ಮಡಿಕೇರಿ, ಸೆ. ೭: ಕೊಡವ ಸಮುದಾಯದ ಅಸ್ತಿತ್ವ, ಹಕ್ಕುಗಳು ಹಾಗೂ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ನಡೆಯುತ್ತಿರುವ ಹೋರಾಟಗಳನ್ನು ವಿರೋಧಿಸುವ ಅಥವಾ ಹತ್ತಿಕ್ಕುವ ಉದ್ದೇಶದಿಂದ ಗೌಡ ಸಮಾಜ ಒಕ್ಕೂಟವು ನಿರ್ಣಯ ಕೈಗೊಂಡಿರುವುದು ಖಂಡನೀಯ ಎಂದು ಮಡಿಕೇರಿ ಕೊಡವ ಸಮಾಜ ಅಸಮಾಧಾನ ವ್ಯಕ್ತಪಡಿಸಿದೆ.

ಕೊಡವ ಸಮುದಾಯಕ್ಕೆ ಸಂಬAಧಿಸಿದ ಭೂಮಿ ವಿಚಾರ, ಪರಿಶಿಷ್ಟ ಪಂಗಡ ಸ್ಥಾನಮಾನದ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ವಿರೋಧಿಸಿ ಗೌಡ ಸಮಾಜ ಒಕ್ಕೂಟದ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಹಾಗೂ ಈ ವಿಚಾರವನ್ನು ನ್ಯಾಯಾಲಯದ ಮುಂದೆಯೂ ಕೊಂಡೊಯ್ಯುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ. ಇಂತಹ ನಿರ್ಣಯವನ್ನು ಕೊಡವ ಸಮಾಜ ಖಂಡಿಸುತ್ತದೆ ಎಂದು ಸಮಾಜದ ಅಧ್ಯಕ್ಷರಾದ ಮಂಡುವAಡ ಪಿ.ಮುತ್ತಪ್ಪ,ಉಪಾಧ್ಯಕ್ಷರಾದ ಕೇಕಡ ವಿಜುದೇವಯ್ಯ, ಕಾರ್ಯದರ್ಶಿ ಬೊಪ್ಪಂಡ ಸರಳಾ ಕರುಂಬಯ್ಯ,ಜAಟಿ ಕಾರ್ಯದರ್ಶಿ ನಂದಿನೆರವAಡ ದಿನೇಶ್ ಹಾಗು ನಿರ್ದೇಶಕರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕೊಡವ ಸಮುದಾಯದ ಹಕ್ಕು ಮತ್ತು ಅಸ್ತಿತ್ವಕ್ಕಾಗಿ ವಿವಿಧ ಕೊಡವ ಸಂಘಟನೆಗಳು ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಮಾರ್ಗಗಳಲ್ಲಿ ಹೋರಾಟ ನಡೆಸುತ್ತಿವೆ. ಕೊಡವ ಲ್ಯಾಂಡ್ ಸೇರಿದಂತೆ ಕೊಡವ ಸಮುದಾಯದ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ಹಾಗೂ ಸೂಕ್ತ ಸಾಂವಿಧಾನಿಕ ಮತ್ತು ಕಾನೂನುಬದ್ಧ ಸಂಸ್ಥೆಗಳ ಮುಂದೆ ಮಂಡಿಸುವ ಹಕ್ಕು ಕೊಡವ ಸಮುದಾಯಕ್ಕಿದೆ. ಕೊಡವ ಸಿಎನ್‌ಸಿ ಸೇರಿದಂತೆ ಸಂಘಟನೆಗಳು ಗ್ರಾಮದಿಂದ ದೆಹಲಿಯವರೆಗೆ ನಿರಂತರ ಹೋರಾಟ ನಡೆಸುತ್ತಿದ್ದು, ನ್ಯಾಯಾಲಯಗಳ ಮೂಲಕವೂ ಕೊಡವ ಅಸ್ತಿತ್ವ ಮತ್ತು ಹಕ್ಕುಗಳ ರಕ್ಷಣೆಗೆ ಪ್ರಯತ್ನಿಸುತ್ತಿವೆ ಎಂದು ಕೊಡವ ಸಮಾಜ ಹೇಳಿದೆ.

