ಮಡಿಕೇರಿ: ಕೊಡವ ಸಮುದಾಯದ ಅಸ್ತಿತ್ವ, ಹಕ್ಕುಗಳು ಹಾಗೂ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ನಡೆಯುತ್ತಿರುವ ಹೋರಾಟಗಳನ್ನು ವಿರೋಧಿಸುವ ಅಥವಾ ಹತ್ತಿಕ್ಕುವ ಉದ್ದೇಶ ದಿಂದ ಗೌಡ ಸಮಾಜ ಒಕ್ಕೂಟವು ನಿರ್ಣಯ ಕೈಗೊಂಡಿರುವುದು ಖಂಡನೀಯ ಎಂದು ಕುಶಾಲನಗರ ಕೊಡವ ಸಮಾಜ ಅಸಮಾಧಾನ ವ್ಯಕ್ತಪಡಿಸಿದೆ.
ಕೊಡವ ಸಮುದಾಯಕ್ಕೆ ಸಂಬAಧಿಸಿದ ಭೂಮಿ ವಿಚಾರ, ಪರಿಶಿಷ್ಟ ಪಂಗಡ (Sಖಿ) ಸ್ಥಾನಮಾನದ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ವಿರೋಧಿಸಿ ಗೌಡ ಸಮಾಜ ಒಕ್ಕೂಟದ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಹಾಗೂ ಈ ವಿಚಾರವನ್ನು ನ್ಯಾಯಾಲಯದ ಮುಂದೆಯೂ ಕೊಂಡೊಯ್ಯುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ. ಇಂತಹ ನಿರ್ಣಯವನ್ನು ಕುಶಾಲನಗರ ಕೊಡವ ಸಮಾಜ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊಡವ ಸಮುದಾಯದ ಹಕ್ಕು ಮತ್ತು ಅಸ್ತಿತ್ವಕ್ಕಾಗಿ ವಿವಿಧ ಕೊಡವ ಸಂಘಟನೆಗಳು ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಮಾರ್ಗಗಳಲ್ಲಿ ಹೋರಾಟ ನಡೆಸುತ್ತಿವೆ. ಕೊಡವ ಲ್ಯಾಂಡ್ ಸೇರಿದಂತೆ ಕೊಡವ ಸಮುದಾಯದ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ಹಾಗೂ ಸೂಕ್ತ ಸಾಂವಿಧಾನಿಕ ಮತ್ತು ಕಾನೂನುಬದ್ಧ ಸಂಸ್ಥೆಗಳ ಮುಂದೆ ಮಂಡಿಸುವ ಹಕ್ಕು ಕೊಡವ ಸಮುದಾಯಕ್ಕಿದೆ. ಕೊಡವ ಸಿಎನ್‌ಸಿ ಸೇರಿದಂತೆ ಸಂಘಟನೆಗಳು ಗ್ರಾಮದಿಂದ ದೆಹಲಿಯವರೆಗೆ ನಿರಂತರ ಹೋರಾಟ ನಡೆಸುತ್ತಿದ್ದು, ನ್ಯಾಯಾಲಯಗಳ ಮೂಲಕವೂ ಕೊಡವ ಅಸ್ತಿತ್ವ ಮತ್ತು ಹಕ್ಕುಗಳ ರಕ್ಷಣೆಗೆ ಪ್ರಯತ್ನಿಸುತ್ತಿವೆ ಎಂದು ಕೊಡವ ಸಮಾಜ ಹೇಳಿದೆ.
ಇತ್ತೀಚೆಗೆ ಕೊಡಗಿನಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದ್ದ ಕಟ್ಟೆಮಾಡು ಘಟನೆಯ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿರುವ ಸಂದರ್ಭದಲ್ಲಿ ಯಾವುದೇ ಸಮುದಾಯಗಳ ನಡುವೆ ಮತ್ತೆ ಅಪನಂಬಿಕೆ ಅಥವಾ ಉದ್ವಿಗ್ನತೆ ಉಂಟುಮಾಡುವAತಹ ಹೇಳಿಕೆಗಳು, ನಿರ್ಣಯಗಳು ಅಥವಾ ಸಂಘಟಿತ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಕುಶಾಲನಗರ ಕೊಡವ ಸಮಾಜ ಮನವಿ ಮಾಡಿದೆ.