ಮಡಿಕೇರಿ: ಇತ್ತೀಚೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟ ವಿಶೇಷ ಸಭೆ ನಡೆಸಿ ಕೊಡವರ ಸಂವಿಧಾನಬದ್ಧ ಹಕ್ಕುಗಳ ವಿರುದ್ಧ ನಿರ್ಣಯ ಕೈಗೊಂಡಿರುವುದು ಖಂಡನೀಯ. ಕೊಡವರ ಹಕ್ಕುಗಳಿಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲವೆಂದು ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕೊಡವರು ಮಾತ್ರವಲ್ಲದೆ ಎಲ್ಲಾ ಜಾತಿ ಜನಾಂಗದವರು ಸೌಹಾರ್ದತೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಕೊಡವರು ಎಲ್ಲರೊಂದಿಗೂ ಅತ್ಯಂತ ಗೌರವ ಮತ್ತು ಅನ್ಯೋನ್ಯತೆಯಿಂದ ಇದ್ದು, ಯಾರೊಂದಿಗೂ ಭಿನ್ನಮತವನ್ನು ಹೊಂದಿಲ್ಲ. ಆದರೆ ಕೆಲವರು ಕೊಡವರ ಸಂವಿಧಾನಬದ್ಧ ಹಕ್ಕುಗಳನ್ನೇ ತಪ್ಪಾಗಿ ಅರ್ಥೈಸಿಕೊಂಡು ಒಡಕು ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಡವರು, ಗೌಡರು ಸೇರಿದಂತೆ ಎಲ್ಲಾ ಜಾತಿ ಜನಾಂಗದವರು ಒಗ್ಗಟ್ಟಿನಿಂದ ಜೀವನ ಸಾಗಿಸುವುದನ್ನು ಸಹಿಸದ ಕೆಲವರು ವರ್ಷದಲ್ಲಿ ಒಂದೆರಡು ಬಾರಿ ಈ ರೀತಿಯ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಸಮಾಜದಲ್ಲಿ ಒಡಕು ಮೂಡಿಸುವ ಇಂತಹ ವ್ಯಕ್ತಿಗಳು ತಮ್ಮ ಚಾಳಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಮನು ಮುದ್ದಪ್ಪ ಒತ್ತಾಯಿಸಿದ್ದಾರೆ.