ಗೌಡ ಸಮುದಾಯವು ತನ್ನ ನ್ಯಾಯಸಮ್ಮತ ಬೇಡಿಕೆಗಳನ್ನು ಪ್ರಜಾಸತ್ತಾತ್ಮಕ ಹಾಗೂ ಸಾಂವಿಧಾನಿಕ ಮಾರ್ಗಗಳಲ್ಲಿ ಮುಂದಿಡುವುದಕ್ಕೆ ಕೊಡವ ಸಮಾಜಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ, ಕೊಡವ ಸಮುದಾಯದ ಎಸ್‌ಟಿ ಸ್ಥಾನಮಾನದ ಬೇಡಿಕೆ ಸೇರಿದಂತೆ ಕಾನೂನುಬದ್ಧ ಪ್ರಕ್ರಿಯೆಗಳ ಮೂಲಕ ಮುಂದಿಡಲಾಗುತ್ತಿರುವ ಹಕ್ಕುಗಳು ಮತ್ತು ಮಾನ್ಯತೆಗಳನ್ನು ವಿರೋಧಿಸುವ ಸಂಘಟಿತ ಪ್ರಯತ್ನಗಳಿಗೆ ತೀವ್ರ ವಿರೋಧವಿದೆ ಎಂದು ಸ್ಪಷ್ಟಪಡಿಸಿದೆ.

ಕೊಡಗಿನಲ್ಲಿ ವಿವಿಧ ಸಮುದಾಯಗಳ ನಡುವೆ ದೀರ್ಘಕಾಲ ದಿಂದಲೂ ಆತ್ಮೀಯ ಸಾಮಾಜಿಕ ಸಂಬAಧಗಳು ಮತ್ತು ಸೌಹಾರ್ದತೆ ಇದೆ. ಯಾವುದೇ ಒಂದು ಸಮುದಾಯವು ಮತ್ತೊಂದು ಸಮುದಾಯದ ನ್ಯಾಯಸಮ್ಮತ ಆಶಯಗಳ ಮೇಲೆ ಅಧಿಕಾರ ಅಥವಾ ಪಾಲಕತ್ವ ಹೊಂದಿರುವAತೆ ವರ್ತಿಸುವುದು ಸೂಕ್ತವಲ್ಲ. ಭಿನ್ನಾಭಿಪ್ರಾಯಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಹಜವಾಗಿದ್ದರೂ, ಮತ್ತೊಂದು ಸಮುದಾಯದ ನ್ಯಾಯಸಮ್ಮತ ಬೇಡಿಕೆಗಳನ್ನು ವಿರೋಧಿಸಲು ಸಂಘಟಿತವಾಗಿ ಕೈಗೊಳ್ಳುವ ಕ್ರಮಗಳು ಅನಗತ್ಯ ಅಪನಂಬಿಕೆ, ಅಸಮಾಧಾನ ಮತ್ತು ಸಾಮಾಜಿಕ ವಿಭಜನೆಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

ಯಾರ ಅನುಮತಿಯ ಅಗತ್ಯವಿಲ್ಲ : ಜಬ್ಭೂಮಿ ಚಾರಿಟೇಬಲ್ ಟ್ರಸ್ಟ್

ಕೊಡವರು ತಮ್ಮ ಅಸ್ತಿತ್ವ, ಗುರುತು, ಸಂಸ್ಕೃತಿ, ಭೂಮಿ, ಭಾಷೆ ಅಥವಾ ಸಾಂವಿಧಾನಿಕ ಹಕ್ಕುಗಳ ಕುರಿತು ಧ್ವನಿ ಎತ್ತಲು ಯಾರ ಅನುಮತಿಯನ್ನೂ ಪಡೆಯಬೇಕಾಗಿಲ್ಲ ಎಂದು ಜಬ್ಬೂಮಿ ಚಾರಿಟಬಲ್ ಟ್ರಸ್ಟ್ ಹೇಳಿದೆ ಈ ಕುರಿತು ಪ್ರಕಟಣೆ ಹೊರಡಿಸಿರುವ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಟ್ರಸ್ಟ್, ಇದು ಯಾರ ಮೇಲಿನ ದ್ವೇಷವೂ ಅಲ್ಲ, ಯಾರ ವಿರುದ್ಧದ ಸಂಘರ್ಷವೂ ಅಲ್ಲ, ಭಾರತೀಯ ಸಂವಿಧಾನ ನೀಡಿರುವ ಪ್ರಜಾಪ್ರಭುತ್ವದ ಹಕ್ಕಿನ ಸದುಪಯೋಗವಾಗಿದೆ ಎಂದು ಹೇಳಿದೆ.

ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಭಿಪ್ರಾಯ ವ್ಯಕ್ತಪಡಿಸುವ, ಹಕ್ಕುಗಳನ್ನು ಪ್ರತಿಪಾದಿಸುವ ಮತ್ತು ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಶಾಂತಿಯುತವಾಗಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಹೋರಾಡುವ ಹಕ್ಕನ್ನು ನೀಡಿದೆ. ಹೀಗಿರುವಾಗ ಇದು ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ, ನಾವು ಒಪ್ಪುವುದಿಲ್ಲ ಎನ್ನುವ ರೀತಿಯಲ್ಲಿ ಪ್ರಶ್ನಿಸುವುದು ಪ್ರಜಾಪ್ರಭುತ್ವದ ಮೂಲತತ್ವವನ್ನೇ ತಪ್ಪಾಗಿ ಅರ್ಥೈಸಿಕೊಂಡAತೆ” ಎಂದು ಟ್ರಸ್ಟ್ ತಿಳಿಸಿದೆ. ಬಹುಮತದ ಒಪ್ಪಿಗೆ ಸಂವಿಧಾನಾತ್ಮಕ ಹಕ್ಕಿನ ಪೂರ್ವಶರ್ತವಲ್ಲ. ನಿಜವಾದ ಪ್ರಜಾಪ್ರಭುತ್ವವು ಬಹುಮತದ ಅಧಿಕಾರದ ಜೊತೆಗೆ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯನ್ನೂ ಒಳಗೊಂಡಿರುತ್ತದೆ. ಒಂದು ಸಮುದಾಯದ ಬೇಡಿಕೆಯನ್ನು ಮತ್ತೊಂದು ಸಮುದಾಯವು ಒಪ್ಪುವುದಿಲ್ಲವೆಂದ ಮಾತ್ರಕ್ಕೆ ಆ ಬೇಡಿಕೆ ಕೇಳುವ ಹಕ್ಕೇ ಕಳೆದುಹೋಗುವುದಿಲ್ಲ. ಬೇಡಿಕೆಯ ಸಾಂವಿಧಾನಿಕ ಮಾನ್ಯತೆಯನ್ನು ನಿರ್ಧರಿಸುವುದು ಕಾನೂನು ಮತ್ತು ಸಂವಿಧಾನ, ಯಾವುದೇ ಸಮುದಾಯವಲ್ಲ ಎಂದು ಹೇಳಿದೆ. ಕೊಡಗಿನಲ್ಲಿ ವಾಸಿಸುವ ಪ್ರತಿಯೊಂದು ಸಮುದಾಯಕ್ಕೂ ಸಮಾನ ನಾಗರಿಕ ಹಕ್ಕುಗಳಿವೆ, ಅದನ್ನು ನಾವು ಗೌರವಿಸುತ್ತೇವೆ. ಆದರೆ ಇತರರ ಹಕ್ಕುಗಳನ್ನು ಗೌರವಿಸುವುದು ಎಂದರೆ ನಮ್ಮ ಹಕ್ಕುಗಳನ್ನು ತ್ಯಜಿಸುವುದಲ್ಲ. ವೈವಿಧ್ಯತೆಯನ್ನು ಅಳಿಸುವುದಲ್ಲ, ಅದನ್ನು ಗೌರವಿಸುವುದೇ ಭಾರತೀಯ ಪ್ರಜಾಪ್ರಭುತ್ವದ ಶಕ್ತಿ ಎಂದು ಟ್ರಸ್ಟ್ ಹೇಳಿದೆ. ಕೊಡವರು ತಮ್ಮ ಬೇಡಿಕೆಗಳಿಗಾಗಿ ಕಾನೂನುಬದ್ಧವಾಗಿ ನ್ಯಾಯಾಂಗದ ಮೊರೆ ಹೋಗಿದ್ದರೆ, ಅದನ್ನು ಪ್ರಶ್ನಿಸುವ ಹಕ್ಕು ಇತರರಿಗೂ ಇದೆ. ಆದರೆ ಉತ್ತರವು ಸಾಕ್ಷ್ಯ, ತರ್ಕ, ಸಂವಿಧಾನ ಮತ್ತು ಕಾನೂನಿನ ಮೂಲಕ ಬರಬೇಕು, ಬಹುಮತದ ಸಂಖ್ಯಾಬಲದಿAದಲೋ, ಸಾಮಾಜಿಕ ಒತ್ತಡದಿಂದಲೋ ಅಲ್ಲ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ಹೇಳಿದೆ.

