ಚೆಟ್ಟಳ್ಳಿ, ಸೆ. ೭: ಮಾಡಹಾಗಲ (ಖಿeಚಿseಟ ಉouಡಿಜ) ಬೆಳೆಯಲ್ಲಿ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು, ಕೀಟ ಹಾಗೂ ರೋಗಗಳ ಸಮಗ್ರ ನಿರ್ವಹಣೆ ಮತ್ತು ಉತ್ಪಾದಕತೆ ಹೆಚ್ಚಿಸುವ ಕುರಿತು ರೈತರಿಗೆ ತಾಂತ್ರಿಕ ಜ್ಞಾನ ನೀಡುವ ಉದ್ದೇಶದಿಂದ ಐಸಿಎಆರ್ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIಊಖ) ಯ ಕೇಂದ್ರಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ (ಅಊಇS), ಚೆಟ್ಟಳ್ಳಿ ವತಿಯಿಂದ ಕ್ಷೇತ್ರೋತ್ಸವ ಹಾಗೂ ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ೯೨ ರೈತರು ಪಾಲ್ಗೊಂಡಿದ್ದು, ೪೯ ಪುರುಷರು ಹಾಗೂ ೪೩ ಮಹಿಳೆಯರು ಭಾಗವಹಿಸಿದ್ದರು. ಕೇಂದ್ರದ ಮುಖ್ಯಸ್ಥರಾದ ಡಾ. ಮುರಳೀಧರ ಬಿ.ಎಂ. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ. ರಮೇಶ್ ಬಾಬು ಆರ್. ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ವಿಜ್ಞಾನಿ ಹರಿತಾ ಮೋಹನ್ ಸಹ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.

ಚೆಟ್ಟಳ್ಳಿ ಕಾಫಿ ಉಪ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಹಾಗೂ ಕಾಫಿ ಮಂಡಳಿಯ ಜಂಟಿ ನಿರ್ದೇಶಕರಾದ ಡಾ. ಸಿ. ಬಾಬು ಮುಖ್ಯ ಅತಿಥಿಯಾಗಿ ಹಾಗೂ ಮೈಸೂರಿನ ಡಿಆರ್‌ಡಿಒ ಮಾಜಿ ನಿರ್ದೇಶಕರಾದ ಡಾ. ಹರ್ಷವರ್ಧನ್ ಬಾತ್ರಾ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು.

ಮಾಡಹಾಗಲ ಬೆಳೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ಮಡಿಕೇರಿ ತಾಲೂಕಿನ ಕಾಟಕೇರಿ ಗ್ರಾಮದ ಮಹೇಶ್ ಹುದೇರಿ ಬಿದ್ದಪ್ಪ ಹಾಗೂ ಮೈಸೂರು ಗ್ರಾಮಾಂತರದ ಗೋಪಾಲಕೃಷ್ಣ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಐಸಿಎಆರ್ IIಊಖ ವಿಜ್ಞಾನಿ ಡಾ. ರಮೇಶ್ ಬಾಬು ಆರ್. ಅವರು ‘ಮಾಡಹಾಗಲದ ವೈಜ್ಞಾನಿಕ ಕೃಷಿ’ ಕುರಿತು ರೈತರಿಗೆ ಸಮಗ್ರ ಮಾಹಿತಿ ನೀಡಿದರು. ಸಸ್ಯ ರೋಗಶಾಸ್ತ್ರ ವಿಜ್ಞಾನಿ ಹರಿತಾ ಮೋಹನ್ ಅವರು ಮಾಡಹಾಗಲ ಬೆಳೆಗೆ ಬಾಧಿಸುವ ಪ್ರಮುಖ ಕೀಟ ಹಾಗೂ ರೋಗಗಳು ಮತ್ತು ಅವುಗಳ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ತರಬೇತಿ ನೀಡಿದರು.

