್ಟರ್ಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸಿಎಸ್ಆರ್ನ ಪ್ರಧಾನ ವ್ಯವಸ್ಥಾಪಕ ಮಹಾಂತೇಶ್ ಬಂಗಾರಿ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಪಾರ್ವತಮ್ಮ ರಾಮೇಗೌಡ, ಖತೀಜಾ, ಗ್ರಾಪಂ ಸಿಬ್ಬಂದಿ ಅವಿನಾಶ್, ಯುವಕ ಸಂಘದ ಸದಸ್ಯರಾದ ಶ್ರೀನಿವಾಸ್, ಕೃಷ್ಣೇಗೌಡ, ಮಧುಕುಮಾರ್, ಕುಮಾರಸ್ವಾಮಿ, ಗ್ರಾಮಸ್ಥರಾದ ಪ್ರಸನ್ನ, ಶಿವಕುಮಾರ್, ಚಂದ್ರಶೇಖರ್, ಡಿಶ್ ಮೋಹನ್, ಶಿವಣ್ಣ ಮಹಿಳಾ ಸಂಘದ ಸದಸ್ಯರುಗಳು ಇದ್ದರು.