ಮಡಿಕೇರಿ: ಇತ್ತೀಚೆಗೆ ಮಡಿಕೇರಿ ಗೌಡ ಸಮಾಜದಲ್ಲಿ ನಡೆದ ಗೌಡ ಸಮಾಜಗಳ ಒಕ್ಕೂಟದ ಸಭೆಯಲ್ಲಿ ಕೊಡವ ಜನಾಂಗದವರ ಸಂವಿಧಾನದತ್ತವಾದ ಹಕ್ಕುಗಳನ್ನು ಪಡೆಯಲು ಕೊಡವ ಸಂಘಟನೆಗಳು ನ್ಯಾಯಬದ್ಧವಾಗಿ ಹೋರಾಟ ಮಾಡುತ್ತಿರುವುದಕ್ಕೆ ವಿರೋಧಿಸಿ ನಿರ್ಣಯಗಳನ್ನು ಕೈಗೊಂಡಿದ್ದು ಇದು ಕೊಡವರ ಮತ್ತು ಕೊಡವ ಭಾಷಿಕರ ವಿರುದ್ಧವಾಗಿ ಮಾಡಿದ ನಿರ್ಣಯವಾಗಿದ್ದು, ಇದನ್ನು ನಾಪೋಕ್ಲು ಕೊಡವ ಸಮಾಜ ಖಂಡಿಸುತ್ತದೆ ಎಂದು ಹೇಳಿಕೆ ನೀಡಿದೆ.
ಯಾವುದೇ ಚಿಕ್ಕ ಸಮುದಾಯಗಳು ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಜನಾಂಗ ಮತ್ತು ಭಾಷೆಯನ್ನು ರಕ್ಷಿಸಲು ನ್ಯಾಯಸಮ್ಮತವಾಗಿ ಹೋರಾಡಲು ಭಾರತದ ಸಂವಿಧಾನದಲ್ಲಿ ಅವಕಾಶ ಕಲ್ಲಿಸಿರುತ್ತದೆ. ಕೊಡವ ಜನಾಂಗದವರ ಹೋರಾಟವು ಯಾವುದೇ ಜಾತಿ ಜನಾಂಗದ ವಿರುದ್ಧವಾದ ಹೋರಾಟವಾಗಿರದೆ, ತಮ್ಮ ಸಮುದಾಯದ ಹಕ್ಕಿನ ಬಗ್ಗೆ ಮಾತ್ರ ಹೊರಾಟ ಮಾಡುವುದಾಗಿದೆ. ಯಾವುದೇ ಕೊಡವ ಸಂಘಟನೆಗಳು ಅಥವಾ ಕೊಡವ ಸಮಾಜದವರು ಈ ದಿನದವರೆಗೆ ಬೇರೆ ಜನಾಂಗದವರ ನ್ಯಾಯಯುತವಾದ ಬೇಡಿಕೆಗಳ ವಿರುದ್ಧ ಹೋರಾಟ ಮಾಡಿರುವ ಇತಿಹಾಸವೇ ಇಲ್ಲ. ಕೊಡವರು ಎಲ್ಲಾ ಜಾತಿ-ಜನಾಂಗಗಳನ್ನು ಒಗ್ಗೂಡಿಸಿ ಸಹ ಬಾಳ್ವೆಯೊಂದಿಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಇಂತವರಲ್ಲಿ ಕೊಡಗಿನಲ್ಲಿ ಜಾತಿ-ಜಾತಿಗಳ ಮಧ್ಯ ವಿಷ ಬೀಜವನ್ನು ಬಿತ್ತುವ ಇಂತಹ ನಿರ್ಣಯ ಗೌಡ ಸಮಾಜದ ಒಕ್ಕೂಟದ ಸಭೆಯಲ್ಲಿ ಆಗಿರುವುದು ವಿಷಾದನೀಯ. ಈ ಸಮಾರಂಭದಲ್ಲಿ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ಸಮ್ಮುಖದಲ್ಲಿ ಈ ನಿರ್ಣಯ ಕೈಗೊಂಡಿರುವುದು ವಿಷಾದನೀಯ ಮತ್ತು ಶಾಸಕರುಗಳು ಈ ನಿರ್ಣಯದ ಬಗ್ಗೆ ಯಾವುದೇ ಹೇಳಿಕೆ ನೀಡದಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತದೆ ಎಂದು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಯಿತು. ಇನ್ನು ಮುಂದಕ್ಕಾದರೂ ಆಯಾ ಜನಾಂಗದ ಸಂಘಟನೆ ಮತ್ತು ಸಮಾಜಗಳು ತಮ್ಮ ಹಕ್ಕಿನ ಬಗ್ಗೆ ಹೋರಾಟ ಮಾಡುವ ಸಂಧರ್ಭದಲ್ಲಿ ಅದನ್ನು ವಿರೋಧಿಸದೆ ತಮ್ಮ ತಮ್ಮ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತಾಗಲಿ ಎಂದು ಸಮಾಜ ಆಶಿಸಿದೆ.