ರೈತರೊಂದಿಗೆ ವಿಜ್ಞಾನಿಗಳ ನೇರ ಸಂವಾದ ತರಬೇತಿಯ ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ರೈತರು ಮಾಡಹಾಗಲ ಬೆಳೆಯ ಉತ್ಪಾದನೆಗೆ ಎದುರಾಗುವ ಸಮಸ್ಯೆಗಳು, ಕೀಟ ಹಾಗೂ ರೋಗಬಾಧೆ, ಬೆಳೆ ನಿರ್ವಹಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ವಿಜ್ಞಾನಿಗಳೊಂದಿಗೆ ಚರ್ಚಿಸಿದರು. ವಿಜ್ಞಾನಿಗಳು ರೈತರ ಪ್ರಶ್ನೆಗಳಿಗೆ ತಾಂತ್ರಿಕ ಪರಿಹಾರಗಳನ್ನು ಒದಗಿಸುವುದರ ಜೊತೆಗೆ ಸೂಕ್ತ ಕೃಷಿ ಸಲಹೆಗಳನ್ನು ನೀಡಿದರು.

‘ಅರ್ಕ ಭಾರತ್’ ಮಾಡಹಾಗಲ ತಳಿಯ ಕ್ಷೇತ್ರ ಪ್ರದರ್ಶನ

ತರಬೇತಿಯ ಪ್ರಮುಖ ಆಕರ್ಷಣೆಯಾಗಿ ಚೆಟ್ಟಳ್ಳಿ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿರುವ ‘ಅರ್ಕ ಭಾರತ್’ ಮಾಡಹಾಗಲ ತಳಿಯ ಪ್ರದರ್ಶನ ಕ್ಷೇತ್ರಕ್ಕೆ ರೈತರನ್ನು ಕರೆದೊಯ್ದು ಕ್ಷೇತ್ರ ಭೇಟಿ ನಡೆಸಲಾಯಿತು. ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ‘ಅರ್ಕ ಭಾರತ್’ ತಳಿಯ ಬೆಳವಣಿಗೆ, ಉತ್ಪಾದನಾ ಸಾಮರ್ಥ್ಯ, ಬೆಳೆ ನಿರ್ವಹಣಾ ತಂತ್ರಜ್ಞಾನ, ಪರಾಗಸ್ಪರ್ಶ ವಿಧಾನಗಳು ಹಾಗೂ ಕ್ಷೇತ್ರಮಟ್ಟದಲ್ಲಿ ಕಂಡುಬರುವ ಕೀಟ ಮತ್ತು ರೋಗ ಸಮಸ್ಯೆಗಳ ಕುರಿತು ರೈತರಿಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಲಾಯಿತು. ವಿಜ್ಞಾನಿಗಳು ಕ್ಷೇತ್ರದಲ್ಲಿಯೇ ಬೆಳೆ ನಿರ್ವಹಣೆಯ ವಿವಿಧ ಹಂತಗಳನ್ನು ವಿವರಿಸಿ, ರೈತರ ಅನುಮಾನಗಳಿಗೆ ಪರಿಹಾರ ನೀಡಿದರು.

ತಾಂತ್ರಿಕ ತರಬೇತಿ, ವಿಜ್ಞಾನಿಗಳೊಂದಿಗೆ ನೇರ ಸಂವಾದ ಹಾಗೂ ಕ್ಷೇತ್ರಮಟ್ಟದ ಪ್ರಾಯೋಗಿಕ ಅನುಭವವನ್ನು ಒಂದೇ ವೇದಿಕೆಯಲ್ಲಿ ಒದಗಿಸಿದ ಈ ಕಾರ್ಯಕ್ರಮವು ಮಾಡಹಾಗಲ ಬೆಳೆಗಾರರಿಗೆ ಹೆಚ್ಚಿನ ಉಪಯುಕ್ತತೆ ತಂದಿತು. ವೈಜ್ಞಾನಿಕ ಕೃಷಿ ತಂತ್ರಜ್ಞಾನವನ್ನು ರೈತರ ಹೊಲಗಳಿಗೆ ತಲುಪಿಸುವುದರ ಜೊತೆಗೆ, ‘ಅರ್ಕ ಭಾರತ್’ನಂತಹ ಸುಧಾರಿತ ತಳಿಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವಲ್ಲಿ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಯಿತು. -ಕರುಣ್ ಕಾಳಯ್ಯ