ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ಸೆ. ೭: ಜಪಾನ್ನಲ್ಲಿ ಈ ಬಾರಿ ಸೆಪ್ಟೆಂಬರ್ ೧೯ ರಿಂದ ಅಕ್ಟೋಬರ್ ೪ರವರೆಗೆ ಜರುಗಲಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಮೂಲದವರಾದ ಮೂವರು ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಉದಯೋನ್ಮುಖ ಕ್ರೀಡಾತಾರೆ ಬೊಳ್ಳಂಡ ಉನ್ನತಿ ಅಯ್ಯಪ್ಪ ೨೦೦ ಮೀಟರ್ ಓಟ ಹಾಗೂ ೪x೪೦೦ ಮೀಟರ್ ರಿಲೇ ವಿಭಾಗದಲ್ಲಿ, ಹಿರಿಯ ಕ್ರೀಡಾಪಟು ಎಂ.ಆರ್. ಪೂವಮ್ಮ ೪x೪೦೦ ಮೀಟರ್ ರಿಲೇಯಲ್ಲಿ ಭಾರತದ ಪರ ಸ್ಪರ್ಧಿಸಲಿದ್ದಾರೆ. ಇವರೊಂದಿಗೆ ಭಾರತ ಬಾಕ್ಸಿಂಗ್ ತಂಡದ ಹೆಡ್ಕೋಚ್ ಆಗಿಯೂ ಕೊಡಗಿನವರಾದ ಚೇನಂಡ ವಿಶು ಕುಟ್ಟಪ್ಪ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕ ರಾಜ್ಯದಿಂದ ಏಳುಮಂದಿ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳುತ್ತಿದ್ದು, ಕೊಡಗಿನ ಮೂಲದ ಮೂವರು ಈ ಬಾರಿ ಜಪಾನ್ಗೆ ತೆರಳುತ್ತಿದ್ದಾರೆ.
ಕುಟ್ಟಪ್ಪ ಗರಡಿಯಲ್ಲಿ ಭಾರತ ಬಾಕ್ಸಿಂಗ್ ತಂಡ ತಾ. ೮ ರಂದು (ಇಂದು) ಜಪಾನ್ಗೆ ತೆರಳಲಿದ್ದು, ಉನ್ನತಿ ಹಾಗೂ ಪೂವಮ್ಮ ತಾ. ೧೨ ರಂದು ಪ್ರಯಾಣ ಬೆಳಸಲಿದ್ದಾರೆ. ಈ ಮೂವರು ‘ಶಕ್ತಿ’ಯೊಂದಿಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿರುವುದು ಹೀಗೆ.
ಚೊಚ್ಚಲ ಏಷ್ಯನ್ ಗೇಮ್ಸ್ : ಪದಕದ ತವಕದಲ್ಲಿ ಉನ್ನತಿ
ಕೊಡಗು ಜಿಲ್ಲೆಯ ಮೂಲದ ಉದಯೋನ್ಮುಖ ಕ್ರೀಡಾಪಟು ಬೊಳ್ಳಂಡ ಉನ್ನತಿ ಅಯ್ಯಪ್ಪ ಅವರು ಇದೀಗ ಮೊದಲ ಏಷ್ಯನ್ ಗೇಮ್ಸ್ಗೆ ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಪ್ರತಿಷ್ಠಿತವಾದ ಈ ಕ್ರೀಡಾಕೂಟವನ್ನು ತಾವು ಎದುರು ನೋಡುತ್ತಿದ್ದು, ಭಾರತದ ಪರವಾಗಿ ಪದಕಗಳಿಸುವ ಆತ್ಮವಿಶ್ವಾಸ ಹೊಂದಿರುವುದಾಗಿ ಉನ್ನತಿ ಹೇಳಿದ್ದಾರೆ.