ಸತ್ಯ ಅರಿತುಕೊಳ್ಳಲಿ - ಕೊಡವ ಸಮಾಜ ಮೂಂದ್‌ನಾಡ್

ಕೊಡವರ ನ್ಯಾಯಯುತ ಹಕ್ಕೋತ್ತಾಯಗಳನ್ನು ವಿರೋಧಿಸಿ ನಿನ್ನೆ ನಡೆದ ಗೌಡ ಜನಾಂಗದ ಸಭೆಯನ್ನು ಕೊಡವ ಸಮಾಜ ಮೂಂದ್ ನಾಡ್ (ಮೂರ್ನಾಡ್) ಆಡಳಿತ ಮಂಡಳಿ ಖಂಡಿಸಿದೆ.

ಕೊಡವರು ತಮ್ಮ ಅಸ್ತಿತ್ವ, ವಿಶಿಷ್ಟ ಸಂಸ್ಕೃತಿ, ಪರಂಪರೆ, ಗುರುತು ಹಾಗೂ ಸಾಂಪ್ರದಾಯಿಕ ಹಕ್ಕುಗಳ ರಕ್ಷಣೆಗಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಾತ್ಮಕ ಮಾರ್ಗದಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸುತ್ತಿದ್ದಾರೆ.

ಸ್ವಾಯತ್ತತೆ, ಕೋವಿ ಹಕ್ಕಿನ ರಕ್ಷಣೆ ಹಾಗೂ ಎಸ್‌ಟಿ ಸ್ಥಾನಮಾನ-ಸೇರಿದಂತೆ ಕೊಡವರ ಹಕ್ಕೋತ್ತಾಯಗಳು ಯಾರ ಆಸ್ತಿ, ಭೂಮಿ ಅಥವಾ ಹಕ್ಕುಗಳನ್ನು ಕಸಿದುಕೊಳ್ಳುವ ಬೇಡಿಕೆಗಳಲ್ಲ. ಹಾಗಿದ್ದರೂ ಈ ನ್ಯಾಯಯುತ ಬೇಡಿಕೆಗಳಿಗೆ ಸಂಘಟಿತವಾಗಿ ವಿರೋಧ ವ್ಯಕ್ತಪಡಿಸುವ ಮತ್ತೊಂದು ಸಮುದಾಯದ ಪ್ರಯತ್ನವನ್ನು ನಾವು ತೀವ್ರವಾಗಿ ಆಕ್ಷೇಪಿಸುತ್ತೇವೆ ಎಂದು ಅಧ್ಯಕ್ಷ ತೇಲಪಂಡÀ ಸುಬ್ಬಯ್ಯ ಹೇಳಿದ್ದಾರೆ.

ಕೊಡವರ ಹಕ್ಕುಗಳ ಕುರಿತು ಸೂಕ್ತ ಮಾಹಿತಿ, ಐತಿಹಾಸಿಕ ಹಿನ್ನೆಲೆ ಹಾಗೂ ಸಂವಿಧಾನಾತ್ಮಕ ಅಂಶಗಳನ್ನು ಅರಿತುಕೊಳ್ಳದೆ ಒಂದು ಸಮುದಾಯದ ನ್ಯಾಯಯುತ ಬೇಡಿಕೆಗಳನ್ನೇ ವಿರೋಧಿಸುವ ರೀತಿಯಲ್ಲಿ ಸಭೆಗಳನ್ನು ನಡೆಸುವುದು ಮತ್ತು ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುವುದು ಖಂಡನೀಯ ಎಂದಿದ್ದಾರೆ.

ಕೊಡವರು ಯಾರ ವಿರುದ್ಧವೂ ಹೋರಾಟ ನಡೆಸುತ್ತಿಲ್ಲ. ತಮ್ಮ ನೆಲದಲ್ಲಿ ತಮ್ಮ ಗುರುತು, ಸಂಸ್ಕೃತಿ, ಪರಂಪರೆ ಮತ್ತು ಹಕ್ಕುಗಳು ಉಳಿಯಬೇಕು ಎಂಬುದಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ. ಆದ್ದರಿಂದ ಕೊಡವರ ಹಕ್ಕೋತ್ತಾಯಗಳನ್ನು ವಿರೋಧಿಸುವವರು ಮೊದಲು ಈ ಬೇಡಿಕೆಗಳ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು. ಕೊಡವರ ಹಕ್ಕುಗಳನ್ನು ಪ್ರಶ್ನಿಸುವುದಕ್ಕೂ ಮುನ್ನ, ಆ ಹಕ್ಕುಗಳು ಯಾರ ಆಸ್ತಿಯನ್ನೂ ಕಸಿದುಕೊಳ್ಳುವುದಿಲ್ಲ ಎಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದಿದ್ದಾರೆ.