‘ಶಕ್ತಿ’ಯೊಂದಿಗೆ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಉನ್ನತಿ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುವುದು ತಮ್ಮ ಕನಸಾಗಿತ್ತು. ಈ ನಿಟ್ಟಿನಲ್ಲಿ ವಹಿಸಿದ ಕಠಿಣ ಪರಿಶ್ರಮದಿಂದಾಗಿ ಭಾರತವನ್ನು ಏಷ್ಯನ್ ಗೇಮ್ಸ್ನಲ್ಲಿ ಪ್ರತಿನಿಧಿಸಲು ತಮಗೆ ಅರ್ಹತೆ ದೊರೆತಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದೇಶಕ್ಕೆ ಕೀರ್ತಿತರುವ ಅಭಿಲಾಷೆ ಹೊಂದಿರುವುದಾಗಿ ಹೇಳಿದರು. ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿದ್ದು, ಸ್ಪರ್ಧೆ ಎದುರಿಸಲು ‘ಫಿಟ್’ ಆಗಿರುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದ ಅವರು ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕನಸ್ಸು ನನಸಾಗುತ್ತಿರುವ ಬಗ್ಗೆ ಸಂತಸವಿರುವುದಾಗಿ ಪ್ರತಿಕ್ರಿಯಿಸಿದರು.
ತಮ್ಮ ತಾಯಿ ಪ್ರಮೀಳಾ ಅಯ್ಯಪ್ಪ ಅವರು ೨೦೦೦ದಲ್ಲಿನ ಸಿಡ್ನಿ ಒಲಂಪಿಕ್ಸ್ ಹಾಗೂ ೨೦೦೮ರ ಬೀಜಿಂಗ್ ಒಲಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದಾರೆ. ತಾವು ಕೂಡ ಮುಂದಿನ ದಿನಗಳಲ್ಲಿ ಒಲಂಪಿಕ್ಸ್ನ ಗುರಿ ಹೊಂದಿರುವುದಾಗಿ ಹೇಳಿದ ಉನ್ನತಿ ತಂದೆ ರಾಷ್ಟಿçÃಯ ಅಥ್ಲೆಟಿಕ್ ಕೋಚ್ ಆಗಿದ್ದು ಅವರುಗಳು ಪ್ರೇರಣೆಯಾಗಿದ್ದಾರೆ. ತಮ್ಮೆಲ್ಲರದ್ದೂ ಪದಕ ಗಳಿಸುವ ನಿರೀಕ್ಷೆಯಾಗಿದೆ ಎಂದು ಚೊಚ್ಚಲ ಏಷ್ಯನ್ ಗೇಮ್ಸ್ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಈ ಬಾರಿಯೂ ಪದಕದ ಭರವಸೆ ; ಎಂ.ಆರ್. ಪೂವಮ್ಮ
ಪ್ರಸಕ್ತ ವರ್ಷದ ಏಷ್ಯನ್ ಗೇಮ್ಸ್ನಲ್ಲಿ ಕೊಡಗಿನ ಮೂಲದ ಮತ್ತೋರ್ವ ಕ್ರೀಡಾಪಟು ಎಂ.ಆರ್. ಪೂವಮ್ಮ (ಮಾಚೆಟ್ಟಿರ) ಅವರೂ ಭಾರತವನ್ನು ಮತ್ತೊಮ್ಮೆ ಪ್ರತಿನಿಧಿಸುತ್ತಿದ್ದಾರೆ. ಕರ್ನಾಟಕದಿಂದ ಭಾರತ ಸ್ಕಾ÷್ವಡ್ನಲ್ಲಿ ೪x೪೦೦ ಮಹಿಳಾ ರಿಲೇಯಲ್ಲಿ ಪೂವಮ್ಮ ಆಯ್ಕೆಗೊಂಡಿದ್ದಾರೆ. ಇದು ಇವರಿಗೆ ಮೂರನೆಯ ಏಷ್ಯಾಕಪ್ ಆಗಿದೆ. ೨೦೧೪ರಲ್ಲಿ ೪೦೦ ಮೀಟರ್ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಕಂಚು ಹಾಗೂ ೪x೪೦೦ ರಿಲೇಯಲ್ಲಿ ಚಿನ್ನದ ಪದಕ ಹಾಗೂ ೨೦೧೮ರ ಏಷ್ಯನ್ ಗೇಮ್ಸ್ನಲ್ಲಿ ೪x೪೦೦ ರಿಲೇ ಹಾಗೂ ಮಿಕ್ಸೆಡ್ ರಿಲೇಯಲ್ಲಿ ಚಿನ್ನದ ಪದಕದ ಸಾಧನೆಯನ್ನು ಮಾಡಿರುವ ಪೂವಮ್ಮ ಈ ಬಾರಿಯೂ ಪದಕ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ೨೦೦೮ರ ಬೀಜಿಂಗ್ ಒಲಂಪಿಕ್ಸ್, ೨೦೧೮ರ ಬ್ರೆಜಿಲ್ ಒಲಂಪಿಕ್ಸ್ ಹಾಗೂ ೨೦೨೪ರ ಪ್ಯಾರಿಸ್ ಒಲಂಪಿಕ್ಸ್ನಲ್ಲೂ ಭಾರತವನ್ನು ಪ್ರತಿನಿಧಿಸಿರುವ ಪೂವಮ್ಮ ಕೊಡಗು ಮೂಲದ ಮತ್ತೋರ್ವ ಹೆಮ್ಮೆಯ ಕ್ರೀಡಾಪಟುವಾಗಿದ್ದಾರೆ. ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಅವರು, ಈ ಬಾರಿಯೂ ಉತ್ತಮ ಸಾಧನೆ ತೋರುವ ವಿಶ್ವಾಸ ವ್ಯಕ್ತಪಡಿಸಿದರು.
೪ ರಿಂದ ೫ ಪದಕ : ಬಾಕ್ಸಿಂಗ್ ಕೋಚ್ ಕುಟ್ಟಪ್ಪ
ಭಾರತ ಬಾಕ್ಸಿಂಗ್ ತಂಡದ ಹೆಡ್ಕೋಚ್ ಆಗಿರುವ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ತರಬೇತುದಾರ, ಕೊಡಗಿನವರಾದ ಚೇನಂಡ ವಿಶುಕುಟ್ಟಪ್ಪ ಅವರು ತಂಡವನ್ನು ಏಷ್ಯನ್ ಗೇಮ್ಸ್ನಲ್ಲಿ ಮುನ್ನಡೆಸುತ್ತಿದ್ದಾರೆ.
೬ ಮಂದಿ ಪುರುಷರು ಹಾಗೂ ೫ ಮಂದಿ ಮಹಿಳೆಯರು ಭಾರತ ಬಾಕ್ಸಿಂಗ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ ೪ ರಿಂದ ೫ ಪದಕಗಳನ್ನು ವಿವಿಧ ವಿಭಾಗಗಳಲ್ಲಿ ಭಾರತ ಗಳಿಸುವ ನಂಬಿಕೆ ಇರುವುದಾಗಿ ಕುಟ್ಟಪ್ಪ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಇವರಿಗೆ ಇದು ಇವರ ಗರಡಿಯಲ್ಲಿನ ಎರಡನೆಯ ಏಷ್ಯನ್ ಗೇಮ್ಸ್ ಕ್ರೀಡಾಕೂಟವಾಗಿದೆ. ಕುಟ್ಟಪ್ಪ ಅವರು ಒಲಂಪಿಕ್ಸ್ನಲ್ಲಿ ೨ ಬಾರಿ ಹೆಡ್ ಕೋಚ್ ಆಗಿ ಹಾಗೂ ಒಮ್ಮೆ ಸಹಾಯಕ ಕೋಚ್ ಆಗಿ ಭಾರತ ಪರ ಕಾರ್ಯನಿರ್ವಹಿಸಿದ್ದಾರೆ, ಭಾರತೀಯ ಸೇನೆಯಲ್ಲಿದ್ದ ಇವರು ಈ ಹಿಂದೆ ಸರ್ವಿಸಸ್ ಮೂಲಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಇದೀಗ ಕರ್ನಾಟಕ ರಾಜ್ಯದ ಮೂಲಕ ಪ್ರತಿನಿಧಿಸುತ್ತಿದ್ದಾರೆ.